
ಬರಹ: ಸತೀಶ್ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
ಕೃಪೆ: ಎಸ್ ಕೆ ಶೆಟ್ಟಿ
ವಾಯ್ಸ್ ಆಫ್ ತುಳುನಾಡು ವಿಶೇಷ ಅಂಕಣ :

ಜೀವನವೆಂದರೆ ಬರಿ ಉಸಿರಾಡುವುದಷ್ಟೇ ಅಲ್ಲ; ನೂರಾರು ಮುಖಗಳಲ್ಲಿ ಮುಗುಳ್ನಗೆ ಅರಳಿಸುವುದು, ಬಿದ್ದವರಿಗೆ ಹೆಗಲಾಗಿ ನಿಲ್ಲುವುದು ಮತ್ತು ಕತ್ತಲಿನಲ್ಲಿರುವ ಬಾಳಿಗೆ ಬೆಳಕಾಗುವುದು. ಈ ಮಾತಿಗೆ ಅಕ್ಷರಶಃ ಜೀವಂತ ಸಾಕ್ಷಿಯಾಗಿ ನಿಲ್ಲುವವರು ಭಾರತೀಯ ಆತಿಥ್ಯ ಮತ್ತು ಮೂಲಭೂತ ಸೌಕರ್ಯ ವಲಯದ ಮೇರು ವ್ಯಕ್ತಿತ್ವ, ಡಾ. ಕೆ. ಪ್ರಕಾಶ್ ಶೆಟ್ಟಿ.


೧. ಶೂನ್ಯದಿಂದ ಸಾಮ್ರಾಜ್ಯದವರೆಗೆ:
ಒಂದು ಕಠಿಣ ಪಯಣ೧೯೫೯ ಜುಲೈ ೨೧ ರಂದು ಕೊರಂಗಪಾಡಿಯ ಸರಳ ಕುಟುಂಬದಲ್ಲಿ ತಂದೆ ಕೆ. ಮಾಧವ ಶೆಟ್ಟಿ ಮತ್ತು ತಾಯಿ ರತ್ನ ಎಂ. ಶೆಟ್ಟಿ ಅವರ ಮಗನಾಗಿ ಜನಿಸಿದ ಪ್ರಕಾಶ್ ಶೆಟ್ಟಿ ಅವರ ಬಾಲ್ಯ ಬಡತನ ಮತ್ತು ಕಷ್ಟಗಳಿಂದ ಕೂಡಿದ್ದರೂ, ಕನಸುಗಳು ಮಾತ್ರ ಬೆಟ್ಟದಷ್ಟಿದ್ದವು. ೧೯೮೦ರಲ್ಲಿ ಪದವಿ ಮುಗಿಸಿ, ಕಣ್ಣಲ್ಲಿ ನೂರಾರು ನಿರೀಕ್ಷೆಗಳನ್ನು ಹೊತ್ತು ಬೆಂಗಳೂರಿನಂತಹ ಮಹಾನಗರಕ್ಕೆ ಹೆಜ್ಜೆ ಇಟ್ಟಾಗ ಅವರ ಕೈಲಿದ್ದದ್ದು ಕೇವಲ ಆತ್ಮವಿಶ್ವಾಸ ಒಂದೇ.



೧೯೯೩ರಲ್ಲಿ ‘ಬಂಜಾರ’ ಎಂಬ ಸಣ್ಣ ಏಕಾಂಗಿ ರೆಸ್ಟೋರೆಂಟ್ನಿಂದ ಆರಂಭವಾದ ಅವರ ಕಾಯಕ, ಇಂದು ದೇಶಾದ್ಯಂತ ‘ಗೋಲ್ಡ್ಫಿಂಚ್’ ಎಂಬ ಬೃಹತ್ ಸಾಮ್ರಾಜ್ಯವಾಗಿ ಬೆಳೆದು ನಿಂತಿದೆ.
ತಾವು ಕಟ್ಟಿದ ‘MRG ಗ್ರೂಪ್’ ಎಂಬ ಹೆಸರಿನಲ್ಲೇ ಅವರ ಕುಟುಂಬ ಪ್ರೇಮವಿದೆ:M – ತಂದೆ ಮಾಧವ , R – ತಾಯಿ ರತ್ನ, G– ಮಗ ಗೌರವ್, ಹೆತ್ತವರ ಆಶೀರ್ವಾದ ಮತ್ತು ಕುಟುಂಬದ ಬೆಂಬಲವೇ ತಮ್ಮ ಯಶಸ್ಸಿನ ಮೂಲ ಮಂತ್ರ ಎಂಬುದನ್ನು ಅವರು ಜಗತ್ತಿಗೆ ನಿರೂಪಿಸಿದ್ದಾರೆ.

೨. ತುಳುನಾಡ ಮಣ್ಣಿನ ವಾಸನೆ ಮತ್ತು ಸಂಸ್ಕೃತಿಯ ಜ್ಯೋತಿ :
ಎಷ್ಟೇ ಎತ್ತರಕ್ಕೆ ಬೆಳೆದರೂ ತಾವು ಬಂದ ದಾರಿಯನ್ನು, ಹುಟ್ಟಿದ ಮಣ್ಣನ್ನು ಮರೆಯದಿರುವುದೇ ಮಹಾಪುರುಷರ ಲಕ್ಷಣ. ಗ್ರಾಮೀಣ ಭಾಗದ ಕೆಸರುಗದ್ದೆಗೆ ಸೀಮಿತವಾಗಿದ್ದ ತುಳುನಾಡಿನ ಜಾನಪದ ಕ್ರೀಡೆ ‘ಕಂಬಳ’ವನ್ನು ಬೆಂಗಳೂರಿನಂತಹ ಮಹಾನಗರದ ಹೃದಯಭಾಗಕ್ಕೆ ತಂದು, ಸುಮಾರು ೧೦ ಲಕ್ಷ ಜನರನ್ನು ಒಂದುಗೂಡಿಸಿ ಕಂಬಳದ ಘನತೆಯನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.

ಮಂಗಳೂರಿನಲ್ಲಿ ವರ್ಷಗಳ ಕಾಲ ಕಂಬಳವನ್ನು ಯಶಸ್ವಿಯಾಗಿ ಆಯೋಜಿಸಿ, ಕರಾವಳಿಯ ಸಾಂಸ್ಕೃತಿಕ ವೈಭವವನ್ನು ವಿಶ್ವಮಟ್ಟದಲ್ಲಿ ಜಗಜ್ಜಾಹೀರುಗೊಳಿಸಿದ ಇವರ ಸಾಂಸ್ಕೃತಿಕ ಪ್ರೀತಿ ಪ್ರತಿಯೊಬ್ಬ ಕನ್ನಡಿಗನಲ್ಲೂ ಹೆಮ್ಮೆ ಮೂಡಿಸುತ್ತದೆ.

೩. ಹಸಿಯುವ ಹೊಟ್ಟೆಗೆ ಅನ್ನ, ಕಣ್ಣೀರೊರೆಸುವ ಕರುಣೆ” :
ಹಸಿವು ಎಂಥದ್ದು ಎಂಬುದು ಅನುಭವಿಸಿದವನಿಗಷ್ಟೇ ಗೊತ್ತು.”ಡಾ. ಪ್ರಕಾಶ್ ಶೆಟ್ಟಿ ಅವರ ಹೃದಯದ ವೈಶಾಲ್ಯತೆ ವ್ಯಕ್ತವಾಗುವುದೇ ಅವರ ಸಮಾಜಮುಖಿ ಸೇವೆಯಲ್ಲಿ.’ಆಹಾರ’ ಯೋಜನೆ: ಪ್ರತಿ ಗುರುವಾರ ದೆಹಲಿ, ಮುಂಬೈ, ಬೆಂಗಳೂರು ಮತ್ತು ಮಂಗಳೂರಿನ ಬೀದಿಬದಿಯ ಬಡಜನರ ಹಸಿವನ್ನು ನೀಗಿಸಲು ಉಚಿತ ಊಟ ಒದಗಿಸುವ ಕಾಯಕ ನಿರಂತರವಾಗಿ ನಡೆಯುತ್ತಿದೆ.

ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆ. : ‘ಪ್ರಕಾಶಾಭಿನಂದನ’ ಕಾರ್ಯಕ್ರಮದ ಮೂಲಕ ಈ ನಿಧಿಯನ್ನು ೧.೫ ಕೋಟಿ ರೂಪಾಯಿಗಳಿಂದ ೬ ಕೋಟಿ ರೂಪಾಯಿಗಳಿಗೆ ಏರಿಸಿ, ಅಸಂಖ್ಯಾತ ಬಡ ಕುಟುಂಬಗಳ ಕಣ್ಣೀರನ್ನು ಒರೆಸಿದ್ದಾರೆ.

ನೈಸರ್ಗಿಕ ವಿಕೋಪಗಳಿಗೆ ಸ್ಪಂದನೆ : ಉತ್ತರ ಕರ್ನಾಟಕ, ಕೊಡಗು ಮತ್ತು ಬೆಳ್ತಂಗಡಿಯಲ್ಲಿ ಪ್ರವಾಹ ಬಂದಾಗ, ಸಂತ್ರಸ್ತರ ನೋವಿಗೆ ತಕ್ಷಣ ಮಿಡಿದು ಪರಿಹಾರ ಸಾಮಗ್ರಿಗಳನ್ನು ವಿತರಿಸಿ ಬದುಕಿಗೆ ಆಸರೆಯಾಗಿದ್ದಾರೆ.
೪. ಅಂಧರಿಗೆ ಬೆಳಕು, ಭವಿಷ್ಯಕ್ಕೆ ನೆರಳು :
ಅನಾಥಾಶ್ರಮಗಳು ಮತ್ತು ಅಂಧರ ಶಾಲೆಗಳಿಗೆ ನಿರಂತರ ಸಹಾಯಸ್ತ ಚಾಚುವುದಷ್ಟೇ ಅಲ್ಲದೆ, ಶಿಕ್ಷಣ ಕ್ಷೇತ್ರದಲ್ಲೂ ದೊಡ್ಡ ಕ್ರಾಂತಿ ಮಾಡಿದ್ದಾರೆ. ಬಂಟ್ಸ್ ಸಂಘದ ಆರ್.ಎನ್.ಎಸ್ ವಿದ್ಯಾ ನಿಕೇತನ ೨ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗಿದ್ದಾರೆ.

ಅಷ್ಟೇ ಅಲ್ಲದೆ, ಪ್ರಸ್ತುತ ೩,೦೦೦ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿರುವ ಇವರು, ಮಂಗಳೂರಿನ ಮಹತ್ವಾಕಾಂಕ್ಷೆಯ ‘ಗೋಲ್ಡ್ಫಿಂಚ್ ಸಿಟಿ’ ಯೋಜನೆಯ ಮೂಲಕ ಬರೋಬ್ಬರಿ ೬೦,೦೦೦ಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಬೃಹತ್ ಕನಸನ್ನು ನನಸು ಮಾಡುತ್ತಿದ್ದಾರೆ.
೫. ಮುಕುಟಕ್ಕೇರಿದ ಗೌರವಗಳು ಮತ್ತು ಜನಪ್ರಿಯತೆ :
ಇವರ ಆರು ದಶಕಗಳ ಸಾರ್ಥಕ ಜೀವನವನ್ನು ಗೌರವಿಸಲು ೨೦೧೯ರಲ್ಲಿ ಮಂಗಳೂರಿನಲ್ಲಿ ನಡೆದ ‘ಪ್ರಕಾಶಭಿನಂದನೆ’ ಕಾರ್ಯಕ್ರಮದಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ನಟ ಯಶ್ ಸೇರಿದಂತೆ ೬೦,೦೦೦ಕ್ಕೂ ಅಧಿಕ ಜನರು ಭಾಗವಹಿಸಿದ್ದು ಇವರ ಜನಪ್ರಿಯತೆಗೆ ಹಿಡಿದ ಕನ್ನಡಿ.



ಇವರ ಅಗಾಧ ಸಾಧನೆಗೆ ಸಂದ ಪ್ರಮುಖ ಪ್ರಶಸ್ತಿಗಳು :
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೨೦೧೯)ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್, ವಿಜನರಿ ಹೋಟೆಲ್ ಓನರ್ ಆಫ್ ದಿ ಇಯರ್ (IDE Global), ಟೈಮ್ಸ್ ಗ್ರೂಪ್ನಿಂದ ‘ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್’ (೨೦೨೧), ಇವರ ಜೀವನ ಹಾದಿಯನ್ನು ಬಿಂಬಿಸುವ ‘ದಾರಿ ದೀಪ’ ಹಾಗೂ ‘ಹೊಂಬೆಳಕು’ ಕೃತಿಗಳು ಇಂದಿನ ಯುವಪೀಳಿಗೆಗೆ ಮಾರ್ಗದರ್ಶಿಯಾಗಿವೆ.

ಮಹಾನ್ ಮಾನವತಾವಾದಿ :
ಧರ್ಮ, ಸಾಹಿತ್ಯ, ಶಿಕ್ಷಣ, ಉದ್ಯಮ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಡಾ. ಕೆ. ಪ್ರಕಾಶ್ ಶೆಟ್ಟಿ ಅವರು, ಧರ್ಮಪತ್ನಿ ಶ್ರೀಮತಿ ಆಶಾ ಪ್ರಕಾಶ್ ಶೆಟ್ಟಿ, ಪುತ್ರ ಗೌರವ್ ಶೆಟ್ಟಿ ಮತ್ತು ಸೊಸೆ ಅನುಷ್ಕಾ ಶೆಟ್ಟಿ ಅವರನ್ನೊಳಗೊಂಡ ಸಂತೃಪ್ತ ಕುಟುಂಬದೊಂದಿಗೆ ವೃತ್ತಿ ಮತ್ತು ಜೀವನದ ನಡುವೆ ಅದ್ಭುತ ಸಮತೋಲನ ಕಾಯ್ದುಕೊಂಡಿದ್ದಾರೆ.


ಅಯೋಧ್ಯೆಯ ರಾಮಮಂದಿರ ನಿರ್ಮಾಣದಿಂದ ಹಿಡಿದು ಸ್ಥಳೀಯ ದೇವಾಲಯಗಳ ಜೀರ್ಣೋದ್ಧಾರಗಳವರೆಗೆ, ಬಡವರ ಮದುವೆಗೆ ಆಸರೆಯಾಗುವ ಸಮುದಾಯ ಭವನಗಳ ನಿರ್ಮಾಣದಿಂದ ಹಿಡಿದು ಹಸಿವ ನಿವಾರಣೆಯವರೆಗೆ—ಇವರ ಪ್ರತಿಯೊಂದು ಹೆಜ್ಜೆಯೂ ಮಾನವೀಯತೆಯ ದ್ಯೋತಕ.

ಡಾ. ಕೆ. ಪ್ರಕಾಶ್ ಶೆಟ್ಟಿ ಅವರು ಕೇವಲ ಒಬ್ಬ ಯಶಸ್ವಿ ಉದ್ಯಮಿಯಷ್ಟೇ ಅಲ್ಲ, ನೊಂದವರ ಬಾಳಿನ ನಿಜವಾದ ‘ಹೊಂಬೆಳಕು’. ಇವರ ಜೀವನ ಪಯಣವು ಸಾಧಿಸಬೇಕೆಂಬ ತುಡಿತವಿರುವ ಪ್ರತಿಯೊಬ್ಬ ಯುವಕನಿಗೂ ಶಾಶ್ವತ ಸ್ಫೂರ್ತಿಯ ಸೆಲೆ.





