November 3, 2026
Uncategorizedಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸ

ಮುಂಬಯಿ ; ಕೊಂಕಣ್ ಅಸೋಸಿಯೇಶನ್ ಚಾರಿಟೇಬಲ್ ಟ್ರಸ್ಟ್‌ನಿಂದ ಸಂತಾಪ ಸಭೆ : ಬೆನೆಡಿಕ್ಟಾ ರೆಬೆಲ್ಲೊ ಸತ್ಕಾರ್ಯಗಳು ಆದರ್ಶಪ್ರಾಯ : ಫಾ| ಎಲಿಯಾಸ್ ಡಿಸೋಜಾ ;

ವರದಿ/ ಚಿತ್ರ : ರೋನ್ಸ್ ಬಂಟ್ವಾಳ್

ಮುಂಬಯಿ, ಅ.31: ಕರ್ಮಭೂಮಿಯಲ್ಲಿನ ವಿವಿಧ ಸಾಮಾಜಿಕ, ಶಿಕ್ಷಣ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಮುದ್ರೆಯೊತ್ತಿ, ಸಮಾಜದ ಸರ್ವತೋಮುಖ ಪ್ರಗತಿಗೆ ನಿರಂತರ ಶ್ರಮಿಸಿದ ಬೆನ್ನಿಬಾಯಿ ಪ್ರಸಿದ್ಧಿಯ ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಸರಳ,ಸಜ್ಜನ, ಮೃದು ಸ್ವಾಭಾವದ ನಿಪುಣ ಸಂಘಟಕಿಯಾಗಿ ಸಂಸ್ಥೆಗಳಲ್ಲಿ ಅನುಪಮ ಸೇವೆ ಸಲ್ಲಿಸಿ ಯಶಸ್ವಿಯಾಗಿ ಮುನ್ನಡೆಸಿದ ಇವರು, ಕೊಂಕಣಿ, ತುಳು ಹಾಗೂ ಕನ್ನಡ ಭಾಷೆಗಳ ಪೋಷಣೆ ಮತ್ತು ಬೆಳವಣಿಗೆಗೆ ಸಲ್ಲಿಸಿದ ಅಪ್ರತಿಮ ಸೇವೆ ಎಂದೆಂದಿಗೂ ಸ್ಮರಣೀಯ ಎಂದು ಧರ್ಮಗುರು ರೆ| ಫಾ| ಎಲಿಯಾಸ್ ಡಿಸೋಜಾ (ಕಿನ್ನಿಗೋಳಿ) ತಿಳಿಸಿದರು.

ಕಾರ್ಕಳ ಮಿಯಾರ್ ಮೂಲತಃ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ, ಸಮಾಜ ಸೇವಕಿಯಾಗಿದ್ದು ಮಹಾರಾಷ್ಟ್ರ ಕೊಂಕಣ್ ಅಸೋಸಿಯೇಶನ್‌ನ (ಕೊಂಕಣ್ ಅಸೋಸಿಯೇಶನ್ ಚಾರಿಟೇಬಲ್ ಟ್ರಸ್ಟ್-ಕೆಎಸಿಟಿ) ಸ್ಥಾಪಕ ಅಧ್ಯಕ್ಷೆ, ಮಾಡೆಲ್ ಕೋ.ಆಪರೇಟಿವ್ ಬ್ಯಾಂಕ್‌ನ ಮಾಜಿ ನಿರ್ದೇಶಕಿ, ಮೆಂಗ್ಳೂರಿಯನ್ ವೆಲ್ಫೇರ್ ಅಸೋಸಿಯೇಶನ್ ಮುಂಬಯಿ, ಕೊಂಕಣಿ ಸಭಾ ಮುಲುಂಡ್, ಪಾಸ್ಕ್ ಮತ್ತು ಕೊಂಕಣಿ ಭಾಷಾ ಮಂಡಳ್ ಸೇರಿದಂತೆ ಹತ್ತು ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದು ಸಾಮಾಜಿಕ ಚಿಂತಕರೆಣಿಸಿ, ದಕ್ಷ ಸಂಘಟಕರಾಗಿದ್ದು ಕೊಂಕಣಿ, ತುಳು-ಕನ್ನಡದ ಮೂಲಕ ಸರ್ವೋನ್ನತ ಸೇವೆಗೈದು ಇತ್ತೀಚೆಗೆ ಆಗಲಿದ ಧೀಮಂತ ಚೇತನ ಬೆನೆಡಿಕ್ಟಾ ರೆಬೆಲ್ಲೊ ಅವರಿಗೆ ಆಯೋಜಿಸಿದ ಸಂತಾಪ ಸಭೆಯಲ್ಲಿ ಅನುಗ್ರಹನುಡಿಗಳನ್ನಾಡಿ ಫಾ| ಎಲಿಯಾಸ್ ಎಂದೇಳಿ ಬಾಷ್ಪ್ಪಾಂಜಲಿ ಅರ್ಪಿಸಿದರು.

ಆದಿಯಲ್ಲಿ ಸೈಂಟ್ ಜೂಡ್ ಚರ್ಚ್‌ನಲ್ಲಿ ಇಲ್ಲಿನ ಧರ್ಮಗುರು ರೆ| ಫಾ| ಜೋನ್ ಬ್ರಿಟ್ಟೊ ಮತ್ತು ಡೀಕಾನ್ ಜೋನ್ ಸೆರಾವೋ ಆರಂಭದಲ್ಲಿ ಆಗಲಿದ ದಿವ್ಯಾತ್ಮಕ್ಕೆ ಬಲಿಪೂಜೆಯನ್ನು ನೆರವೇರಿಸಿ ಪ್ರಾರ್ಥನೆಗೈದರು.ಭಾಷಿಕ ಮತ್ತು ಸಾಂಸ್ಕೃತಿಕ ಗಡಿಗಳನ್ನು ಮೀರಿ, ಸೌಹಾರ್ದಯುತ ಸಮಾಜ ನಿರ್ಮಾಣಕ್ಕಾಗಿ ಅವರು ತಳೆದ ಬದ್ಧತೆ ಪ್ರತಿಯೊಬ್ಬರ ಮನದಲ್ಲೂ ಹಸಿರಾಗಿ ಉಳಿಯಲಿದೆ.

ಅವರ ಮುಂದಾಳುತ್ವ ಗುಣ ಮತ್ತು ವೈಚಾರಿಕ ನಿಲುವುಗಳು ಮುಂಬರುವ ಪೀಳಿಗೆಗೆ ಪ್ರೇರಣೆಯಾಗಿವೆ ಎಂದು ಹಿರಿಯ ರಂಗನಟ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ತಿಳಿಸಿದರು.ದಿವೋ ಕೊಂಕಣಿ ಸಾಪ್ತಾಹಿಕದ ಸಂಪಾದಕ ಲಾರೇನ್ಸ್ ಕುವೆಲ್ಹೋ ಮಾತನಾಡಿ ಕೊಂಕಣಿ ಸಮಾಜಕ್ಕೆ ದಿವಂಗತರ ಕೊಡುಗೆ ಅನನ್ಯ. ಸದಾ ಸಮಾಜದ ಒಳಿತಿಗಾಗಿ ಚಿಂತಿಸುತ್ತಾ, ಎಲ್ಲರನ್ನು ಒಗ್ಗೂಡಿಸಿ ಕೊಂಡೊಯ್ಯುತ್ತಿದ್ದ ಅವರ ಸೇವಾ ಮನೋಭಾವವು ನಿಷ್ಕಲಂಕವಾಗಿದೆ.

ನಮ್ಮ ಪತ್ರಿಕೆಯ ಬಲುದೊಡ್ಡ ಹಿತೈಷಿಯಾಗಿ ಸಹಕರಿಸಿರುವರು ಎಂದೇಳಿ ಶ್ರದ್ಧಾಂಜಲಿ ಅರ್ಪಿಸಿದರು. ಕೆಎಸಿಟಿ ಅಧ್ಯಕ್ಷ ಲಿಯೋ ಫೆರ್ನಾಂಡಿಸ್ ಜೆರಿಮೆರಿ ಅವರು ಬೆನೆಡಿಕ್ಟಾ ರೆಬೆಲ್ಲೊ ಅವರ ಸೇವಾ ಸಾಧನೆಯನ್ನು ಮೆಚ್ಚುಗೆ ಪಡಿಸಿ ಗುಣಗಾನಗೈದ, ನಾವು ಸಲ್ಲಿಸುವ ಈ ನುಡಿನಮನ ಅವರ ಸತ್ಕಾರ್ಯಗಳು ಮತ್ತು ಆದರ್ಶಪ್ರಾಯ ಜೀವನಕ್ಕೆ ಸಲ್ಲಿಸುವ ಅನಂತ ಪ್ರಣಾಮಗಳು. ಅವರ ಉದಾರತ್ವದಿಂದ ಸ್ಥಾಪನೆಗೊಂಡ ಈ ಸಂಸ್ಥೆ ಇಂದು ಜನಪರ ಸೇವೆಯಲ್ಲಿ ತೊಡಗಿದೆ. ಇಂತಹ ನಿಸ್ವಾರ್ಥ ಸೇವೆ ಅವರ ಕೊಡುಗೆಗೆ ಸಂದ ಗೌರವವಾಗಿದೆ. ಅವರ ಸಹೃದಯತೆ, ಸಾಮರಸ್ಯದ ದ್ಯೋತಕವಾಗಿದೆ ಎಂದು ತನ್ನ ಮನದಾಳದ ಅನುಭವ ಭಿತ್ತರಿಸಿ ಸಾರ್ವಜನಿಕವಾಗಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.

ಕೊಂಕಣಿ ಕಾರ್ಯಕ್ರಮಗಳಲ್ಲಿ ತುಂಬಾ ಸಕ್ರಿಯವಾಗಿದ್ದ ಬೆನ್ನಿ ಬಾಯ್ ನಾಮಂಕಿತರು ಓರ್ವ ಶಿಕ್ಷಕರಾಗಿ ಸಾವಿರಾರು ಜನರ ಭವಿಷ್ಯ ಉಜ್ವಲಗೊಳಿಸಿದವರು. ಅವರ ದಾಂಪತ್ಯ ಬದುಕು, ಅನ್ಯೋನ್ಯತಾಭಾವ ಪ್ರಸ್ತುತ ಯುವ ಜನತೆಗೆ ಆದರ್ಶವಾಗಿದೆ. ಅನೇಕರ ಭವಿಷ್ಯವನ್ನು ರೂಪಿಸಿದ ಹಿರಿಯಮ್ಮನ ಆಗಲುವಿಕೆ ಬೇಸರ ತಂದಿದೆ ಎಂದು ಫ್ಲೋರಾ ಡಿ’ಸೋಜಾ ಕಲ್ಮಾಡಿ (ಜೆರಿಮೆರಿ) ತಿಳಿಸಿದರು.

ಮಿಲಿಯಂ ಡಿಸೋಜಾ ವಕೋಲಾ, ರೋನ್ಸ್ ಬಂಟ್ವಾಳ್, ಡೊರಾ ರೇಗೋ ಅಂಬೋಲಿ, ಜೋಯ್ ಡಿಸೋಜಾ ಪೊವಾಯಿ ಮತ್ತಿತರರೂ ಮಾತನಾಡಿ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಕೋರಿದರು.

ಈ ಸಂದರ್ಭದಲ್ಲಿ ಜೆಸ್ಸಿ ಡಿಸಿಲ್ವಾ ಮಹಾಕಾಳಿ, ಡಾಯನ್ ಡಿಸೋಜಾ ವಿರಾರ್, ಡೇವಿಡ್ ಕ್ಯಾಸ್ತೆಲಿನೋ ವಿರಾರ್, ಕ್ಲೋಡಿ ಫ್ರಾನ್ಸಿಸ್ ಮೊಂತೆರೋ, ಪೌಲ್ ಮಸ್ಕರ್‍ಹೇನಸ್, ಜೋನ್ ಮಸ್ಕರ್‍ಹೇನಸ್ ಜೆರಿಮೆರಿ, ಜಯವೀರಾ ಸಿ. ಮೊಂತೆರೋ, ಮಾರ್ಸಿ ಲೋಬೊ (ನಿಶಾ ಟ್ರಾವೆಲ್ಸ್), ಕ್ಲಾರಾ ಕೊನ್ಸೆಸೋ, ಸುಜಾನ್ಹಾ ಕುವೆಲ್ಲೊ, ಕೆಎಸಿಟಿ ಉಪಾಧ್ಯಕ್ಷ ವಾಲ್ಟರ್ ಡಿಸೋಜಾ ಕಲ್ಮಾಡಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಬಿ.ಸಿ ಆಳ್ವ, ವಿನ್ಸೆಂಟ್ ಕಾಸ್ತೆಲಿನೋ, ಲಿಲ್ಲಿ ಲಿಯೋ ಫೆರ್ನಾಂಡಿಸ್, ಜೋನ್ ರೋಡ್ರಿಗಸ್, ಎಲಿಯಾಸ್ ಪಿಂಟೊ ಸೇರಿದಂತೆ ಮಹಾನಗರದಲ್ಲಿನ ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು, ಸದಸ್ಯರನೇಕರು ಹಾಜರಿದ್ದು ಮೃತರ ಭಾವಚಿತ್ರಕ್ಕೆ ಪುಷ್ಪವೃಷ್ಠಿಗೈದು ಚರಮಾಂಜಲಿಗೈದರು.

Related posts

ಗ್ಲಾಸ್ಗೋ ; 2026ರ ಕಾಮನ್‌ವೆಲ್ತ್ ಗೇಮ್ಸ್-ಪ್ರಿಯಾಂಜಲಿ ರಾವ್ ಪರ್ಫಾರ್‌ಮನ್ಸ್;

Voiceoftulunadu

ಕಾಪು ಬಿಜೆಪಿ ಮಹಿಳಾ ಮೋರ್ಚಾ, ಹಿರಿಯಡ್ಕ ಶಕ್ತಿ ಕೇಂದ್ರದ ವತಿಯಿಂದ ಸ್ವಚ್ಚತಾ ಕಾರ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ;

Voiceoftulunadu

ಸೌದಿ ಅರೇಬಿಯಾ ಬಿಲ್ಲವರ ಅಸೋಸಿಯೇಷನ್ : ಆ.16 ರಂದು ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವಿತರಣೆ :

Voiceoftulunadu

Leave a Comment