ವರದಿ/ಚಿತ್ರ: ರೋಶನ್ ನೆಲ್ಲಿಗುಡ್ಡೆ
ಮೂಲ್ಕಿ : ಆರೋಗ್ಯಯುತ ಸಮಾಜದ ಬೆಳವಣಿಗೆಗೆ ಪತ್ರಕರ್ತರ ಪಾತ್ರವಿದೆ. ವರದಿಯೊಂದಿಗೆ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಪತ್ರಕರ್ತನಿಗೆ ಜವಬ್ದಾರಿ ಹೆಚ್ಚಿದೆ ಎಂದು ರಾಜ್ಯ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.ಅವರು ಮೂಲ್ಕಿ ಸ್ವಾಗತ್ ಸಭಾಂಗಣದಲ್ಲಿ ನಡೆದ ಮೂಲ್ಕಿ ಪ್ರೆಸ್ ಕ್ಲಬ್ ಹಾಗೂ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದ ಸಂಯೋಜನೆಯಲ್ಲಿ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮೂಲ್ಕಿ ಪ್ರೆಸ್ ಕ್ಲಬ್ ಅಧ್ಯಕ್ಷ ಲೋಕೇಶ್ ಸುರತ್ಕಲ್ ಅಧ್ಯಕ್ಷತೆಯನ್ನು ವಹಿಸಿದ್ದರು.ಜಿಲ್ಲಾ ಕಾರ್ಯನಿರತರ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್.ಬಿ.ಎನ್ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಜನರಿಗೆ ಇಂದಿಗೂ ಪತ್ರಿಕೆ ಮೇಲೆ ನಂಬಿಕೆ ಉಳಿದಿದ್ದು, ಸಮೂಹ ಮಾಧ್ಯಮಗಳು ವಿವಿಧ ಕ್ಷೇತ್ರದಲ್ಲಿ ವಿಶ್ವಾಸಾರ್ಹತೆಯಲ್ಲಿ ಪತ್ರಿಕೆ ಮತ್ತು ವ್ಯ ಮಾಧ್ಯಮ ಮಂಚೂಣಿಯಲ್ಲಿದೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಐಕಳ ಜಯಪಾಲ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಜಿಲ್ಲಾ ಪ್ರತ್ರಕರ್ತರ ಸಂಘದ ಮಾಜಿ ಅಧ್ಯಕ್ಷೆ ಜಗನ್ನಾಥ ಶೆಟ್ಟಿ ಬಾಳ, ರಾಜ್ಯ ಸಮಿತಿಯ ಸದಸ್ಯ ಶ್ರೀನಿವಾಸ್ ನಾಯಕ್, ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಪುನೀತ್ ಕೃಷ್ಣ ವಂದಿಸಿದರು. ಹರೀಶ್ ಹೆಜ್ಮಾಡಿ ನಿರೂಪಿಸಿದರು.
