ಕೃಪೆ : ಕುಂದೇಶ್ವರ ಬುಲೆಟಿನ್
ಮಂಗಳೂರು : ಕರ್ನಾಟಕದಲ್ಲಿ ತುಳು ಭಾಷೆಗೆ ‘ಹೆಚ್ಚುವರಿ ಅಧಿಕೃತ ಭಾಷೆ’ ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ನಮ್ಮ ತುಳುನಾಡು ಟ್ರಸ್ಟ್, ಜೈ ತುಳುನಾಡು ಹಾಗೂ ತುಳು ಒಕ್ಕೂಟ ಮೊದಲಾದ ಸಂಘಟನೆಗಳು ನಿರಂತರ ಹಾಗೂ ವ್ಯವಸ್ಥಿತ ಹೋರಾಟಗಳನ್ನು ನಡೆಸುತ್ತಾ ಬಂದಿವೆ.
ಕಾರ್ಕಳದ ವೀರಪ್ಪ ಮೊಯ್ಲಿಯವರಿಂದ ಆರಂಭ..ಎಂ. ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತುಳು ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗುವುದರೊಂದಿಗೆ ತುಳುವಿನ ಸಾಂಸ್ಥಿಕ ಬೆಳವಣಿಗೆಗೆ ಭದ್ರ ಬುನಾದಿ ಬಿತ್ತು.
ಅಲ್ಲಿಂದೀಚೆಗೆ ತುಳು ಸಂಸ್ಕೃತಿಯ ಉಳಿವಿಗೆ, ಪಠ್ಯಪುಸ್ತಕಗಳ ರಚನೆಗೆ, ಶಾಲಾ ಹಂತದಲ್ಲಿ ತುಳು ಕಲಿಕೆಗೆ ಹಾಗೂ ಸಾಹಿತ್ಯಿಕ ಚಟುವಟಿಕೆಗಳಿಗೆ ಅಕಾಡೆಮಿ ಹೊಸ ವೇಗ ನೀಡಿತು. ನಂತರ ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದ ಕಾಲಘಟ್ಟದಲ್ಲಿ ‘ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ’ ಸ್ಥಾಪನೆಯಾಯಿತು.
ಈ ಘೋಷಣೆಯಿಂದ ಅರೆಭಾಷೆಗೆ ಪ್ರತ್ಯೇಕ ವೇದಿಕೆ ಲಭ್ಯವಾಯಿತಾದರೂ, ತುಳು ಭಾಷೆಯ ಸಾಂವಿಧಾನಿಕ ಹಕ್ಕು ಹಾಗೂ ಒಟ್ಟಾರೆ ಬೆಳವಣಿಗೆಯ ದೃಷ್ಟಿಯಿಂದ ತುಳುವಿಗೆ ಇದರಿಂದ ಯಾವುದೇ ನೇರ ಲಾಭವಾಗಲಿಲ್ಲ.ತುಳು ಅಕಾಡೆಮಿ ಕತ್ತಲ್ಸಾರ್ ವರದಿ:ತುಳುವಿಗೆ ಅಧಿಕೃತ ಸ್ಥಾನಮಾನ ಕಲ್ಪಿಸುವ ಬೇಡಿಕೆಗೆ 2021ರ ಆಗಸ್ಟ್ 9ರಂದು ನಡೆದ ಉನ್ನತ ಮಟ್ಟದ ಸಭೆಯು ಮಹತ್ವದ ಸಾಂವಿಧಾನಿಕ ತಿರುವು ನೀಡಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೇತೃತ್ವದಲ್ಲಿ ನಡೆದ ಆ ಸಭೆಯಲ್ಲಿ, ಅಂದಿನ ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್ ಮುಂಚೂಣಿಯಲ್ಲಿ ನಿಂತು ಬಲವಾದ ವಾದ ಮಂಡಿಸಿದ್ದರು. ಅವರಿಗೆ ಅಕಾಡೆಮಿ ಸದಸ್ಯ ಡಾ. ಆಕಾಶರಾಜ್ ಜೈನ್ ಸಕ್ರಿಯ ಬೆಂಬಲ ನೀಡಿದ್ದರು. ತುಳುವಿನ 2,500 ವರ್ಷಗಳ ಇತಿಹಾಸ, 1,100 ವರ್ಷಗಳ ಲಿಪಿ ಪರಂಪರೆ, ಅಮರ ಸುಳ್ಯ ಕ್ರಾಂತಿಯ ದೇಶಪ್ರೇಮ ಹಾಗೂ ಸಂವಿಧಾನದ 29, 345, 347 ಮತ್ತು 350ನೇ ವಿಧಿಗಳ ಅಡಿಯಲ್ಲಿ ‘ಹೆಚ್ಚುವರಿ ಅಧಿಕೃತ ಭಾಷೆ’ಯಾಗಿಸಲು ಇರುವ ಕಾನೂನು ಸಾಧ್ಯತೆಗಳನ್ನು ಸರ್ಕಾರದ ಮುಂದಿಡಲಾಯಿತು.
ಈ ಹಿಂದಿನ ಅಧ್ಯಕ್ಷರು ಹಾಕಿಕೊಟ್ಟ ಬಲವಾದ ಬುನಾದಿಯ ಮುಂದುವರಿದ ಭಾಗವಾಗಿ, ಪ್ರಸ್ತುತ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರ ನೇತೃತ್ವದಲ್ಲಿ ಪ್ರಕ್ರಿಯೆ ಹೊಸ ವೇಗ ಪಡೆದುಕೊಂಡಿದೆ. ತಾರಾನಾಥ್ ಗಟ್ಟಿಯವರ ನೇತೃತ್ವದ ನಿಯೋಗವು ಸರ್ಕಾರದ ಮಟ್ಟದಲ್ಲಿ ಸಚಿವರು, ಮುಖ್ಯಮಂತ್ರಿಗಳು ಹಾಗೂ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡುವಲ್ಲಿ ಮತ್ತು ಕಾನೂನಾತ್ಮಕ ಮನ್ನಣೆ ಕೊಡಿಸುವ ಪ್ರಕ್ರಿಯೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.
ಅಕಾಡೆಮಿಯ ಹಿಂದಿನ ಹಾಗೂ ಇಂದಿನ ಅಧ್ಯಕ್ಷರ ನಿರಂತರ ಸರಣಿ ಪ್ರಯತ್ನಗಳು, ಅಧ್ಯಯನ ವರದಿಗಳು ಮತ್ತು ನಿಯೋಗದ ಸಂಘಟಿತ ಪ್ರಯತ್ನಗಳು ಇದೀಗ ತುಳು ಭಾಷೆಗೆ ಶಾಸನಬದ್ಧ ಮಾನ್ಯತೆ ತಂದುಕೊಡುವ ವಿಶ್ವಾಸವನ್ನು ಗಟ್ಟಿಗೊಳಿಸಿವೆ.ಕಡತ ಯಜ್ಞದಲ್ಲಿ ಸಮಿಧೆಯಾದ ಜಿ.ವಿ.ಎಸ್. ಉಳ್ಳಾಲ್ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕೆಂಬ ಬಹು ವರ್ಷಗಳ ಕನಸು ನನಸಾಗುವ ಹಂತದಲ್ಲಿದೆ.
ತುಳು ಲಿಪಿ ಮತ್ತು ಪಠ್ಯಗಳ ವಿಚಾರದಲ್ಲಿ ಹೋರಾಟ ನಡೆಸಿದ್ದಲ್ಲದೆ, ಆಡಳಿತಾತ್ಮಕ ಕಡತ ವಿಲೇವಾರಿ ಪ್ರಕ್ರಿಯೆಯಲ್ಲಿ ನಮ್ಮ ತುಳುನಾಡು ಟ್ರಸ್ಟ್ ಭಗೀರಥ ಪ್ರಯತ್ನವನ್ನೇ ನಡೆಸಿದೆ.ಶಾಸಕ ಅಶೋಕ್ ರೈ ಅವರ ಮಾರ್ಗದರ್ಶನದಲ್ಲಿ, ವಿಧಾನಸೌಧ ಮತ್ತು ವಿಕಾಸಸೌಧ ಮಟ್ಟದಲ್ಲಿ 2023ರ ನವೆಂಬರ್ನಿಂದ ನಿರಂತರವಾಗಿ ಕಡತಗಳ ಬೆನ್ನುಬಿದ್ದಿದ್ದ ನಮ್ಮ ತುಳುನಾಡು ಸಂಘಟನೆ ಅಧ್ಯಕ್ಷ ಜಿ.ವಿ.ಎಸ್. ಉಳ್ಳಾಲ್ ಅವರ ಶ್ರಮ ಫಲ ನೀಡುವ ಹಂತಕ್ಕೆ ಬಂದಿದೆ.
ಈ ಪ್ರಕ್ರಿಯೆಯಲ್ಲಿದ್ದ ಒಟ್ಟು ನಾಲ್ಕು ಕಡತಗಳ ಪೈಕಿ ಈಗಾಗಲೇ ಮೂರು ಕಡತಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ತಲುಪಿದ್ದು, ಮಂಗಳವಾರ ಮಧ್ಯಾಹ್ನದ ವೇಳೆಗೆ ನಾಲ್ಕನೇ ಹಾಗೂ ಅಂತಿಮ ಕಡತವನ್ನು ಆರ್ಥಿಕ ಇಲಾಖೆಯಿಂದ ಮುಖ್ಯ ಇಲಾಖೆಗೆ ರವಾನಿಸುವ ಕಾರ್ಯ ಪೂರ್ಣಗೊಂಡಿದೆ.ಅಧ್ಯಯನ ಹಾಗೂ ನಿರಂತರ ಪ್ರಯತ್ನ:ತುಳು ಅಕಾಡೆಮಿಯ ವರದಿಯ ಬಳಿಕ, ಹಿಂದಿನ ಸರ್ಕಾರದ ಅವಧಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ವಿ. ಸುನಿಲ್ ಕುಮಾರ್ ಅವರ ನಿರ್ದೇಶನದಂತೆ ಡಾ. ಎಂ. ಮೋಹನ ಆಳ್ವ ಸಮಿತಿ ವರದಿ ಕೂಡ ಸಿದ್ಧವಾಗಿತ್ತು.
ಆದರೆ ಆಡಳಿತಾತ್ಮಕ ವರದಿ ಬಾಕಿ ಇದ್ದ ಕಾರಣ ಅಧಿಕೃತ ಸ್ಥಾನಮಾನ ಘೋಷಣೆ ಕೈಗೂಡಿರಲಿಲ್ಲ.ಸರ್ಕಾರ ಮತ್ತು ತುಳುನಾಡು ಟ್ರಸ್ಟ್ ಮುತುವರ್ಜಿ!ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಮ್ಮ ತುಳುನಾಡು ಟ್ರಸ್ಟ್, ಸ್ಪೀಕರ್ ಯು.ಟಿ. ಖಾದರ್ ಹಾಗೂ ಪುತ್ತೂರು ಶಾಸಕ ಅಶೋಕ್ ರೈ ಅವರ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಮುನ್ನಡೆಯಿತು. ತುಳು ಭಾಷೆಗೆ ಸಾಂವಿಧಾನಿಕ ಹಾಗೂ ಆಡಳಿತಾತ್ಮಕ ಮಾನ್ಯತೆ ದೊರಕಿಸಿಕೊಡುವ ನಿಟ್ಟಿನಲ್ಲಿ ಆಂಧ್ರಪ್ರದೇಶಕ್ಕೆ ತೆರಳಿ ಅಲ್ಲಿನ ಭಾಷಾ ನೀತಿಯ ಅಧ್ಯಯನವನ್ನೂ ನಡೆಸಲಾಯಿತು;
ಇದಕ್ಕೆ ಶಾಸಕ ಅಶೋಕ್ ರೈ ಸಂಪೂರ್ಣ ನೆರವು ನೀಡಿದ್ದರು. ಸುಮಾರು 410ಕ್ಕೂ ಹೆಚ್ಚು ದಿನಗಳ ಕಾಲ ಸ್ವಂತ ಖರ್ಚಿನಲ್ಲಿ ಬೆಂಗಳೂರಿನ ಸರ್ಕಾರಿ ಕಚೇರಿಗಳಿಗೆ ಅಲೆದಾಡಿ, ಸೂಕ್ತ ದಾಖಲೆಗಳನ್ನು ಒಗ್ಗೂಡಿಸಿ ಕಡತ ವಿಲೇವಾರಿಗೆ ವೇಗ ತರಲಾಯಿತು.ಈ ಮಹತ್ವದ ಬೆಳವಣಿಗೆಯ ಬೆನ್ನಲ್ಲೇ ಜಿ.ವಿ.ಎಸ್. ಉಳ್ಳಾಲ್ ಸೇರಿದಂತೆ ಹಲವು ತುಳು ಅಭಿಮಾನಿಗಳು ಹಾಗೂ ಹೋರಾಟಗಾರರು ಶ್ರಮಿಸಿದ್ದಾರೆ.
‘ತುಳು ಒರಿಪುಗ’, ‘ತುಳು ಸಾಹಿತ್ಯ ಪರಿಷತ್ ಅಂತರ್ಜಾಲ ಬಳಗ’ ಹಾಗೂ ಬೆಂಬಲಿಸಿದ ಅನೇಕ ಸಂಘಟನೆಗಳ ನಿರಂತರ ಶ್ರಮದಿಂದಾಗಿ ತುಳುವರ ಬಹುದಿನಗಳ ಕನಸು ಕೈಗೂಡುವ ಹೊಸ್ತಿಲಲ್ಲಿದೆ. “ಸಚಿವ ಸಂಪುಟದ ಅಧಿಕೃತ ಘೋಷಣೆಯ ಬಳಿಕ ಯೋಜನೆಗಳ ಸಮರ್ಪಕ ಅನುಷ್ಠಾನವಾಗಬೇಕಿದ್ದು, ಇದಕ್ಕೂ ಸಂಘಟನೆಗಳು ಒಗ್ಗಟ್ಟಿನಿಂದ ಶ್ರಮಿಸಬೇಕಿದೆ” ಎಂದು ಯಕ್ಷಗಾನ ಅಕಾಡೆಮಿ ಸದಸ್ಯ ಹಾಗೂ ನಮ್ಮ ತುಳುನಾಡು ಟ್ರಸ್ಟ್ನ ಜಿ.ವಿ.ಎಸ್. ಉಳ್ಳಾಲ್(ಸುಧಾಕರ ಶೆಟ್ಟಿ) ತಿಳಿಸಿದ್ದಾರೆ
