November 3, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜ್ಯ/ದೇಶಸಾಮಾಜಿಕ/ಇತಿಹಾಸ

ಅರವತ್ತನಾಲ್ಕು ಕಲೆಗಳಲ್ಲಿ ಒಗಟು ಪ್ರಮುಖ ಕಲೆ ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಹಮ್ಮಿಕೊಂಡ ವಿಚಾರ ಸಂಕಿರಣದಲ್ಲಿ ಡಾ| ಪ್ರಭು ಅಂಗಡಿ ;

ವರದಿ ಚಿತ್ರ ರೋನ್ಸ್ ಬಂಟ್ವಾಳ್

ಮುಂಬೈ, : ಅರವತ್ತ ನಾಲ್ಕು ಕಲೆಗಳಲ್ಲಿ “ಒಗಟು” ಒಂದು ಪ್ರಮುಖ ಕಲೆಯಾಗಿ ತನ್ನಸ್ಥಾನವನ್ನು ಗಟ್ಟಿ ಮಾಡಿಕೊಂಡಿದೆ. ಒಬ್ಬರು ಮತ್ತೊಬ್ಬರಿಗೆ ಒಡ್ಡುವ ಸವಾಲು, ಒಂದು ವಸ್ತುವನ್ನು ಇನ್ನೊಂದು ವಸ್ತುವಿನ ಮುಖಾಂತರ ಮೋಡಿಯ ಮಾದರಿಯಲ್ಲಿ ರಚಿಸಿ ಅದರಲ್ಲಿ ಅಡಕವಾಗಿರುವ ಆ ಅವ್ಯಕ್ತ ವಸ್ತುವನ್ನು ವ್ಯಕ್ತ ರೂಪದಲ್ಲಿ ಕಂಡುಹಿಡಿಯುವಂತೆ ಹೇಳುವ ಕಾಲಾತ್ಮಕ ಕಲೆಯೇ “ಒಗಟು” ಆಗಿದೆ.

ಒಗಟಿನಲ್ಲಿ ಎರಡು ಸಮ ಸ್ವರೂಪದ ವಸ್ತುಗಳಿರಬೇಕು ಅದರಲ್ಲಿ ಒಂದು “ಉಪಮಾನ” ಇನ್ನೊಂದು “ಉಪಮೇಯ” ಆಗಿರುತ್ತದೆ. ” ಉಪಮಾನ ” ವಾಚ್ಯವಾಗಿರುತ್ತದೆ ಹಾಗೂ “ಉಪಮೇಯ” ನಿಗೂಡ ವಾಗಿರುತ್ತದೆ ಅಂದರೆ ಗುಟ್ಟಾಗಿರುತ್ತದೆ. ಆ ಗುಟ್ಟನ್ನು ರಟ್ಟು ಮಾಡುವಂತೆ ಹೇಳುವುದೇ “ಒಗಟು” ಆಗಿರುತ್ತದೆ.ಸಂಸ್ಕೃತದಲ್ಲಿ ಒಗಟಿಗೆ ‘ಪ್ರಹೇಲಿಕಾ’ ಅಥವಾ ‘ಬ್ರಹ್ಮಮೆಧ್ಯಾ’ ಅಂದರೆ, ರಹಸ್ಯ ಪೂರ್ಣ ಪ್ರಶ್ನೋತ್ತರ ವ್ಯವಹಾರದಲ್ಲಿ ನಿಗೂಢತೆಯನ್ನು ಉಪಯೋಗಿಸಿ ಸಾಮಾನ್ಯರಿಗೆ ಅರ್ಥವಾಗದ ಪದ್ಧತಿಯಲ್ಲಿ ಬಳಸುವ ಚಾಣಾಕ್ಷ ಕಲೆ ಒಗಟು ಎಂದು ಅರ್ಥವಿದೆ.

ಈಗಲೂ ರಾಜಕೀಯ ಸ್ತರದಲ್ಲಿ, ಧಾರ್ಮಿಕ ಸ್ವರೂಪದಲ್ಲಿ ಅಲ್ಲದೆ ಕಳ್ಳಸಾಗಾಣಿಕೆ ಸೇರಿದಂತೆ ಅನೇಕ ವ್ಯವಹಾರದಲ್ಲಿ ತಮ್ಮದೇ ಆದಂತ “ಒಗಟಿ”ನ ಭಾಷೆಯಲ್ಲಿ ಬಳಸುವುದನ್ನು ನಾವು ಗಮನಿಸಬಹುದಾಗಿದೆ. ಒಂದು ಕಣ್ಣಿದೆ, ಆದರೆ ಕಾಗೆಯಲ್ಲ, ಅದಕ್ಕೆ ಬಿಲ ಬೇಕು ಆದರೆ ಹಾವಲ್ಲ, ಅದು ಹಿಗ್ಗುತ್ತದೆ ಕುಗ್ಗುತ್ತದೆ ಆದರೆ ಕಡಲಲ್ಲ – ಚಂದ್ರಮಾನು ಅಲ್ಲ ಹಾಗಾದರೆ ಮತ್ತೆನು…? ಈ ಒಗಟು “ಸೂಜಿ-ದಾರ”ದ ಕಥೆಯನ್ನು ಹೇಳುತ್ತದೆಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಮುಂಬೈ ಹಾಗೂ ಎ.ಎನ್.ಬಿ ಮೆಮೋರಿಯಲ್ ಟ್ರಸ್ಟ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ನ “ಕುವೆಂಪು ಸಭಾಂಗಣ”ದಲ್ಲಿ ಇತ್ತೀಚೆಗೆ ಹಮ್ಮಿಕೊಂಡ “ಒಗಟುಗಳು ಹಾಗೂ ಜಾನಪದ ವೈವಿದ್ಯ” ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಒಗಟಿನ ಕುರಿತು “ಒಗಟುಗಳು ಕಾಲಕ್ಕೆ ತಕ್ಕಂತೆ ತನ್ನತನವನ್ನು ಬದಲಾಯಿಸಿಕೊಳ್ಳುತ್ತವೆ.

ಅವುಗಳನ್ನು ಬಳಸುವ ವ್ಯಕ್ತಿಗಳ ಜಾಣ್ಮೆಯ ಪ್ರತಿ ಬಿಂಬಗಳಾಗಿ ಅವುಗಳು ಮೂಡುತ್ತವೆ” ಎಂದು ಹಿರಿಯ ವಿದ್ವಾಂಸರಾದ ಡಾ | ಪ್ರಭು ಅಂಗಡಿಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಡಾ| ಋಷಿದೇವ್ ಭಾರ್ಗವ ಪುರಾಣ ಹಾಗೂ ಸಂಸ್ಕೃತ ಸಾಹಿತ್ಯದಲ್ಲಿ ಒಗಟು ಯಾವ ರೀತಿ ಬಳಕೆಯಾಗಿದೆ ಎಂಬುದನ್ನು ತಿಳಿಸಿದರು.

ಇನ್ನೊರ್ವ ಸಂಪನ್ಮೂಲವ್ಯಕ್ತಿಗಳಾದ ಡಾ| ಮೈಥಿಲರಾವ್ ತಮ್ಮ ಅಭಿಪ್ರಾಯ ಮಂಡಿಸುತ್ತಾ, ಉತ್ತರ ಭಾರತ ಹಾಗೂ ಹಿಂದಿ ಭಾಷೆಯಲ್ಲಿರುವ ವಿವಿಧ ಒಗಟಿನ ಬಳಕೆ ಕುರಿತು ಮಾಹಿತಿ ಹಂಚಿಕೊಂಡರು.ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದ ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಮಧುಸೂದನ್ ಟಿ.ಆರ್. ಅವರು “ಎ.ಎಸ್ ಬಿ ಮೆಮೋರಿಯಲ್ ಟ್ರಸ್ಟಿನ ಅಧ್ಯಕ್ಷರಾದ ಹಿರಿಯ ಅವಿಶ್ರಾಂತ ಜಿಜ್ಞಾಸು ಶ್ರೀ ಆಗುಂಬೆ ನಟರಾಜ್ ಅವರ ೮೪ ಇಳಿ ವಯಸ್ಸಿನಲ್ಲೂ ತುಂಬಿ ತುಳುಕುತ್ತಿರುವ ಅವರ ಜೀವನೋತ್ಸಾಹ, ಇನ್ನೂ ತಿಳಿದು ಕೊಳ್ಳಬೇಕೆಂಬ ಹಂಬಲಗಳು, ಕುತೂಹಲಗಳು ಯುವ ಜನತೆಗೆ ಮಾದರಿಯಾಗಿದೆ” ಎಂದು ಹೇಳಿದರು.

“ನಾವುಗಳು ತಂತ್ರಜ್ಞಾನದ ಕಪಿಮುಷ್ಠಿಯಲ್ಲಿ ಬಂದಿಯಾಗುತ್ತಿದ್ದೆವೆ ಇಂತ ಸಂದರ್ಭದಲ್ಲಿ ನಮ್ಮ ಪೂರ್ವಜರ ಅಪರೂಪದ ಜ್ಞಾನ ಸಂಪತ್ತಾದ ಜಾನಪದದ ಕುರಿತು ತಿಳಿದುಕೊಳ್ಳಲು ಸೇರಿದ್ದೆವೆ. ಈ ಒಗಟು ಎನ್ನುವ ಜಾನಪದ ಕಲಾ ಪ್ರಕಾರ ಮೈ, ಮನಗಳಿಗೆ ಇಂಪನ್ನು ನೀಡುವುದರೊಂದಿಗೆ ಬುದ್ದಿಯನ್ನು ಜಾಗೃತ ಗೊಳಿಸಿ ರಹಸ್ಯ ಲೋಕಕ್ಕೆ ಕೊಂಡು ಹೋಗುತ್ತದೆ. ನಮ್ಮನ್ನು ಕೂತುಹಲಿಗಳನ್ನಾಗಿ ಮಾಡಿ ನಮ್ಮಲ್ಲಿ ಹೊಸ ಚೈತನ್ಯ ಮೂಡಿಸುವ ಶಕ್ತಿ “ಒಗಟು” ಎನ್ನುವ ಜಾನಪದ ಕಲಾ ಪ್ರಕಾರಕ್ಕೆ ಇದೆ” ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅವರು ತಿಳಿಸಿದರು.

ಕನ್ನಡ ಸಂಪದದ ಒಂಕಾರಪ್ರಿಯ ಬಾಗೇಪಲ್ಲಿ ಅವರು ಒಗಟು ಎನ್ನುವ ಜಾನಪದ ಕಲೆ ಯಾವ ರೀತಿ ಒತ್ತಡವನ್ನು ಕಡಿಮೆ ಮಾಡಿ ನಮ್ಮ ಆರೋಗ್ಯಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡುತ್ತದೆ ಎನ್ನುವುದನ್ನು ವಿವರಿಸಿದರು. ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ ದೊಡ್ಮನೆ ಪ್ರತಿಷ್ಠಾನವ ಕಾರ್ಯ ಚಟುವಟಿಕೆ ವಿವರಿಸಿ ಕಾರ್ಯಕ್ರಮದ ಮೂಲ ಆಶಯ ತಿಳಿಸಿದರು. ಎ ಎನ್ ಬಿ ಟ್ರಸ್ಟ್ ನ ಆಗುಂಬೆ ನಟರಾಜ ಅವರು ಗಾದೆ ಹಾಗೂ ಒಗಟು ತನ್ನ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ವಿವರಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಕುಮಾರಿ ನಿಶಿತಾ ಜಿ.ಆರ್ ಅವರಿಂದ ಗೀತಗಾಯನ ಹಾಗೂ ಕುಮಾರಿ ಪ್ರಣತಿ ಅವರಿಂದ ಜಾನಪದ ನೃತ್ಯ ಕಾರ್ಯಕ್ರಮ ನಡೆಯಿತು. ಶ್ರೀ ಕೇಶವ ಕಿಬ್ಳೆ ಅವರು ಎಲ್ಲರನ್ನು ಸ್ವಾಗತಿಸಿದರು. ಶ್ರೀಕಲಾ ಹಂಸ ಕಾರ್ಯಕ್ರಮ ನಿರೂಪಿಸಿ ಮದನಾರ್ಪಣೆ ಮಾಡಿದರು. ಸಿರಿಕಲಾ ಮೇಳದ ಸರೇಶ ಹೆಗಡೆ‌, ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಸಾಹಿತಿ ವಿಶ್ವನಾಥ, ಸತೀಶ ಕುಮಾರ ಕೆ ಸಿ ಮುಂತಾದ ಗಣ್ಯರು ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Related posts

ಶ್ರೀ ಧಾಮ ಮಾಣಿಲ ಕ್ಷೇತ್ರದಲ್ಲಿ 48 ದಿನಗಳ ಲಕ್ಷ್ಮೀ ಪೂಜೆ ಹಾಗೂ ಶ್ರೀ ವರಮಹಾಲಕ್ಷ್ಮೀ ವೃತಾಚರಣೆ: ಇದರ ಪ್ರಯುಕ್ತ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ;

Voiceoftulunadu

ಪೊಳಲಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ) ಇದರ ವಾರ್ಷಿಕ ಮಹಾಸಭೆ ;

Voiceoftulunadu

ಉಡುಪಿಯ ಡಾ. ರಾಜಲಕ್ಷ್ಮಿ ಅವರ “ವಾತ್ಸಲ್ಯದ ಒಸಗೆ” ಕೃತಿ ರಾಜ್ಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ : ಪ್ರಶಸ್ತಿ ಪ್ರದಾನಿಸಲಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಸುರೇಶ್‌ ಹನಗವಾಡಿ;

Voiceoftulunadu

Leave a Comment