ಕೃಪೆ: ಪಿಂಗಾರ

ಮೂಡುಬಿದಿರೆ: ಆಳ್ವಾಸ್ ಪದವಿಪೂರ್ವ ಕಾಲೇಜಿನ ಮಕ್ಕಳ ಹಕ್ಕುಗಳ ಸಂಘದ ವತಿಯಿಂದ ಆರೋಗ್ಯಕರ ನಡವಳಿಕೆ ಹಾಗೂ ಎಚ್‍ಐವಿ ಏಡ್ಸ್ ಕುರಿತು ಜಾಗೃತಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸುರೇಖಾ ಪೈ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಎಚ್‍ಐವಿ ಏಡ್ಸ್ ಹಾಗೂ ಆರೋಗ್ಯಕರ ಜೀವನಶೈಲಿಯ ಕುರಿತು ಮಾಹಿತಿ ನೀಡಿದರು.
ಉತ್ತಮ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ ಮತ್ತು ಸಮರ್ಪಕ ವಿಶ್ರಾಂತಿಯು ಆರೋಗ್ಯಕರ ಜೀವನದ ಪ್ರಮುಖ ಆಧಾರಗಳಾಗಿವೆ. ಇವು ವಿದ್ಯಾರ್ಥಿಗಳಲ್ಲಿ ಮಾನಸಿಕ ಸ್ಥೈರ್ಯ ಹಾಗೂ ಬೌದ್ಧಿಕ ಸಾಮಥ್ರ್ಯವನ್ನು ವೃದ್ಧಿಸುತ್ತವೆ ಎಂದರು. ಆಧುನಿಕ ಆಹಾರ ಪದ್ಧತಿ ಹಾಗೂ ಒತ್ತಡದ ಜೀವನಶೈಲಿಯಿಂದಾಗಿ ಯುವಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳು ಉಂಟಾಗುತ್ತಿವೆ.
ಎಚ್‌ಐವಿ ಎಡ್‌ಸ್‌ನಂತಹ ಸಾಂಕ್ರಾಮಿಕ ಕಾಯಿಲೆಗಳ ಕುರಿತು ಸಮಾಜದಲ್ಲಿರುವ ತಪ್ಪು ಕಲ್ಪನೆ, ಭಯ ಮತ್ತು ಅಜ್ಞಾನವನ್ನು ಹೋಗಲಾಡಿಸುವ ಅಗತ್ಯವಿದೆ ಎಂದರು.
ಎಚ್‌ಐವಿ ಸೋಂಕಿತ ವ್ಯಕ್ತಿಗಳೊಂದಿಗೆ ಮಾತನಾಡುವುದು, ಆಹಾರ ಹಂಚಿಕೊಳ್ಳುವುದು ಅಥವಾ ಸಾಮಾನ್ಯ ಸಾಮಾಜಿಕ ಒಡನಾಟ ಹೊಂದುವುದರಿಂದ ಸೋಂಕು ಹರಡುವುದಿಲ್ಲ. ಬದಲಾಗಿ, ಅವರೊಂದಿಗೆ ಮಾನವೀಯತೆ, ಗೌರವ ಹಾಗೂ ಸಹಾನುಭೂತಿಯಿಂದ ವರ್ತಿಸುವ ಮೂಲಕ ಅವರಲ್ಲಿನ ಕೀಳರಿಮೆ ಮತ್ತು ಸಾಮಾಜಿಕ ಕಳಂಕವನ್ನು ಕಡಿಮೆ ಮಾಡಬಹುದು ಎಂದು ಪ್ರಶೋತ್ತರಗಳ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಅತಿಯಾದ ಕೊಬ್ಬು ಸಕ್ಕರೆ ಹಾಗೂ ಉಪ್ಪಿನ ಅಂಶ ಹೊಂದಿರುವ ಆಹಾರ ಮತ್ತು ಫಾಸ್‌ಟ್‌ಫುಡ್‌ಗಳ ಸೇವನೆಯಿಂದ ದೂರವಿದ್ದು, ಪೌಷ್ಟಿಕ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ಉತ್ತಮ ಆಹಾರವು ದೀರ್ಘಕಾಲದ ಆರೋಗ್ಯ ಮತ್ತು ಆಯುಷ್ಯಕ್ಕೆ ಪೂರಕವಾಗಿದೆ ಎಂದರು.
