ವರದಿ/ ಚಿತ್ರ : ರೋಶನ್ ನೆಲ್ಲಿಗುಡ್ಡೆ

ಮೂಲ್ಕಿ : ಜನವಸತಿ ಪ್ರದೇಶ, ದೈವ-ದೇವರ ಗುಡಿಗಳು, ಶಾಲಾ ವಠಾರ, ಕುಡಿಯುವ ನೀರಿನ ಅರಿವು ಇರುವ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣವಾಗುತ್ತಿರುವ ದ್ರವ ತ್ಯಾಜ್ಯ ಘಟಕವನ್ನು ನಿರ್ಮಿಸಲು ಜನಪ್ರತಿನಿಧಿಗಳ ಆಡಳಿತ ಇಲ್ಲದ ಸಮಯದಲ್ಲಿ ಅನುಮತಿ ನೀಡಿದ ಅಧಿಕಾರಿ ಯಾರು ಎಂದು ಬಹಿರಂಗವಾಗಬೇಕು, ಜನರ ನೆಮ್ಮದಿ ಕೆಡಿಸುತ್ತಿರುವ ಇಂತಹ ಘಟಕಕ್ಕೆ ಎಲ್ಲರ ವಿರೋಧವಿದ್ದು ರಾಜಕೀಯ ರಹಿತವಾಗಿ ಹೋರಾಟ ನಿಲ್ಲುವುದಿಲ್ಲ ಎಂದು ಪರಿಸರ ಮತ್ತು ಪ್ರವಾಸೋದ್ಯಮ ಮಂಡಳಿಯ ಅಧ್ಯಕ್ಷೆ ಶಾಲೆಟ್ ಪಿಂಟೋ ಹೇಳಿದರು.

ಅವರು ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಕಚೇರಿಯ ಮುಂದೆ ಮೆನ್ನಬೆಟ್ಟುವಿನಲ್ಲಿ ನಿರ್ಮಾಣವಾಗುತ್ತಿರುವ ದ್ರವತ್ಯಾಜ್ಯ ಘಟಕವನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.ಘಟಕ ವಿರೋಧಿ ಸಮಿತಿಯ ಅಧ್ಯಕ್ಷ ಸಂದೀಪ್ ಶೆಟ್ಟಿ ಮಾತನಾಡಿ, ದ್ರವ ತ್ಯಾಜ್ಯ ಘಟಕ ನಿರ್ಮಾಣವಾದಲ್ಲಿ ಹೊರಹೊಮ್ಮುವ ದುರ್ವಾಸನೆ ಮತ್ತು ಸೊಳ್ಳೆಗಳಿಂದ ಗ್ರಾಮಸ್ಥರಿಗೆ ವಿಶೇಷವಾಗಿ ವೃದ್ಧರು ಮತ್ತು ಮಕ್ಕಳಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ.

ಇಲ್ಲಿ ಶಾಲೆಗಳು ಆಸ್ಪತ್ರೆ, ಚರ್ಚ್, ಮಸೀದಿ, ದೇವಸ್ಥಾನ ಮತ್ತು ಪೇಟೆ ಜಾಗದ ಮಧ್ಯದಲ್ಲಿ ಇದನ್ನು ನಿರ್ಮಿಸುತ್ತಿರುವುದರಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ. ಸುತ್ತಲೂ ೫೦೦ಕ್ಕಿಂತ ಹೆಚ್ಚು ಮನೆಗಳು ಇವೆ. ಘಟಕದಿಂದ ಹರಡುವ ಕಲುಷಿತ ನೀರು ಭೂಮಿಯಲ್ಲಿ ಇಂಗಿ ಗ್ರಾಮದ ಸುತ್ತಮುತ್ತಲಿನ ಬಾವಿಗಳು ಮತ್ತು ಕೊಳವೆಬಾವಿಗಳ ಅಂತರ್ಜಲ ಕಲುಷಿತಗೊಳ್ಳುತ್ತದೆ. ನಮ್ಮ ಕುಡಿಯುವ ನೀರಿನ ಮೂಲವನ್ನು ಸಂಪೂರ್ಣ ನಾಶಪಡಿಸುತ್ತದೆ .

ಈ ಜಾಗದ ಸುತ್ತಲೂ ಕೃಷಿ ಭೂಮಿ ಇರುವುದರಿಂದ ತ್ಯಾಜ್ಯ ನೀರು ಹರಿದು ಬೆಳೆಗಳು ನಾಶವಾಗುವ ಸಂಭವ ಜಾಸ್ತಿ. ಒಟ್ಟಾರೆ ಅವೈಜ್ಞಾನಿಕ ದ್ರವ ತ್ಯಾಜ್ಯ ಘಟಕ ನಿರ್ಮಾಣಕ್ಕೆ ನಮ್ಮ ಆಕ್ಷೇಪವಿದ್ದು, ಇಂದು ಸಾಂಕೇತಿಕವಾಗಿ ಶಾಂತಿಯುತ ಪ್ರತಿಭಟನೆ ನಡೆಸಿದ್ದೇವೆ ಘಟಕ ನಿರ್ಮಾಣ ಮುಂದುವರಿದಲ್ಲಿ ಉಗ್ರರೀತಿಯ ಪ್ರತಿಭಟನೆ ನಡೆಸುವುದಕ್ಕೂ ಹಿಂಜರಿಯುವುದಿಲ್ಲ ಎಂದರು.

ಹೋರಾಟಗಾರ ದೀಪಕ್ ರೋಡ್ರಿಗಸ್ ಮಾತನಾಡಿ, ಯೋಜನೆ ಆರಂಭಿಸುವ ಮುನ್ನ ಯಾವುದೇ ಪೂರ್ವಾನುಮತಿ ಅಥವಾ ಯಾವುದೇ ಗ್ರಾಮ ಸಭೆಯನ್ನು ಮಾಡದೆ ಗ್ರಾಮಸ್ಥರ ಒಪ್ಪಿಗೆ ಪಡೆದಿರುವುದಿಲ್ಲ. ಸರ್ಕಾರಿ ಅಧಿಕಾರಿಗಳ ಕುಮ್ಮಕ್ಕಿನಿಂದ ಇದು ಆಗಿದೆ. ಕೂಡಲೇ ಕಾಮಗಾರಿ ನಿಲ್ಲಿಸಬೇಕು ಎಂದರು.

ರಾಬರ್ಟ್ ರೊಜಾರಿಯೋ, ಸುಧಾಕರ, ಹೇಮಾಚಾರ್ಯ ಮಾತನಾಡಿದರು. ಪಟ್ಟಣ ಪಂಚಾಯಿತಿ ಸದಸ್ಯರಾದ ಸುನಿತಾ ರೊಡ್ರಿಗಸ್, ಕೋಕಿಲಾ, ಸಂತಾನ್ ಡಿಸೋಜಾ, ಗ್ರಾಮಸ್ಥರಾದ ದಿನೇಶ್ ಆಚಾರ್ಯ, ಹರೀಶ್, ಸಂತೋಷ್ ಆಚಾರ್ಯ, ರಾಜನ್ ಡಿಕೋಸ್ಟಾ, ಹಿಲ್ಡಾ ಡಿಸೋಜಾ, ಶಯನ್ಕುಮಾರ್ ಮತ್ತಿತರರು ಇದ್ದರು. ಪ್ರಕಾಶ್ ಆಚಾರ್ಯ ವಂದಿಸಿದರು.

ಪ್ರತಿಭಟನೆಯ ನಂತರ ಹೋರಾಟಗಾರರು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಜಯಶಂಕರ ಪ್ರಸಾದ್ಗೆ ಮನವಿ ನೀಡಿದರು. ಮೂಲ್ಕಿ ಪೊಲೀಸರಿಂದ ಸೂಕ್ತ ಬಂದೋ ಬಸ್ತನ್ನು ನೀಡಲಾಗಿತ್ತು.


