ವರದಿ /ಚಿತ್ರ : ಸಂತೋಷ್ ಶೆಟ್ಟಿ ಪೊಳಲಿ
ಕರ್ನಾಟಕ : ಕರ್ನಾಟಕ ಸರ್ಕಾರ, ಕರ್ನಾಟಕ ಜನಪದ ಅಕಾಡೆಮಿ ವತಿಯಿಂದ ಜನಪದ ಕಲಾವಿದರಿಗೆ ನೀಡುವ 2026-27ನೇ ವಾರ್ಷಿಕ ಗೌರವ ಪ್ರಶಸ್ತಿಗೆ ಬಜತ್ತೂರು ಗ್ರಾಮದ ಕಾಂಚನ ನಿವಾಸಿ, ದೈವನರ್ತಕ ಸುಬ್ಬಣ್ಣ ಪಂಡಿತ್ ಅವರು ಆಯ್ಕೆಯಾಗಿದ್ದಾರೆ.
ಬಜತ್ತೂರು ಗ್ರಾಮದ ಕಾಂಚನ ಕುಟ್ಟಪ್ಪ ನಿವಾಸಿಯಾಗಿರುವ 65 ಹರೆಯದ ಸುಬ್ಬಣ್ಣ ಪಂಡಿತ್ ಅವರು ತಮ್ಮ 15ನೇ ವಯಸ್ಸಿನಲ್ಲೇ ತಂದೆ ದಿ. ದುಗ್ಗ ಕಾಂಚನ ಅವರ ಮೂಲಕ ದೈವ ನರ್ತನ ಸೇವೆ ಆರಂಭಿಸಿದ್ದರು. ಆರಂಭದಲ್ಲಿ ಆಟಿ ಕಳಂಜ, ಸುಗ್ಗಿದ ಪೂರ್ಣಿಮೆ ಕೊರಗ ನೇಮದ ಮೂಲಕ ಗ್ರಾಮದ ಮನೆ ಮನೆಗಳಿಗೆ ಭೇಟಿ ನೀಡಿ ಮಾರಿ ಓಡಿಸುವ ಕಾರ್ಯ ಮಾಡುತ್ತಿದ್ದರು.
18ನೇ ವಯಸ್ಸಿನಲ್ಲಿ ದೈವ ನರ್ತನ ಆರಂಭಿಸಿದ ಸುಬ್ಬಣ್ಣ ಪಂಡಿತ್ ಅವರು ಕಲ್ಲುರ್ಟಿ, ಗುಳಿಗ, ಪಂಜುರ್ಲಿ, ಕಲ್ಲುಡ, ಜುಮಾದಿ ಬಂಟ, ಮಲರಾಯ, ಬಸ್ತಿ, ರಾಜನ್ ದೈವದ ನರ್ತನ ಸೇವೆ ಮಾಡುತ್ತಿದ್ದಾರೆ. 65ರ ಹರೆಯದಲ್ಲೂ ಅವರು ದೈವ ನರ್ತಕರಾಗಿದ್ದಾರೆ.
ಕಾಂಚನ ಮಣಿಕ್ಕಳ ನಾಗಬ್ರಹ್ಮ, ಗೋಳಿತೊಟ್ಟು ಪೆರಣ ಬೈಲು, ಪಡ್ಪು ಶಿರಾಡಿ ದೈವಸ್ಥಾನ, ಮುಗೆರಡ್ಕ ದೈವಸ್ಥಾನ, ಗೋಳಿತೊಟ್ಟು ಶಿರಾಡಿ ಗುಡ್ಡ, ಮುಗೆರಡ್ಕ ಅಂತರಗುತ್ತು, ನಾಗೋಜಿ, ನೆಕ್ಕಿಲಾಡಿ ಅಂಬೇಲು, ಪುತ್ತೂರು ಪಾಂಗಲಾಯಿ ಸೇರಿದಂತೆ ವಿವಿಧ ಕಡೆಗಳಲ್ಲಿ ಇವರು ದೈವ ನರ್ತನ ಸೇವೆ ನೀಡುತ್ತಿದ್ದಾರೆ.ಶ್ರಮಣಬೆಟ್ಟಗಳೂ ಸೇರಿದಂತೆ ಹೊರ ಜಿಲ್ಲೆಯಲ್ಲೂ ದೈವ ನರ್ತನ ಸೇವೆ ನೀಡುತ್ತಿದ್ದಾರೆ.
ಇವರ ಪತ್ನಿ ಗಿರಿಜಾ ಅವರು ದೈವದ ಪರಿಚಾರಕರಾಗಿ ಸೇವೆ ಮಾಡುತ್ತಿದ್ದರು. ಹಿರಿಯ ಪುತ್ರ ನವೀನ್ ಅವರು ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು ದೈವ ನತ೯ಕರೂ ಆಗಿದ್ದಾರೆ. ಇನ್ನೋರ್ವ ಪುತ್ರ ಜಯರಾಮು ಮಣಿ ಕರ್ನಾಟಕ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಮತ್ತೋರ್ವ ಪುತ್ರ ಚಂದ್ರಶೇಖರ ಅವರು ತಂಗಿಯ ಜೊತೆಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ.
ಸುಬ್ಬಣ್ಣ ಪಂಡಿತ್ ಸಹಿತ 31 ಜಿಲ್ಲೆಗಳಿಂದ 30 ಹಿಂದೂ ಜನಪದ ಕಲಾವಿದರನ್ನು ಕರ್ನಾಟಕ ಜನಪದ ಅಕಾಡೆಮಿ ಪ್ರಶಸ್ತಿಗೆ ಹಾಗೂ ಇಬ್ಬರು ಜನಪದ ವಿದ್ವಾಂಸರಿಗೆ ತಜ್ಞ ಪ್ರಶಸ್ತಿ ಘೋಷಿಸಲಾಗಿದೆ.
ಕರ್ನಾಟಕ ಜನಪದ ಅಕಾಡೆಮಿ ಪ್ರಶಸ್ತಿ ಫೋಷಣೆಯಾಗಿರುವ ಕಲಾವಿದರಿಗೆ 25 ಸಾವಿರ ರೂ. ನಗದು ಜೊತೆಗೆ ಸ್ಮರಣಿಕೆ, ಶಾಲು, ಹಾರ, ಫಲತಾಂಬೂಲದ ಜೊತೆಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಕರ್ನಾಟಕ ಜನಪದ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರಸಾದ್ ಹಾಗೂ ರಿಜಿಸ್ಟ್ರಾರ್ ಶ್ರುತಿ ಎಂ. ಫೋಷಿಸಿದ್ದಾರೆ
