ವರದಿ /ಚಿತ್ರ: ಈ ಮೀಡಿಯಾ
ಉಡುಪಿ : ಲಯನ್ಸ್ ಎಂದರೆ ಸೇವೆಗೆ ಮತ್ತೊಂದು ಹೆಸರು.ಇಂದು ಜಗತ್ತಿನಾದ್ಯಂತ ಸುಮಾರು 16.5 ಲಕ್ಷ ಲಯನ್ಸ್ ಸದಸ್ಯರು ನಿಸ್ವಾರ್ಥ ಸೇವೆ ಮಾಡುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಸಮಾಜದ ಅಗತ್ಯತೆ ಹಾಗೂ ಅನಿವಾರ್ಯತೆಗಳನ್ನು ಅರಿತು, ಶಾಶ್ವತ ಪರಿಹಾರಕ್ಕಾಗಿ ಶ್ರಮಿಸಿದಾಗ ಮಾತ್ರ ನಿಜವಾದ ಆತ್ಮತೃಪ್ತಿ ಸಿಗುತ್ತದೆ ಎಂದು ಜಿಲ್ಲಾ ಮುಖ್ಯ ಸಂಯೋಜಕರಾದ ಲಯನ್ ರಜತ್ ಕುಮಾರ್ ಹೆಗ್ಡೆ ಅಭಿಪ್ರಾಯಪಟ್ಟರು.
ಉದ್ಯಾವರದ ಬಲಾಯಿಪಾದೆಯ ನಿತ್ಯಾನಂದ ಆರ್ಕೇಡ್’ನಲ್ಲಿ ನಡೆದ ಲಯನ್ಸ್ ಕ್ಲಬ್ ಕುಂಜಿಬೆಟ್ಟು ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪದಗ್ರಹಣದ ಜವಾಬ್ದಾರಿ ಹಾಗೂ ನಿಯಮಾವಳಿಗಳ ಕುರಿತು ವಿವರಣೆ ನೀಡಿದರು.
ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಲಯನ್ ಅಶೋಕ್ ರಾವ್ ಮಾತನಾಡಿ, ಅಧ್ಯಕ್ಷ ಸ್ಥಾನ ಎಂಬುದು ಕೇವಲ ಹುದ್ದೆಯಲ್ಲ, ಅದುದೊಡ್ಡ ಜವಾಬ್ದಾರಿ. ಹಿಂದೆ ಪಂಚಾಯತ್ ಅಧ್ಯಕ್ಷನಾಗಿ ಹಾಗೂ ಹಲವು ಸಂಸ್ಥೆಗಳಲ್ಲಿ ದುಡಿದ ಅನುಭವ ನನಗಿದೆ. ಎಲ್ಲ ಲಯನ್ಸ್ ಸದಸ್ಯರ ಸಹಕಾರದೊಂದಿಗೆ ಶಿಕ್ಷಣ ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿ, ಸಮಾಜಕ್ಕೆ ನಮ್ಮಿಂದಾಗುವ ಅಳಿಲು ಸೇವೆಯನ್ನು ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿಯಾಗಿ ಲಯನ್ ಜಯಶ್ರೀ ಕೊಟ್ಯಾನ್ ಹಾಗೂ *ಲಿಯೋ ಲಯನ್ ಆದಿತ್ಯ ಆರ್. ಶೆಟ್ ಮತ್ತು ತಂಡದವರು ಅಧಿಕಾರ ಸ್ವೀಕರಿಸಿದರು.ವೇದಿಕೆಯಲ್ಲಿ ಮಾಜಿ ಅಧ್ಯಕ್ಷರಾದ ಲಯನ್ ಮಂಜುನಾಥ್ ಶೇಟ್ ನೂತನ ಕಾರ್ಯದರ್ಶಿ ಲಯನ್ ಜಯಶ್ರೀ ಕೊಟ್ಯಾನ್ ಹಾಗೂ ಖಜಾಂಚಿ ಲಯನ್ ರವಿ ಪ್ರಕಾಶ್ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಲಯನ್ ರಂಜಿತಾ ಶೇಟ್ ನಿರೂಪಿಸಿದರು.
