ಕೃಪೆ : ಈ ಮೀಡಿಯಾ
ಉಡುಪಿ : ನವೆಂಬರ್ 1 ಕೇವಲ ಒಂದು ದಿನಾಂಕವಲ್ಲ. ಅದು ಕನ್ನಡಿಗರ ಸ್ವಾಭಿಮಾನ, ಹೋರಾಟ, ಮತ್ತು ನಾಡಪ್ರೇಮದ ಸಂಕೇತ, ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಮೈಗೂಡಿಸಿಕೊಂಡಿರುವ ಪ್ರತಿಯೊಬ್ಬ ಕನ್ನಡಿಗನಿಗೂ ಇದು ಹೆಮ್ಮೆಯ ದಿನ.19560 ನವೆಂಬರ್ ರಂದು ವಿವಿಧ ಪ್ರದೇಶಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ವಿಶಾಲ ಮೈಸೂರು ರಾಜ್ಯವನ್ನು ರಚಿಸಲಾಯಿತು.
1973 d ನವೆಂಬರ್ 1ರಂದು ಅದಕ್ಕೆ ‘ಕರ್ನಾಟಕ’ಎಂದು ಮರು ನಾಮಕರಣ ಮಾಡಲಾಯಿತು. ಈ ಐತಿಹಾಸಿಕ ಘಟನೆ ಕನ್ನಡಿಗರ ಬಹುದಿನಗಳ ಕನಸಿಗೆ ಸಾಕಾರ ರೂಪ ನೀಡಿತು.ಕರ್ನಾಟಕವೆಂದರೆ ಕೇವಲ ಭೌಗೋಳಿಕ ಪ್ರದೇಶವಲ್ಲ. ಅನೇಕ ಭಾಷೆ, ಧರ್ಮ, ಜಾತಿ ಮತ್ತು ಸಂಸ್ಕೃತಿಗಳ ಸಂಗಮಭೂಮಿ.
ಬಸವಣ್ಣನವರ ಸಮಾನತೆಯ ಸಂದೇಶ, ಕುವೆಂಪು ಅವರ ವಿಶ್ವಮಾನವ ಪರಿಕಲ್ಪನೆ, ಕನಕದಾಸರ ಮಾನವೀಯ ಚಿಂತನೆ, ರಾಷ್ಟ್ರಕವಿ ಕುವೆಂಪು ಅವರ ‘ಸರ್ವಜನಾಂಗದ ಶಾಂತಿಯ ತೋಟ’ ಇದು ಎಂಬ ಆಶಯ ನಮ್ಮ ನಾಡಿನ ಆತ್ಮವನ್ನು ಪ್ರತಿಬಿಂಬಿಸುತ್ತದೆ.
ಉರ್ದು ಮತ್ತು ದಖನಿ ಸಾಹಿತ್ಯ,ಸಂಗೀತ ಹಾಗೂ ಸೂಫಿ ಪರಂಪರೆಯೂ ಕರ್ನಾಟಕದ ಸಾಂಸ್ಕೃತಿಕ ವೈವಿಧ್ಯಕ್ಕೆ ಶ್ರೀಮಂತಿಕೆ ನೀಡಿವೆ.ಕರ್ನಾಟಕವು ಹಿಂದೂ, ಮುಸ್ಲಿಮ್, ಕ್ರೈಸ್ತ, ಜೈನ ಮತ್ತು ಇತರ ಎಲ್ಲಾ ಸಮುದಾಯಗಳ ಪರಿಶ್ರಮ, ತ್ಯಾಗ ಮತ್ತು ಸಹಕಾರದಿಂದ ರೂಪುಗೊಂಡ ಸಾಮೂಹಿಕ ಪರಂಪರೆಯಾಗಿವೆ.
ಕನ್ನಡ ಭಾಷೆ ನಮ್ಮ ಹೆಮ್ಮೆ ನಮ್ಮ ಅಸ್ಮಿತೆ. ಕನ್ನಡವನ್ನು ಮಾತನಾಡುವುದು, ಓದುವುದು, ಬರೆಯುವುದು ಮತ್ತು ಮುಂದಿನ ಪೀಳಿಗೆಗೆ ಕಲಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ. ಆದರೆ ಭಾಷಾಭಿಮಾನವೆಂದರೆ ಅನ್ಯ ಭಾಷೆಗಳನ್ನು ದ್ವೇಷಿಸುವುದಲ್ಲ. ನಮ್ಮ ಭಾಷೆಯನ್ನು ಪ್ರೀತಿಸುತ್ತಲೇ ಇತರ ಭಾಷೆಗಳನ್ನೂ ಗೌರವಿಸುವ ವಿಶಾಲ ಮನೋಭಾವ ಬೆಳೆಸಿಕೊಳ್ಳುವುದಾಗಿದೆ.
ಇಂದು ಕರ್ನಾಟಕ ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಕೃಷಿ, ಕೈಗಾರಿಕೆ ಮತ್ತು ಸಾಹಿತ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದೇಶಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ. ಆದರೂ ಬಡತನ, ನಿರುದ್ಯೋಗ, ರೈತರ ಸಂಕಷ್ಟ,ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿನಅಸಮಾನತೆ, ಪರಿಸರ ನಾಶ ಮುಂತಾದಸವಾಲುಗಳು ನಮ್ಮ ಮುಂದಿವೆ.
ರಾಜ್ಯೋತ್ಸವವನ್ನು ಕೇವಲ ಸಿಹಿ ಧ್ವಜಾರೋಹಣ, ಹಂಚಿಕೆ, ಸಾಂಸ್ಕೃತಿಕ ಮೆರವಣಿಗೆ ಮತ್ತು ಕಾರ್ಯಕ್ರಮಗಳಿಗೆಸೀಮಿತಗೊಳಿಸಬಾರದು. ನಾಡಿನ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ದುಡಿಯುವ ಸಂಕಲ್ಪದ ದಿನವನ್ನಾಗಿ ಆಚರಿಸಬೇಕು. ಕನ್ನಡ ಶಾಲೆಗಳನ್ನು ಉಳಿಸಬೇಕು. ರೈತರ ಬದುಕನ್ನು ಹಸನಾಗಿಸಬೇಕು. ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ಮಹಿಳೆಯರಿಗೆ ಸಮಾನ ಗೌರವ ನೀಡಬೇಕು ಮತ್ತು ಪ್ರಕೃತಿಯ ಸಂಪತ್ತನ್ನು ಸಂರಕ್ಷಿಸಬೇಕು.
ಧರ್ಮಗಳು ಬೇರೆಬೇರೆಯಾಗಿರಬಹುದು, ಆರಾಧನಾ ವಿಧಾನಗಳು ವಿಭಿನ್ನವಾಗಿರಬಹುದು. ಆದರೆ ನಮ್ಮೆಲ್ಲರ ತಾಯ್ತಾಡು ಒಂದೇ ಕರ್ನಾಟಕ, ಪರಸ್ಪರ ಗೌರವ, ಸಹಬಾಳ್ವೆ ಮತ್ತು ಸಹೋದರತ್ವವೇ ನಮ್ಮ ನಾಡಿನ ನಿಜವಾದ ಶಕ್ತಿ.
ನಮ್ಮ ಕನ್ನಡ ನಾಡು ಕೇವಲ ಶ್ರೀಮಂತ ಇತಿಹಾಸ ಹೊಂದಿರುವ ನಾಡಾಗಿರದೆ, ನ್ಯಾಯ, ಸಮಾನತೆ, ಶಾಂತಿ, ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳಲ್ಲಿ ಇಡೀ ದೇಶಕ್ಕೆ ಮಾದರಿಯಾಗಲಿ.ಕನ್ನಡದ ಕಂಪು ಎಲ್ಲೆಡೆ ಹರಡಲಿ. ಕರ್ನಾಟಕದ ಕೀರ್ತಿ ವಿಶ್ವದಾದ್ಯಂತ ಬೆಳಗಲಿ.ಸಿರಿಗನ್ನಡಂ ಗೆಲ್ಲೆ! ಸಿರಿಗನ್ನಡಂ ಬಾಳೆ!ಜೈ ಕರ್ನಾಟಕ!
ಬರಹ : ಅನ್ವರ್ ಅಲಿ. ಕಾಪು
