November 3, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ರಂಗಸ್ಥಳದಲ್ಲಿ ಅರಳಿದ ಮಾತೃತ್ವದ ಶಕ್ತಿ: 9 ತಿಂಗಳ ಗರ್ಭಿಣಿಯಾಗಿ ಕಯಾದು ಪಾತ್ರದಲ್ಲಿ ಮಿಂಚಿದ ಯಕ್ಷಸಾಧಕಿ ದಿಶಾ ಸಿ. ಶೆಟ್ಟಿ ;

ವರದಿ /ಚಿತ್ರ :ವಿನೋದ್ ಶೆಟ್ಟಿ ಉಡುಪಿ

ಮಂಗಳೂರು / ಸುರತ್ಕಲ್ :ಯಕ್ಷಗಾನ ಎಂದರೆ ಗಂಡುಕಲೆ. ಹಗಲು-ರಾತ್ರಿ ಕುಣಿದು, ಅಬ್ಬರದ ಮಾತು, ಭಾರದ ವೇಷ… ಇದು ಗಂಡಸರಿಗಷ್ಟೇ ಸಾಧ್ಯ ಎಂಬ ಮಾತಿತ್ತು. ಆದರೆ ಕಾಲ ಬದಲಾದಂತೆ ಆ ಕಲ್ಪನೆಯನ್ನೇ ಬುಡಮೇಲು ಮಾಡಿದವರು ಹೆಣ್ಣುಮಕ್ಕಳು. ಆ ಸಾಲಿನಲ್ಲಿ ದಶಕದಿಂದಲೂ ತನ್ನದೇ ಛಾಪು ಮೂಡಿಸಿ, ಯಕ್ಷರಂಗದಲ್ಲಿ ತನ್ನ ಹೆಸರನ್ನು ಅಚ್ಚಳಿಯದೆ ಉಳಿಸಿಕೊಂಡಿರುವ ಪ್ರತಿಭೆ ಶ್ರೀಮತಿ ದಿಶಾ ಸಿ. ಶೆಟ್ಟಿ.

ಇದೀಗ ದಿಶಾ ಅವರ ಹೆಸರು ಮತ್ತೊಮ್ಮೆ ಕರಾವಳಿಯ ಮನೆಮಾತಾಗಿದೆ. ಕಾರಣ, ಅವರು 9 ತಿಂಗಳ ತುಂಬು ಗರ್ಭಿಣಿಯಾಗಿದ್ದರೂ ಯಕ್ಷಗಾನ ರಂಗಸ್ಥಳದಲ್ಲಿ ಹೆಜ್ಜೆ ಹಾಕಿ, ಪಾತ್ರಕ್ಕೆ ಜೀವ ತುಂಬಿರುವುದು.*ರಕ್ತಗತವಾಗಿ ಬಂದ ಕಲೆ*ದಿಶಾ ಅವರಿಗೆ ಯಕ್ಷಗಾನ ಹೊಸದಲ್ಲ. ಮೂಲತಃ ಸುರತ್ಕಲ್‌ನ ಕುಟುಂಬ ಅವರದು. ತಾಯಿ ಪ್ರಮದಾ ಸಿ. ಶೆಟ್ಟಿ ಮತ್ತು ತಾಯಿಯ ಸಹೋದರಿಯರು ಯಕ್ಷಗಾನ ಕಲಾವಿದೆಯರು. ಹಾಗಾಗಿ ಬಾಲ್ಯದ ತೊಟ್ಟಿಲಲ್ಲೇ ಯಕ್ಷಗಾನದ ಹೆಜ್ಜೆ, ಪದ್ಯ ಅವರಿಗೆ ಕೇಳಿಬಂದಿತ್ತು.

ಆ ಆಸಕ್ತಿಯನ್ನು ಶಿಸ್ತಿನ ಸಾಧನೆಯಾಗಿ ರೂಪಿಸಿದ್ದು ಅವರ ಗುರುಗಳಾದ ನಾಟ್ಯಗುರು ರಕ್ಷಿತ್ ಪಡ್ರೆ ಮತ್ತು ರಾಕೇಶ್ ರೈ ಅಡ್ಕ ಅವರು. ಅವರ ಶಿಷ್ಯೆಯಾಗಿ ದಿಶಾ ಅವರು ಇಂದು ಮಹಿಳಾ ಯಕ್ಷಗಾನದಲ್ಲಿ ಅಪ್ರತಿಮ *ಪುಂಡು ವೇಷಧಾರಿ* ಎಂದು ಗುರುತಿಸಿಕೊಂಡಿದ್ದಾರೆ.

ಸುದರ್ಶನ, ಅಭಿಮನ್ಯು, ಅಶ್ವತ್ಥಾಮ, ಚಂಡ-ಮುಂಡರು – ಇಂತಹ ಗಂಡು ಪಾತ್ರಗಳೇ ಅವರಿಗೆ ಕೀರ್ತಿ ತಂದುಕೊಟ್ಟವು. ಅದರಲ್ಲೂ ಅವರ ‘ರಾಧಾ ವಿಲಾಸದ ಕೃಷ್ಣ’ ನೋಡದ ಯಕ್ಷಾಭಿಮಾನಿಗಳೇ ಕರಾವಳಿಯಲ್ಲಿ ಇಲ್ಲ. ತಮ್ಮ ಅಕ್ಕ ಡಾ. ವರ್ಷಾ ಶೆಟ್ಟಿ ಅವರೊಂದಿಗೆ ಅವರು ಮಾಡುವ ಕೃಷ್ಣ-ರಾಧೆಯರ ಜುಗಲ್‌ಬಂದಿ ಪ್ರಯೋಗಕ್ಕೆ ದೊಡ್ಡ ಅಭಿಮಾನಿ ಬಳಗವೇ ಇದೆ.

ಸುರತ್ಕಲ್ ರಂಗಸ್ಥಳದಲ್ಲಿ ಆ ಕ್ಷಣ ಪ್ರಸ್ತುತ ಮೂಡುಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ ಮತ್ತು ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿರುವ ದಿಶಾ ಅವರು, ತಾಯ್ತನದ ಅತ್ಯಂತ ಸೂಕ್ಷ್ಮ ಹಂತದಲ್ಲಿದ್ದಾರೆ.ಇಂತಹ ಸಂದರ್ಭದಲ್ಲಿ ಸಾಮಾನ್ಯವಾಗಿ ವಿಶ್ರಾಂತಿ ಪಡೆಯುವವರೇ ಹೆಚ್ಚು. ಆದರೆ ಕಲೆಯ ಮೇಲಿನ ತುಡಿತ ಅವರನ್ನು ಸುಮ್ಮನಿರಲು ಬಿಡಲಿಲ್ಲ.

ಸುರತ್ಕಲ್‌ನಲ್ಲಿ ಇತ್ತೀಚೆಗೆ ನಡೆದ ಯಕ್ಷಗಾನ ಪ್ರದರ್ಶನದಲ್ಲಿ ಅವರು *ಕಯಾದುವಿನ ಪಾತ್ರ ನಿರ್ವಹಿಸಿದರು.ತುಂಬು ಗರ್ಭದೊಂದಿಗೆ, ಭಾರದ ಸೀರೆಯಲ್ಲಿ, ಮುಖದಲ್ಲಿ ತುಂಬಿದ ಭಾವದೊಂದಿಗೆ ಅವರು ಆಡಿದ ಕಯಾದುವಿನ ಮಾತೃ ವಾತ್ಸಲ್ಯ, ದೈತ್ಯರಾಣಿಯ ಗಾಂಭೀರ್ಯ ನೋಡುಗರ ಕಣ್ಣಲ್ಲಿ ನೀರು ತರಿಸಿತು. ಅದು ಕೇವಲ ಅಭಿನಯವಾಗಿರಲಿಲ್ಲ, ಒಬ್ಬ ತಾಯಿಯಾಗಲಿರುವ ಹೆಣ್ಣಿನ ನಿಜವಾದ ಭಾವನೆ ರಂಗದ ಮೇಲೆ ಅನಾವರಣಗೊಂಡಿತ್ತು.

ವೈರಲ್ ಆದ ವಿಡಿಯೋ, ಹರಿದುಬಂದ ಮೆಚ್ಚುಗೆ ಆ ಪ್ರದರ್ಶನದ ಸಣ್ಣ ತುಣುಕುಗಳು ಯಾರೋ ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿದರು. ಅಷ್ಟೇ – ಗಂಟೆಗಳಲ್ಲಿ ವಿಡಿಯೋ ವೈರಲ್ ಆಯಿತು.”ಯಕ್ಷದಿಶಾಗೆ ಸಲಾಂ”, “ಇದು ನಿಜವಾದ ಸಾಧನೆ”, “ಕಲೆಗೆ ವಯಸ್ಸಿಲ್ಲ, ಸ್ಥಿತಿಯ ಅಡ್ಡಿಯಿಲ್ಲ ಎಂದು ತೋರಿಸಿಕೊಟ್ಟರು” ಎಂದು ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ಸಾವಿರಾರು ಕಾಮೆಂಟ್‌ಗಳು ಹರಿದು ಬಂದಿವೆ.

ಹಿರಿಯ ಯಕ್ಷಗಾನ ಭಾಗವತರು, ಅರ್ಥಧಾರಿಗಳು ಕೂಡ ದಿಶಾ ಅವರ ಧೈರ್ಯವನ್ನು ಕೊಂಡಾಡಿದ್ದಾರೆ.”ಇದು ನನ್ನ ಖುಷಿ ಅಷ್ಟೇ” – ದಿಶಾ .ಈ ಎಲ್ಲ ಮೆಚ್ಚುಗೆಯ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿದ ದಿಶಾ ಅವರು ಹೇಳಿದ ಮಾತು ಎಲ್ಲರ ಮನ ಗೆದ್ದಿದೆ.ಈ ನಿರ್ಧಾರಕ್ಕೆ ತಮ್ಮ ಪತಿ ಪ್ರಥಮ್ ಶೆಟ್ಟಿ , ತಾಯಿ ಪ್ರಮದಾ, ತಂದೆ ಚಂದ್ರ ಎನ್.ಎಂ. ಮತ್ತು ಇಡೀ ಕುಟುಂಬ ಹಾಗೂ ಆಳ್ವಾಸ್ ಸಂಸ್ಥೆ ಬೆಂಬಲವಾಗಿ ನಿಂತಿದೆ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡರು.

ಇದು ಕೇವಲ ಸುದ್ದಿಯಲ್ಲ, ಸ್ಪೂರ್ತಿ*ದಿಶಾ ಶೆಟ್ಟಿ ಅವರ ಈ ಹೆಜ್ಜೆ ಇಂದು ಕರಾವಳಿಯ ಸಾವಿರಾರು ಹೆಣ್ಣುಮಕ್ಕಳಿಗೆ ಸ್ಪೂರ್ತಿ. ಗರ್ಭಧಾರಣೆ ಎಂಬುದು ಹೆಣ್ಣಿನ ದೌರ್ಬಲ್ಯವಲ್ಲ, ಅದು ಅವಳ ಶಕ್ತಿ. ಆ ಶಕ್ತಿ ರಂಗಸ್ಥಳದಲ್ಲೂ ಮಿಂಚಬಹುದು ಎಂದು ಅವರು ತೋರಿಸಿಕೊಟ್ಟಿದ್ದಾರೆ.ಯಕ್ಷಗಾನ ಕೇವಲ ಗಂಡುಕಲೆಯಲ್ಲ, ಅದು ಹೆಣ್ಣಿನ ಶಕ್ತಿ ಕಲೆಯೂ ಹೌದು ಎಂಬುದಕ್ಕೆ ಯಕ್ಷದಿಶಾ ಸಾಕ್ಷಿಯಾಗಿದ್ದಾರೆ.

Related posts

ಉಡುಪಿ : ಕನ್ನಡ ಪುಸ್ತಕ ಪ್ರಾಧಿಕಾರದಿಂದ ಮನೆಗೊಂದು ಗ್ರಂಥಾಲಯ10 ಗ್ರಂಥಾಲಯಗಳ ಅನುಷ್ಠಾನ ಕಾರ್ಯಕ್ರಮ;

Voiceoftulunadu

ಅದಾನಿ ಸಿಎಸ್‌ಆರ್: ಬೆಳಪು ಗ್ರಾ. ಪಂ. ವ್ಯಾಪ್ತಿಯಲ್ಲಿ ರೂ. 20 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ : ಭೂಮಿಪೂಜೆ ನೆರವೇರಿಸಿದ ಅದಾನಿ ಕಾರ್ಯನಿರ್ವಾಹಕ ನಿರ್ದೇಶಕ, ಅಧ್ಯಕ್ಷ ಕಿಶೋ‌ರ್ ಆಳ್ವ;

Voiceoftulunadu

ಬೆಂಗಳೂರು ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಜುಲೈ 11ರಂದು ತುಳು ಯಕ್ಷಗಾನ ಕಾರ್ಯಾಗಾರ ;

Voiceoftulunadu

Leave a Comment