November 3, 2026
Uncategorizedಅಂತಾರಾಷ್ಟ್ರೀಯಕಲೆ/ಸಾಹಿತ್ಯಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

ದುಬೈ ನಗರಿಯಲ್ಲಿ ಕರಾವಳಿಯ ಯಕ್ಷಗಾನದ ಅಬ್ಬರದ ಕಹಳೆ ಮೊಳಗಿಸಿದ ಯಕ್ಷಮಿತ್ರರು ದುಬೈ-ಯಕ್ಷ ಸಂಭ್ರಮ 2026ರಲ್ಲಿ ಅತ್ಯಮೋಘವಾಗಿ ಸಂಪನ್ನಗೊಂಡ ಯಕ್ಷಾರಾಧನೆ – “ಶ್ರೀ ಕೃಷ್ಣ ಲೀಲೆ”;

ವರದಿ/ ಚಿತ್ರ: ಸಂತೋಷ್ ಶೆಟ್ಟಿ ಪೊಳಲಿ

ದುಬೈ : ಗಲ್ಫ್ ರಾಷ್ಟ್ರಗಳಲ್ಲಿನ ಪ್ರಮುಖ ನಗರವಾದ ದುಬೈಯಲ್ಲಿ ಕರಾವಳಿ ನಾಡಿನ ಸಾಂಪ್ರದಾಯಿಕ ಕಲೆಯಾದ ಯಕ್ಷಗಾನದ ಕಂಪನ್ನು ಪಸರಿಸುತ್ತಿರುವ ಯಕ್ಷಗಾನದ ಮಾತೃ ಸಂಸ್ಥೆ ಯಕ್ಷಮಿತ್ರರು ದುಬಾಯಿಯ 23ನೇ ವಾರ್ಷಿಕೋತ್ಸವವು ಸೆಪ್ಟೆಂಬರ್ 27ರಂದು ದುಬೈ ಎಮಿರೇಟ್ಸ್ ಥಿಯೇಟರ್‌ನಲ್ಲಿ ವಿದ್ಯುತ್ ದೀಪಾಲಂಕೃತ ಭವ್ಯ ರಂಗಮಂಟಪದಲ್ಲಿ ಅತ್ಯಮೋಘವಾಗಿ ಸಂಪನ್ನಗೊಂಡಿತು.

2003ರಲ್ಲಿ ಯಕ್ಷಮಿತ್ರರು ತಂಡದ ರೂವಾರಿ ಶ್ರೀ ಚಿದಾನಂದ ಪೂಜಾರಿ ಅವರ ನೇತೃತ್ವದಲ್ಲಿ ಸಮಾನಮನಸ್ಕರೊಂದಿಗೆ ಸ್ಥಾಪನೆಗೊಂಡ ಈ ಸಂಸ್ಥೆ, ಕಳೆದ ಎರಡು ದಶಕಗಳಿಂದ ಗಲ್ಫ್ ರಾಷ್ಟ್ರಗಳಲ್ಲಿ ಯಕ್ಷಗಾನ ಕಲೆಯನ್ನು ಉಳಿಸಿ, ಬೆಳೆಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ.

23ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾದ “ಯಕ್ಷ ಸಂಭ್ರಮ 2026” ಕಾರ್ಯಕ್ರಮದಲ್ಲಿ ವಿನೂತನ ರಂಗವಿನ್ಯಾಸದೋಂದಿಗೆ “ಶ್ರೀ ಕೃಷ್ಣ ಲೀಲೆ” ಎಂಬ ಭಕ್ತಿ ಪ್ರಧಾನ ಪೌರಾಣಿಕ ಪ್ರಸಂಗವನ್ನು ಪ್ರದರ್ಶಿಸಲಾಯಿತು. ಪ್ರೇಕ್ಷಕರಿಂದ ದೊರೆತ ಭರ್ಜರಿ ಚಪ್ಪಾಳೆ ಮತ್ತು ಮೆಚ್ಚುಗೆಯೊಂದಿಗೆ ಈ ಪ್ರದರ್ಶನ ಎಲ್ಲರ ಮನಸೂರೆಗೊಂಡಿತು.

ಸಂಪ್ರದಾಯಬದ್ಧ ಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ- ಕಾರ್ಯಕ್ರಮವು ಪ್ರಧಾನ ಪುರೋಹಿತರಾದ ಪುತ್ತಿಗೆ ಶ್ರೀ ವಾಸುದೇವ ಭಟ್, ಶ್ರೀ ಲಕ್ಷ್ಮೀಕಾಂತ್ ಭಟ್, ಶ್ರೀ ವೆಂಕಟೇಶ ಶಾಸ್ತ್ರಿ ಪುತ್ತಿಗೆ, ಶ್ರೀ ಶಿವರಾಜ್ ಉಡುಪಿ ಹಾಗೂ ಶ್ರೀ ಮಹಾಬಲ ಹೆಗ್ಡೆ ಅವರ ನೇತೃತ್ವದಲ್ಲಿ ಸಂಪ್ರದಾಯಬದ್ಧ ಪೂಜಾ ವಿಧಿವಿಧಾನಗಳೊಂದಿಗೆ ಆರಂಭಗೊಂಡಿತು. ಮೊಗವೀರ ಭಜನಾ ಮಂಡಳಿಯವರ ಭಜನೆ ಹಾಗೂ ಚೌಕಿ ಪೂಜೆಯು ಕಾರ್ಯಕ್ರಮಕ್ಕೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೆರುಗು ನೀಡಿತು.

ಯಕ್ಷಮಿತ್ರರು ತಂಡದ ಮುತ್ತೈದೆ ಮಾತೆಯರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಗಣ್ಯರ ಉಪಸ್ಥಿತಿ : ಸಭಾ ಕಾರ್ಯಕ್ರಮದಲ್ಲಿ ಡಾ. ಬಿ.ಆರ್. ಶೆಟ್ಟಿ, ಪುತ್ತಿಗೆ ಶ್ರೀ ವಾಸುದೇವ ಭಟ್, ಶ್ರೀ ಸರ್ವೋತ್ತಮ ಶೆಟ್ಟಿ, ಶ್ರೀ ಮೋಹನ್ ಅತ್ತಾವರ, ಶ್ರೀ ಕಾರ್ತಿಕ್ ಶೆಟ್ಟಿ, ಶ್ರೀ ವಿನೋದ್ ಕುಮಾರ್ ,ಶ್ರೀ ಸತೀಶ್ ಪೂಜಾರಿ, ಶ್ರೀ ಶಶಿಧರ ನಾಗರಾಜಪ್ಪ, ಶ್ರೀ ಹರೀಶ್ ಬಂಗೇರ, ಶ್ರೀ ವಾಸು ಶೆಟ್ಟಿ, ಶ್ರೀ ವಿಶ್ವನಾಥ ಶೆಟ್ಟಿ ಹಾಗೂ ಶ್ರೀ ಮನೋಹರ ಹೆಗ್ಡೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಯಕ್ಷಮಿತ್ರರು ತಂಡದ ಹಿರಿಯ ಸದಸ್ಯರಾದ ರವಿ ಕೋಟ್ಯಾನ್, ಸತೀಶ್ ಶೆಟ್ಟಿ, ದಯಾ ಕಿರೋಡಿಯಾನ್, ಜಯಂತ ಶೆಟ್ಟಿ, ಅಶೋಕ್ ತೋನ್ಸೆ, ದಿನೇಶ್ ಪೂಜಾರಿ, ಅನಿಲ್ ರಾಜ್, ವಿಜೇಶ್ ಪೂಜಾರಿ, ಜಗನ್ನಾಥ ಬೆಳ್ಳಾರೆ, ಪದ್ಮನಾಭ ಕಟೀಲು, ಪ್ರೇಮ್ ಶ್ರೀ,ಅಮರ್ ನಂತೂರ್ ಹಾಗೂ ದಿನರಾಜ್ ಶೆಟ್ಟಿ ಉಪಸ್ಥಿತರಿದ್ದರು.

ಯಕ್ಷಗಾನದ ಪೂರ್ವರಂಗಯಕ್ಷಗಾನ ಪರಂಪರೆಯಂತೆ ಪೂರ್ವರಂಗವು ಶ್ರೀ ಕೃಷ್ಣ ಪ್ರಸಾದರಾವ್ ಇವರ ಸುಶ್ರಾವ್ಯ ಸಂಗೀತ ಮತ್ತು ಚಿಣ್ಣರ ಕೋಡಂಗಿಯಿಂದ ಆರಂಭಗೊಂಡು, ಬಾಲಗೋಪಾಲ, ಮುಖ್ಯ ಸ್ತ್ರೀವೇಷ ಹಾಗೂ ಪೀಠಿಕೆ ಸ್ತ್ರೀವೇಷಗಳೊಂದಿಗೆ ಮುಂದುವರಿದು ,ವೈವಿಧ್ಯಮಯ ಪೌರಾಣಿಕ ಪಾತ್ರಗಳ ಅಲಂಕೃತ ಪ್ರವೇಶವು ಕಾರ್ಯಕ್ರಮಕ್ಕೆ ವಿನೂತನ ಶೈಲಿಯ ಮೆರುಗು ನೀಡಿತು.

“ಶ್ರೀ ಕೃಷ್ಣ ಲೀಲೆ” ಯಕ್ಷಗಾನ ಪ್ರದರ್ಶನಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ “ಶ್ರೀ ಕೃಷ್ಣ ಲೀಲೆ” ಯಕ್ಷಗಾನವನ್ನು ಯಕ್ಷಮಿತ್ರರು ದುಬೈಯ ವಿದ್ಯಾರ್ಥಿಗಳು, ಗುರು ಶ್ರೀ ಕಿಶೋರ್ ಗಟ್ಟಿ ಉಚ್ಚಿಲ ಅವರ ಸಮರ್ಥ ನಿರ್ದೇಶನದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಪ್ರದರ್ಶಿಸಿದರು.

ಊರಿನಿಂದ ಆಗಮಿಸಿದ ಪಂಚ ಭಾಷಾ ಭಾಗವತಿಕೆಯ ನಿಪುಣರು, ಕಂಚಿನ ಕಂಠದ ಭಾಗವತರಾದ ಶ್ರೀ ಸತೀಶ್ ಶೆಟ್ಟಿ ಬೊಂದೆಲ್ ಅವರ ವಿವಿಧ ರಾಗಗಳಿಂದ ಕೂಡಿದ ಮನಮೋಹಕ ಭಾಗವತಿಕೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಚೆಂಡೆಯನ್ನು ನುಡಿಸುವಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಶ್ರೀ ದೇಲಂತಮಜಲು ಸುಬ್ರಹ್ಮಣ್ಯ ಭಟ್ ಹಾಗೂ ಶ್ರೀ ಹಿರಣ್ಮಯ ಆಚಾರ್ಯ ಅವರ ಚೆಂಡೆ-ಮದ್ದಳೆ ವಾದನದ ಜೊತೆಗೆ ಬ್ಯಾಂಡ್ ಸೆಟ್ ಪ್ರದರ್ಶನದ ಸೊಬಗನ್ನು ಮತ್ತಷ್ಟು ಹೆಚ್ಚಿಸಿತು.

ವೈವಿಧ್ಯಮಯ ವೇಷಭೂಷಣಗಳನ್ನು ಶ್ರೀ ಪ್ರಸಾದ್ ಶೆಟ್ಟಿ ಕಾಯರ್ ಕಟ್ಟೆ ಹಾಗೂ ಶ್ರೀ ಜನಾರ್ದನ ಪೂಜಾರಿ ಅವರು ವಿನ್ಯಾಸಗೊಳಿಸಿದ್ದರು.ಊರಿನ ಯಾವುದೇ ಗಣ್ಯ ಮುಮ್ಮೇಳ ಕಲಾವಿದರಿಲ್ಲದೆ ಯಕ್ಷಮಿತ್ರರು ತಂಡದ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಕಲಾವಿದರು ಅತ್ಯದ್ಭುತ ಪ್ರದರ್ಶನ ನೀಡುವ ಮೂಲಕ ತಮ್ಮ ಕಲಾ ಪ್ರೌಢಿಮೆಯನ್ನು ಮೆರೆದರು.

ಅವರ ಪ್ರತಿಭೆಗೆ ಕಲಾಭಿಮಾನಿಗಳಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಯಿತು.ಸನ್ಮಾನ ಸಮಾರಂಭಕಾರ್ಯಕ್ರಮದ ಅಂಗವಾಗಿ ಊರಿನಿಂದ ಆಗಮಿಸಿದ ಶ್ರೀ ಸತೀಶ್ ಶೆಟ್ಟಿ ಬೊಂದೆಲ್, ಹಾಗೂ 2003 ರಿಂದಲೇ ಯಕ್ಷಮಿತ್ರರ ಸಕ್ರಿಯ ಸದಸ್ಯರಾಗಿ, ಪುರೋಹಿತರಾಗಿ, ಹಿಮ್ಮೇಳ ಮತ್ತು ಮುಮ್ಮೇಳ ಕಲಾವಿದರಾಗಿ, ಮಾರ್ಗದರ್ಶಿಗಳಾಗಿ , ಕಲಾ ಪೋಷಕರಾಗಿ ತೊಡಗಿಸಿಕೊಂಡ ಯಕ್ಷಮಿತ್ರರು ತಂಡದ ಸ್ಥಾಪಕ ಸದಸ್ಯರಾದ ಶ್ರೀ ವೆಂಕಟೇಶ ಶಾಸ್ತ್ರಿ ಪುತ್ತಿಗೆ ದಂಪತಿ ಹಾಗೂ ಶ್ರೀ ಭವಾನಿ ಶಂಕರ ಶರ್ಮ ದಂಪತಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಅದೇ ರೀತಿ ಶ್ರೀ ಸುಬ್ರಹ್ಮಣ್ಯ ಭಟ್ ದೇಲಂತಮಜಲು ಹಾಗೂ ಶ್ರೀ ಹಿರಣ್ಮಯ ಆಚಾರ್ಯ ಅವರನ್ನು ಗೌರವಿಸಲಾಯಿತು.ಯಕ್ಷಮಿತ್ರರು ತಂಡದ ಸ್ಥಾಪಕ ಸದಸ್ಯರಾಗಿ, ಯಕ್ಷಗಾನ ಗುರುವಾಗಿ ಹಾಗೂ ನಿರ್ದೇಶಕರಾಗಿ 2002ರಿಂದ ದುಬೈಯಲ್ಲಿ ಯಕ್ಷಗಾನಕ್ಕೆ ಮರುಜನ್ಮ ನೀಡಿದ ಶ್ರೀ ಕಿಶೋರ್ ಗಟ್ಟಿ ಅವರಿಗೆ “ಯಕ್ಷ ಸಂಜೀವಿನಿ – ದುಬೈ” ಎಂಬ ಗೌರವ ಬಿರುದನ್ನು ನೀಡಿ, ಕುಟುಂಬ ಸಮೇತರಾಗಿ ನೆರೆದಿದ್ದ ಗಣ್ಯರು ಹಾಗೂ ಕಲಾಭಿಮಾನಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಅಚ್ಚುಕಟ್ಟಾದ ನಿರೂಪಣೆ ಮತ್ತು ಧನ್ಯವಾದ ಸಮರ್ಪಣೆಶ್ರೀ ವಿಘ್ನೇಶ್ ಹಾಗೂ ಶ್ರೀಮತಿ ಜ್ಯೋತಿ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಶ್ರೀ ಬಾಲಕೃಷ್ಣ ಡಿ. ಶೆಟ್ಟಿಗಾರ್ ಅವರು ಧನ್ಯವಾದ ಸಮರ್ಪಿಸಿದರು.ಯಕ್ಷಮಿತ್ರರು ತಂಡದ ರೂವಾರಿಯಾದ ಶ್ರೀ ಚಿದಾನಂದ ಪೂಜಾರಿ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಪ್ರಾಯೋಜಕರು, ಸ್ವಯಂಸೇವಕರು, ಮಾಧ್ಯಮದವರು ಹಾಗೂ ದುಬಾಯಿಯ ಎಲ್ಲಾ ಸಂಘ ಸಂಸ್ಥೆಗಳ ಪದಾದಿಕಾರಿಗಳು ಮತ್ತು ಸದಸ್ಯರಿಗೆ , ಸಾಮಾಜಿಕ ಜಾಲತಾಣದಲ್ಲಿ ( YouTube) ನೋಡಿ ಯಕ್ಷಗಾನ ಕಲೆಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೆಂಬಲ ನೀಡಿದ ಸರ್ವರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.

ಗಲ್ಫ್ ರಾಷ್ಟ್ರಗಳಲ್ಲಿ ಯಕ್ಷಗಾನವನ್ನು ಉಳಿಸಿ, ಬೆಳೆಸುತ್ತಿರುವುದು ಎಲ್ಲರ ಒಟ್ಟಾರೆ ಪ್ರಯತ್ನದ ಫಲವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.ಈ ಭವ್ಯ ಸಮಾರಂಭವು ಕೇವಲ ಸಾಂಸ್ಕೃತಿಕ ಸಂಭ್ರಮವಾಗಿರದೆ, ಗಡಿಗಳನ್ನು ಮೀರಿ ಪಾರಂಪರಿಕ ಕಲೆಗಳನ್ನು ಹೇಗೆ ಉಳಿಸಿ, ಬೆಳೆಸಬಹುದು ಎಂಬುದಕ್ಕೆ ಜೀವಂತ ಸಾಕ್ಷಿಯಾಯಿತು.

Related posts

ಬೆಂಗಳೂರಿನಲ್ಲಿ ಭಾರತದ ಮೊದಲ ಬೀದಿನಾಯಿ ಶೆಲ್ಟರ್ ನಿರ್ಮಾಣ;

Voiceoftulunadu

ಕಾಪುವಿನ ಸುಭಾಷ್ ನಗರದಲ್ಲಿ ಕೊಬ್ಬರಿ ಘಟಕಕ್ಕೆ ಬೆಂಕಿ.ಲಕ್ಷಾಂತರ ರೂಪಾಯಿ ನಷ್ಠ ;

Voiceoftulunadu

ರಾಮರಾಜ್ಯವೆಂದರೆ ತಾರತಮ್ಯವಿಲ್ಲದ ಆಡಳಿತ ವ್ಯವಸ್ಥೆ: ಪ್ರಧಾನಿ ಮೋದಿ ;

Voiceoftulunadu

Leave a Comment