ವರದಿ/ ಚಿತ್ರ : ರೋನ್ಸ್ ಬಂಟ್ವಾಳ್

ಮುಂಬಯಿ, ಅ.18: ಹೆಗ್ಗಡೆ ಸಮಾಜದ ಬಾಂಧವರು ಪರಸ್ಪರ ಅನ್ಯೋನ್ಯತೆಯಿಂದ ಒಂದಾಗಿ ಸಮಾಜವನ್ನು ಮುನ್ನಡೆಸಬೇಕು. ಹೆಗ್ಗಡೆ ಸಮಾಜದ ಅಭಿವೃದ್ಧಿಗೆ ಒಗ್ಗಟ್ಟು ಮತ್ತು ಜನಸಂಖ್ಯೆಯ ಬಲ ಅಗತ್ಯ. ನಮ್ಮ ಸಮಾಜದ ಜನಸಂಖ್ಯೆ ಕಡಿಮೆ ಇರುವುದರಿಂದ ಸರ್ಕಾರದಿಂದ ಸಿಗಬಹುದಾದ ಸೌಲಭ್ಯಗಳು ಹಾಗೂ ಅವಕಾಶಗಳನ್ನು ಪಡೆಯುವಲ್ಲಿ ಸವಾಲುಗಳಿವೆ.

ಸಮಾಜದ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಹೆಗ್ಗಡೆ ಸಮುದಾಯದ ಮೂಲ, ಇತಿಹಾಸ ಮತ್ತು ಪರಂಪರೆಯ ಕುರಿತು ಹೆಚ್ಚಿನ ಮಾಹಿತಿ ಪಡೆದು ಎಲ್ಲರೊಂದಿಗೆ ಸಂಪರ್ಕ ಬೆಳೆಸಬೇಕು. ಯುವಜನರು ಮಾತ್ರವಲ್ಲದೆ ಎಲ್ಲ ವಯೋಮಾನದವರೂ ಸಮಾಜದ ಪ್ರಗತಿಗೆ ಕೈಜೋಡಿಸಬೇಕು ಎಂದು ಮಂಗಳೂರುನ ಉದ್ಯಮಿ ಬಾಲಕೃಷ್ಣ ಹೆಗ್ಡೆ ಮುಲ್ಕಿ ನುಡಿದರು.

ಇಂದಿಲ್ಲಿ ಭಾನುವಾರ ನವಿ ಮುಂಬಯಿ ಅಲ್ಲಿನ ಐರೋಲಿಯ ಹೆಗ್ಗಡೆ ಭವನದಲ್ಲಿರುವ ಐತಮಜಲು ಶ್ರೀಮತಿ ಜಯಂತಿ ವಿಠಲ ಹೆಗ್ಡೆ ಸ್ಮಾರಕ ಸಭಾಗೃಹದಲ್ಲಿ ಹೆಗ್ಗಡೆ ಸೇವಾ ಸಂಘ ಮುಂಬಯಿ ತನ್ನ 66ನೇ ವಾರ್ಷಿಕೋತ್ಸವ ಸಂಭ್ರಮಿಸಿದ್ದು, ದೀಪಹಚ್ಚಿ ಸಭಾಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತು ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನಿಸಿ ಬಾಲಕೃಷ್ಣ ಹೆಗ್ಡೆ ಮಾತನಾಡಿದರು.

ಹೆಗ್ಗಡೆ ಸೇವಾ ಸಂಘದ ಅಧ್ಯಕ್ಷ ಮನೋಜ್ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆಸಲ್ಪ ಸಮಾರಂಭದಲ್ಲಿ ಬೆಂಗಳೂರುನ ಬಿಬಿಎಂಪಿಯ ನಿವೃತ್ತ ಆರೋಗ್ಯಾಧಿಕಾರಿ ಡಾ| ಮನೋರಂಜನ್ ಹೆಗ್ಡೆ ಮುಖ್ಯ ಅತಿಥಿsಯಾಗಿ, ಹೆಗ್ಗಡೆ ಸೇವಾ ಸಂಘ ಬೆಂಗಳೂರು ಇದರ ಮಾಜಿ ಕಾರ್ಯದರ್ಶಿ ಅಡ್ವಕೇಟ್ ಸಂದೀಪ್ ಹೆಗ್ಡೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಹೆಗ್ಗಡೆ ಸೇವಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಉಮೇಶ್ ಹೆಗ್ಡೆ ಗೌರವಾನ್ವಿತ ಅತಿಥಿsಗಳಾಗಿ ಹಾಗೂ ಸಂಘದ ಕಾರ್ಯಾಧ್ಯಕ್ಷ ಆನಂದ ಹೆಗ್ಡೆ, ಉಪಾಧ್ಯಕ್ಷ ಅರುಣ್ ಹೆಗ್ಡೆ, ಗೌರವ ಕಾರ್ಯದರ್ಶಿ ಸುರೇಂದ್ರನಾಥ್ ಹೆಗ್ಡೆ, ಗೌರವ ಕೋಶಾಧಿಕಾರಿ ಸಿಎ| ಸುರೇಶ್ ಹೆಗ್ಡೆ, ಜೊತೆ ಕಾರ್ಯಾದರ್ಶಿ ರೂಪೇಶ್‌ಕುಮಾರ್ ಹೆಗ್ಡೆ, ಜೊತೆ ಕೋಶಾಧಿಕಾರಿ ಹರೀಶ್ ಹೆಗ್ಡೆ, ಮಹಿಳಾ ವಿಭಾಗಧ್ಯಕ್ಷೆ ಛಾಯಾ ಹೆಗ್ಡೆ, ಯುವ ವಿಭಾಗಧ್ಯಕ್ಷ ಸುನಿಲ್ ಹೆಗ್ಡೆ ವೇದಿಕೆಯಲ್ಲಿ ಆಸೀನರಾಗಿದ್ದರು.



ಇದೇ ಸಂದರ್ಭದಲ್ಲಿ ಹೆಗ್ಗಡೆ ಭವನ ಕಟ್ಟಡದಲ್ಲಿನ ಕಿರು ಸಭಾಗೃಹಕ್ಕೆ ದಿ| ಶ್ರೀ ನಾರಾಯಣ್ ಟಿ.ಹೆಗ್ಗಡೆ (ಯೆರ್ಲಪಾಡಿ ನಡುಮನೆ) ಬ್ಯಾಂಕ್ವೇಟ್ ಹಾಲ್ ಎಂದಾಗಿಸಿ ನಾಮಕರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಉಮಾ ಬಾಲಕೃಷ್ಣ ಹೆಗ್ಡೆ ದಂಪತಿ ರಿಬ್ಬನ್ ಕತ್ತರಿಸಿ ಸೇವೆಗೆ ಚಾಲನೆಯನ್ನಿತ್ತರು.

ಹೇಮಾವತಿ ಎನ್.ಹೆಗ್ಗಡೆ ಉಪಸ್ಥಿತರಿದ್ದು ಅವರನ್ನು ವಿಶೇಷವಾಗಿ ಗೌರವಿಸಲಾಯಿತು.ಮೂರು ದಶಕಗಳಿಗೂ ಅಧಿಕಾವಧಿ ಸಂಘಕ್ಕೆ ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ ಸಂಘದ ಮಾಜಿ ಉಪಾಧ್ಯಕ್ಷ ಮನ್ಮಥ ಜಿ.ಹೆಗ್ಡೆ ಅವರಿಗೆ ‘ಜೀವನ ಶ್ರೇಷ್ಠ ಪ್ರಶಸ್ತಿ’ (ಪತ್ನಿ ಶುಭಾವತಿ ಹೆಗ್ಗಡೆ ಜೊತೆಗೂಡಿ) ಪ್ರದಾನಿಸಿ ಗೌರವಿಸಲಾಯಿತು.


ಸಮಾಜಸೇವೆ ಹಾಗೂ ಸಂಘದ ಕಾರ್ಯಚಟುವಟಿಕೆಗಳಲ್ಲಿ ಸಕ್ರೀಯರಾಗಿದ್ದು ಸೇವೆ ಸಲ್ಲಿಸಿದ ಹಿರಿಯರಿಗೆ ವಾರ್ಷಿಕವಾಗಿ ಪ್ರದಾನಿಸುವ ಹಿರಿಯ ನಾಗರಿಕ ಪ್ರಶಸ್ತಿಗಳನ್ನು ಕೊಡಮಾಡಲಾಗಿದ್ದು, ಮರಣೋತ್ತರವಾಗಿ ನೀಡಲ್ಪಡುವ ದಿವಂಗತ ರಾಘವ ಬಿ.ಹೆಗ್ಡೆ ಪ್ರಶಸ್ತಿಯನ್ನು ಶ್ರೀಮತಿ ತಾರಾಮತಿ ಹೆಗ್ಡೆ (ಬೆಂಗಳೂರು), ದಿವಂಗತ ನಾರಾಯಣ ಟಿ.ಹೆಗ್ಡೆ ಪ್ರಶಸ್ತಿಯನ್ನು ಶ್ರೀಮತಿ ಹೇಮಾವತಿ ಹೆಗ್ಡೆ (ಮುಲುಂಡ್), ದಿವಂಗತ ಸಂಜೀವ ಡಿ.ಹೆಗ್ಡೆ ಪ್ರಶಸ್ತಿಯನ್ನು ಶ್ರೀಮತಿ ಸುಲೋಚನ ಹೆಗ್ಡೆ (ಮುಲುಂಡ್) ಹಾಗೂ ದಿವಂಗತ ಹಲೈಟ್ಟು ಜಯರಾಮ ಹೆಗ್ಡೆ ಪ್ರಶಸ್ತಿಯನ್ನು ಶ್ರೀಮತಿ ಸುಮಿತ್ರ ಹೆಗ್ಡೆ ಕಲ್ಯಾಣ್ (ಪರವಾಗಿ ಸುಪುತ್ರ ರೋಹನ್ ಹೆಗ್ಡೆ) ಇವರಿಗೆ ಅತಿಥಿಗಳು ಪ್ರಶಸ್ತಿಗಳನ್ನು ಪ್ರದಾನಿಸಿ ಗೌರವಿಸಿದರು.



ಅಂತೆಯೇ ಸಂಘದ ಕಾರ್ಯಕಾರಿ ಸಮಿತಿಯ ಮಾಜಿ ಸದಸ್ಯ ಹಾಗೂ ಆಂತರಿಕ ಲೆಕ್ಕಪರಿಶೋಧಕ ಶಂಕರ ಹೆಗ್ಡೆ ಮುಲುಂಡ್ ಇವರನ್ನು (ಪತ್ನಿ ಸುಮತಿ ಹೆಗ್ಡೆ ಸಹಿತ) ಹಾಗೂ ಪ್ರಾಯೋಜಕರು, ಕೊಡುಗೈದಾನಿಗಳನ್ನೂ ಗೌರವಿಸಲಾಯಿತು. ಪುರಸ್ಕೃತರು ಸಂದರ್ಭೋಚಿತ ವಾಗಿ ಮಾತನಾಡಿ ಗೌರವಕ್ಕಾಗಿ ಅಭಿವಂದಿಸಿದರು.


ಡಾ| ಮನೋರಂಜನ್ ಹೆಗ್ಡೆ ಮಾತನಾಡಿ ಮುಂಬಯಿಯಲ್ಲಿ ಭವ್ಯವಾದ ಕಟ್ಟಡ ನಿರ್ಮಿಸುವುದು ಸುಲಭದ ಕೆಲಸವಲ್ಲ. ಇದರ ಹಿಂದೆ ಅನೇಕರು ನಿಸ್ವಾರ್ಥ ಸೇವೆ ಮತ್ತು ಪರಿಶ್ರಮವನ್ನು ಧಾರೆಎರೆದಿರುತ್ತಾರೆ. ಹೆಗ್ಗಡೆ ಸೇವಾ ಸಂಘದ ಸುದೀರ್ಘ ಪಯಣದಲ್ಲಿ ಸಂಘವನ್ನು ಸ್ಥಾಪಿಸಿ, ಬೆಳೆಸಿ, ಇಂದಿನ ಮಟ್ಟಕ್ಕೆ ತಂದು ನಿಲ್ಲಿಸಿದ ಎಲ್ಲಾ ಪದಾಧಿಕಾರಿಗಳ ಹಾಗೂ ಸದಸ್ಯರ ಕೊಡುಗೆ ಅಪಾರವಾಗಿದೆ.

ಜೀವನೋಪಾಯಕ್ಕಾಗಿ ಊರು ಬಿಟ್ಟು ಮುಂಬಯಿಗೆ ಬಂದು ದುಡಿದು, ಸಮಾಜದ ಏಳಿಗೆಗಾಗಿ ಸಂಘವನ್ನು ಕಟ್ಟಿ ಬೆಳೆಸಿದ ಹಿರಿಯರ ಸೇವೆಯನ್ನು ಸ್ಮರಿಸಿ, ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆಯನ್ನು ಪರಿಚಯಿಸುವಲ್ಲಿ ಇಂತಹ ಸಮಾರಂಭಗಳು ಮಹತ್ವದ ಪಾತ್ರ ವಹಿಸುತ್ತವೆ. ಇಂದಿನ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಹೆಚ್ಚಾಗುತ್ತಿವೆ. ಆದ್ದರಿಂದ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕು.

ವಿಶೇಷವಾಗಿ ಯುವಜನರು ಮದ್ಯಪಾನ, ಧೂಮಪಾನ ಮತ್ತು ಇತರ ಅನಾರೋಗ್ಯಕರ ಅಭ್ಯಾಸಗಳಿಂದ ದೂರವಿದ್ದು, ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದರು.ಈ ಹೆಗ್ಗಡೆ ಸಂಘವು ಸಮಾಜಮುಖಿ ಕಾರ್ಯಗಳ ಮೂಲಕ ಪ್ರಶಂಸೆಗೆ ಪಾತ್ರವಾಗಿದೆ. ಸಂಘವು ಮಾತೃಸಂಘಕ್ಕೆ ನಿರಂತರ ಸಹಕಾರ ನೀಡುತ್ತಿದ್ದು, ವಿಶೇಷವಾಗಿ ವಿದ್ಯಾಥಿವೇತನದ ನೆರವಿಗಾಗಿ ಕೃತಜ್ಞತೆ ಸಲ್ಲಿಸುತ್ತೇವೆ. ಉಭಯ ಸಂಘಗಳ ನಡುವಿನ ಬಾಂಧವ್ಯ ಇದೇ ರೀತಿ ಮುಂದುವರಿಯಲಿ. ಸಮಾಜಸೇವೆಯ ಮೂಲಕ ಇನ್ನಷ್ಟು ಉತ್ತಮ ಕಾರ್ಯಗಳನ್ನು ಕೈಗೊಳ್ಳುವ ಅವಕಾಶ ದೊರೆಯಲಿ ಎಂದ ಉಮೇಶ್ ಹೆಗ್ಡೆ ತಿಳಿಸಿದರು.

ಸಂದೀಪ್ ಹೆಗ್ಡೆ ಮಾತನಾಡಿ ಸಂಘಟನೆಯಿಂದ ಸಮುದಾಯದ ಬಾಂಧವ್ಯ ವೃದ್ಧಿಯಾಗುತ್ತಿದೆ. ಸಂಘ-ಸಂಸ್ಥೆಗಳಿಂದ ನಮಗೇನು ಸಿಕ್ಕಿದೆ ಎಂದು ಪ್ರಶ್ನಿಸುವುದಕ್ಕಿಂತ, ನಾವು ಸಂಘಕ್ಕೆ ಏನು ಕೊಡುಗೆ ನೀಡಿದ್ದೇವೆ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಸಂಘವು ನಮಗೆ ಸಮುದಾಯದ ಗುರುತು ಮತ್ತು ಆತ್ಮವಿಶ್ವಾಸವನ್ನು ನೀಡಿದೆ. ನಮ್ಮವರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವಲ್ಲಿ ಸಂಘದ ಪಾತ್ರ ಮಹತ್ವದ್ದಾಗಿದೆ.
ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಹೊಸ ಪರಿಚಯಗಳ ಜೊತೆಗೆ ಹಳೆಯ ಸಂಬಂಧಗಳು ಪುನಃ ಬೆಸೆಯುತ್ತವೆ. ಬಂಧುಗಳ ನಡುವಿನ ಸಂಪರ್ಕ ಗಟ್ಟಿಯಾಗುತ್ತದೆ. ಆದ್ದರಿಂದ ಎಲ್ಲರೂ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂಘಟನೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದರು.

ಮುಂಬಯಿ ಮಹಾನಗರದಲ್ಲಿ ನೆಲೆಸಿರುವ ಹೆಗ್ಗಡೆ ಸಮುದಾಯದವರಿಗೆ ವಾರ್ಷಿಕೋತ್ಸವವು ಭಗವಂತನ ಆರಾಧನೆ, ಸಂಪ್ರದಾಯಗಳ ಪಾಲನೆ ಹಾಗೂ ಸಮುದಾಯದ ಬಾಂಧವ್ಯವನ್ನು ಬಲಪಡಿಸುವ ಪ್ರಮುಖ ಸಂದರ್ಭವಾಗಿದೆ. ಆದ್ದರಿಂದ ಎಲ್ಲರೂ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಧಾರ್ಮಿಕ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ಹಿರಿಯರು ರೂಪಿಸಿಕೊಟ್ಟ ಸಂಪ್ರದಾಯಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಹಿರಿಯ ನಾಗರಿಕರಿಗೆ ಸನ್ಮಾನಿಸುವ ಕಾರ್ಯಕ್ರಮವೂ ಮಹತ್ವದ್ದಾಗಿದೆ.
ಈ ಸಂದರ್ಭದಲ್ಲಿ ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಿದ ಸಮಾಜದ ಹಿರಿಯರ ಸೇವೆ ಮತ್ತು ಮಾರ್ಗದರ್ಶನವನ್ನು ಸ್ಮರಿಸಿ ಸಂಘದ ಕಾರ್ಯಕಾರಿ ಸಮಿತಿಯ ಕಾರ್ಯವೈಖರಿ ಮತ್ತು ದಾನಿಗಳ ಉದಾರ ಕೊಡುಗೆಗಳನ್ನು ಶ್ಲಾಘಿಸುತ್ತೇನೆ ಎಂದ ಅಧ್ಯಕ್ಷೀಯ ಭಾಷಣದಲ್ಲಿ ಮನೋಜ್ ಹೆಗ್ಡೆ ತಿಳಿಸಿದರು. ಕಾರ್ಯಕ್ರಮಗಳಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರನೇಕರು ಹಾಜರಿದ್ದರು.
ವಿದ್ವಾನ್ ಗುರುಪ್ರಸಾದ್ ಭಟ್ ತನ್ನ ಪೌರೋಹಿತ್ಯದಲ್ಲಿ ಬೆಳಿಗ್ಗೆ ಗಣಹೋಮ, ಶ್ರೀ ಸತ್ಯನಾರಾಯಣ ಮಹಾಪೂಜೆ, ಮಧ್ಯಾಹ್ನ ಮಹಾಮಂಗಳಾರತಿ ನೆರವೇರಿಸಿ ತೀರ್ಥಪ್ರಸಾದ ವಿತರಿಸಿ ಹರಸಿದರು. ಸರೋಜಾ ರತ್ನಾಕರ ಹೆಗ್ಡೆ ಹಾಗೂ ಮಂಗಳ ರವಿ ಹೆಗ್ಡೆ ದಂಪತಿಗಳು ಪೂಜಾಧಿಗಳ ಯಜಮಾನತ್ವ ವಹಿಸಿದ್ದರು. ದಸರಾ ನಿಮಿತ್ತ ಸಂಜೆ ದಾಂಡಿಯಾ ನೃತ್ಯ ನಡೆಸಿದರು.ಕುಲದೇವರು ಶ್ರೀ ವೀರಮಾರುತಿ ಹನುಮಾನ್ ದೇವರು ಮತ್ತು ಶೃಂಗೇರಿ ಶಾರದಾ ದೇವಿಯನ್ನು ಸ್ತುತಿಸಿ ಸಮಾರಂಭ ಆದಿಗೊಳಿಸಲಾಗಿದ್ದು, ಮಹಿಳಾ ವಿಭಾಗದ ಸದಸ್ಯೆಯರು ಪ್ರಾರ್ಥನೆಯನ್ನಾಡಿದರು.

ಕೌಶಲ್ಯ ಹೆಗ್ಡೆ, ಡಾ| ನಯನಾಂಬಿಕ ಎಸ್.ಹೆಗ್ಡೆ, ಪ್ರಭಾ ಹೆಗ್ಡೆ ಥಾಣೆ ಹಾಗೂ ಶಶಿ ಹೆಗ್ಡೆ ಪನ್ವೇಲ್ ಅತಿಥಿಗಳನ್ನು ಪರಿಚಯಿಸಿದರು. ಪದಾಧಿಕಾರಿಗಳು ಅತಿಥಿಗಳಿಗೆ ಸ್ಮರಣಿಕೆ, ಪುಷ್ಪಗುಚ್ಫ ಗಳನ್ನೀಡಿ ಗೌರವಿಸಿದರು. ಸಿಎ| ಸುರೇಶ್ ಹೆಗ್ಡೆ ಸಂಘದ ವಾರ್ಷಿಕ ವರದಿ ವಾಚಿಸಿದರು. ಸುಜ್ಞಾ ಹೆಗ್ಡೆ, ಕೃಪಾ ಹೆಗ್ಡೆ ವಿಕ್ರೋಲಿ, ಶೋಭಾ ಹೆಗ್ಡೆ, ತಾರಮತಿ ಹೆಗ್ಡೆ, ಸುಜತಾ ಹೆಗ್ಡೆ, ಅಪೂರ್ವ ಹೆಗ್ಡೆ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿ ಅಭಿನಂದಿಸಿದರು.
ಮಹಿಳಾ ಕಾರ್ಯದರ್ಶಿ ಸವಿತಾ ಹೆಗ್ಡೆ ಸಾಧಕ ಪ್ರತಿಭಾನ್ವಿತ ಮಕ್ಕಳ ಯಾದಿ ವಾಚಿಸಿದರು. ಮಾಧ್ಯಮ ಸಂಚಾಲಕ ಲ| ಮುರಳೀಧರ್ ಹೆಗ್ಡೆ ಸ್ವಾಗತಿಸಿ, ಪ್ರಸ್ತಾವನೆಗೈದ, ಕಾರ್ಯಕ್ರಮ ನಿರೂಪಿಸಿ ಆಭಾರ ಮನ್ನಿಸಿದರು. ರಾಷ್ಟ್ರಗೀತೆಯೊಂದಿಗೆ ಸಮಾರಂಭ ಮುಕ್ತಾಯ ಗೊಂಡಿತು.
