ವರದಿ/ ಚಿತ್ರ: ರೋನ್ಸ್ ಬಂಟ್ವಾಳ್
ಮುಂಬಯಿ / ಕಾಸರಗೋಡು : ಕಾಸರಗೋಡು ಉಪ್ಪಳ ಅಲ್ಲಿನ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಮಠದಲ್ಲಿ ವಾರ್ಷಿಕ ಶರನ್ನವರಾತ್ರಿ ಉತ್ಸವವು ವಿಜಯದಶಮಿ ವರೆಗೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ನಡೆದವು.
ವಿದ್ಯಾರ್ಥಿಗಳ ವಿದ್ಯಾಭ್ಯುದಯಕ್ಕಾಗಿ ಸರಸ್ವತೀ ಹವನ, ಶಾರದಾ ಪ್ರತಿಷ್ಠೆ ವಾಹನ ಪೂಜೆ, ವಿಜಯ ದಶಮಿ ಅಂದು ಸಾನಿಧ್ಯ ಗಾಯತ್ರಿ ಮಾತೆಗೆ ವಿಶೇಷ ಸೀಯಾಳಾಭಿಷೇಕ, ತೆನೆಪೂಜೆ, ಪೂಜ್ಯರ ಅಮೃತಹಸ್ತದಿಂದ ವಿದ್ಯಾರ್ಥಿಗಳ ಅಕ್ಷರಾಭ್ಯಾಸ, ಮಹಾನವಮಿ ದಿನದಂದು ಶಾರದಾ ವಿಸರ್ಜನೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ಒಂಬತ್ತು ದಿನಗಳ ಕಾಲ ವಿಜೃಂಭಣೆಯಿಂದ ನಡೆದ ವಾರ್ಷಿಕ ಶರನ್ನವರಾತ್ರಿ ಉತ್ಸವವು ಅತ್ಯಂತ ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಂಡಿತು.
ನವರಾತ್ರಿಯ ಈ ವಿಶೇಷ ದಿನಗಳಲ್ಲಿ ಪ್ರತಿದಿನ ದೇವಿಗೆ ವಿವಿಧ ಅಲಂಕಾರ, ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ವಿಜಯದಶಮಿಯ ದಿನದಂದು ಬನ್ನಿ ಮುಡಿಯುವ ಮೂಲಕ ಹಾಗೂ ಭಕ್ತರ ಹರ್ಷೋದ್ಗಾರದೊಂದಿಗೆ ನವರಾತ್ರಿ ಉತ್ಸವವು ಮಂಗಳಕರವಾಗಿ ಮುಕ್ತಾಯವಾಯಿತು.
ಈ ಹಬ್ಬವು ಸಮಾಜದಲ್ಲಿ ಧಾರ್ಮಿಕ ಭಾವನೆ, ಶಾಂತಿ, ಸಾಮರಸ್ಯ ಹಾಗೂ ಸಂಸ್ಕೃತಿಯ ಉಳಿವಿಗೆ ಅಪಾರ ಪ್ರೇರಣೆಯನ್ನು ನೀಡಲಿ ಎಂದು ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ ಎಂದರು.
ಕೊಂಡೆವೂರಿನ ನಾದನಿನಾದ ಸಂಗೀತ ತರಬೇತಿ ಕೇಂದ್ರದಿಂದ ಸಂಗೀತಾರ್ಚನೆ, ಸವಿಜೀವನಂ ನೃತ್ಯ ಕಲಾ ಟ್ರಸ್ಟ್ ಮಂಗಳೂರು ಇದರ ವಿದ್ಯಾರ್ಥಿಗಳಿಂದ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಧುರ ಭಗವನ್ನಾಮದ ಹಿನ್ನಲೆಯಲ್ಲಿ ನೃತ್ಯ ಸಿಂಚನ ಸೇವೆ ನಡೆಸಿಕೊಟ್ಟರು. ಶಾರದಾ ವಿಸರ್ಜನಾ ಕಾರ್ಯಕ್ರಮದಲ್ಲಿ ಕಾಸರಗೋಡು ಲೋಕಸಭಾ ಕ್ಷೇತ್ರದ ಸಂಸದ ರಾಜಮೋಹನ್ ಉಣ್ಣಿತ್ತಾನ್ ರವರು ಪಾಲ್ಗೊಂಡರು.
