ವರದಿ /ಚಿತ್ರ : ವಿನೋದ್ ಶೆಟ್ಟಿ ಉಡುಪಿ
ಉಡುಪಿ : ಉಡುಪಿ ನಗರದ ನಿಟ್ಟೂರಿನಲ್ಲಿರುವ ಶ್ರೀದೇವಿ ಗ್ಯಾಸ್ ಫ್ಯಾಕ್ಟರಿಯ ಬಳಿ ಗಾಜಿನ ಬ್ಯಾರಲ್‌ಗಳನ್ನು ಕಳೆಗೆಸುತ್ತಿದ್ದ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ಪ್ರಸಿದ್ಧ ಸಾಮಾಜಿಕ ಹೋರಾಟಗಾರ ಹಾಗೂ ಆಟೋ ಚಾಲಕ *ಸುನಿಲ್ ಬೈಲಕೇರೆ (45)* ಅವರು ಅಕಾಲಿಕ ಮರಣ ಹೊಂದಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠದ ಪರಿಸರದ ನಿವಾಸಿಯಾಗಿದ್ದ ಸುನಿಲ್ ಅವರು, ಶಿರೂರು ಮಠದ ದಿವಂಗತ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರ ನಿಕಟ ಸಹಚರರಾಗಿದ್ದರು. ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸದಾ ಮುಂದಾಗುತ್ತಿದ್ದ ಸುನಿಲ್, ಆಟೋ ಚಾಲಕರ ಸಂಘದಲ್ಲಿಯೂ ಸಕ್ರಿಯರಾಗಿದ್ದರು.ಕಳೆದ ಹಲವು ವರ್ಷಗಳಿಂದ ಉಡುಪಿಯಲ್ಲಿ ಸಾಮಾಜಿಕ ಸೇವೆಗಾಗಿ ಹೆಸರಾಗಿದ್ದ ಸುನಿಲ್ ಬೈಲಕೇರೆ ಅವರು ಹಲವು ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಬಡವರಿಗೆ, ನಿರ್ಗತಿಕರಿಗೆ ನೆರವಾಗುವಲ್ಲಿ ಅವರು ಯಾವಾಗಲೂ ಮುಂದಿರುತ್ತಿದ್ದರು.ಅವರ ಅಗಲಿಕೆಗೆ ಸಾಮಾಜಿಕ ಕ್ಷೇತ್ರದಲ್ಲಿ ತೀವ್ರ ಶೋಕ ವ್ಯಕ್ತವಾಗಿದೆ. ಉಡುಪಿ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು, ಆಟೋ ಚಾಲಕರ ಸಂಘ, ಹಾಗೂ ಶ್ರೀಕೃಷ್ಣ ಮಠದ ಭಕ್ತ ವೃಂದದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
