ವರದಿ /ಚಿತ್ರ: ಸುರೇಶ್ ಬಾಬು ಮಾಣಿ
ಬಂಟ್ವಾಳ: ಬಂಟ್ವಾಳ ತಾಲೂಕಿನ ಪ್ರಸಿದ್ಧ ಮೊಗರ್ನಾಡು ಸಾವಿರ ಸೀಮೆಯ ಮಹತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ, ಕಡೇಶ್ವಾಲ್ಯ ಇದರ ಸಮಗ್ರ ಜೀರ್ಣೋದ್ಧಾರದ ಪ್ರಯುಕ್ತ, ನೂತನ ಧ್ವಜ ಸ್ತಂಭಕ್ಕೆ ಗೊತ್ತುಪಡಿಸಲಾದ ಸಾಗುವಾನಿ ಮರವನ್ನು 2026ರ ಅಕ್ಟೋಬರ್ 31ರ ಶನಿವಾರ ಬೆಳಿಗ್ಗೆ ಭವ್ಯ ಶೋಭಾಯಾತ್ರೆಯ ಮೂಲಕ ಕ್ಷೇತ್ರಕ್ಕೆ ತರಲಾಗುವುದು.
ಕೆದಿಲ ಗ್ರಾಮದ ಕೈಂತಾಜೆ ತಿರುಮಲೇಶ್ವರ ಭಟ್ ಅವರ ಜಮೀನಿನಲ್ಲಿ ಗುರುತಿಸಲಾಗಿದ್ದ ಈ ಸಾಗುವಾನಿ ಮರಕ್ಕೆ ಕಳೆದ ಸೆಪ್ಟೆಂಬರ್ 14ರಂದು ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ದಾರು ಪರಿಗ್ರಹ ಪೂಜೆ ಹಾಗೂ ವೃಕ್ಷ ಛೇದನ ನೆರವೇರಿಸಲಾಗಿತ್ತು.
ಕಾರ್ಯಕ್ರಮದ ವಿವರಗಳು : ದಿನಾಂಕ ಮತ್ತು ಸಮಯ: ಅಕ್ಟೋಬರ್ 31, 2026ರ ಶನಿವಾರ ಬೆಳಿಗ್ಗೆ 8:30ಕ್ಕೆ.
ಆರಂಭವಾಗುವ ಸ್ಥಳ : ಪೆರಾಜೆ ಗ್ರಾಮದ ಬುಡೋಲಿ ಹಳೆಯ ವಿಶ್ ಡಂ ಆಂಗ್ಲ ಮಾಧ್ಯಮ ಶಾಲೆಯ ಎದುರು ಭಾಗದಲ್ಲಿರುವ ಪುರುಷೋತ್ತಮ್ ಶೆಟ್ಟಿ ನುಳಿಯಲು ಮಾಲೀಕತ್ವದ ಯಮುನಾ ಕಾಂಪೌಂಡ್.
ಶೋಭಾಯಾತ್ರೆಯ ಮಾರ್ಗ : ಬೆಳಿಗ್ಗೆ 8:00 ಗಂಟೆಗೆ ಯಮುನಾ ಕಾಂಪೌಂಡ್‌ನಲ್ಲಿ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ದೊರೆಯಲಿದ್ದು, ತದನಂತರ ಬುಡೋಲಿಯಿಂದ ಗಡಿಯಾರ, ಕಲ್ಲಾಜೆ ಪಲ್ಕೆ, ಪೆರ್ಲಾಪು ಮಾರ್ಗವಾಗಿ ಕ್ಷೇತ್ರವನ್ನು ತಲುಪಲಿದೆ.
ಸಾಂಸ್ಕೃತಿಕ ವೈಭವ : ಶೋಭಾಯಾತ್ರೆಯಲ್ಲಿ ಕೀಲುಕುದುರೆ, ಚಂಡೆ ವಾದನ ಹಾಗೂ ವಿವಿಧ ವಾದ್ಯ ಘೋಷಗಳು ಮೆರುಗು ನೀಡಲಿವೆ.
ಪ್ರಮುಖರ ಉಪಸ್ಥಿತಿ : ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಶ್ರೀ ಪದ್ಮನಾಭ ತಂತ್ರಿಯವರು ಹಾಗೂ ಕ್ಷೇತ್ರದ ವಾಸ್ತು ಶಿಲ್ಪಿಗಳಾದ ಶ್ರೀ ಕೃಷ್ಣರಾಜ ತಂತ್ರಿಗಳ ನೇತೃತ್ವದಲ್ಲಿ ಈ ಧಾರ್ಮಿಕ ಪ್ರಕ್ರಿಯೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಕೆದಿಲ ಶ್ರೀ ಉಲ್ಲಾಕ್ಲು ಧೂಮಾವತಿ ಮಲರಾಯ ದೈವಸ್ಥಾನದ ಅಧ್ಯಕ್ಷರಾದ ಜೆ. ಕೃಷ್ಣ ಭಟ್, ಮರವನ್ನು ಒದಗಿಸಿಕೊಟ್ಟ ಶ್ರೀ ತಿರುಮಲೇಶ್ವರ ಭಟ್ ಹಾಗೂ ಧ್ವಜ ಸ್ತಂಭದ ಸಂಪೂರ್ಣ ವೆಚ್ಚವನ್ನು ಭರಿಸಲಿರುವ ದಾಳಿಂಬ ಮನೆತನದ ಶ್ರೀ ರಾಘವೇಂದ್ರ ರಾವ್ ದಾಳಿಂಬ ಉಪಸ್ಥಿತರಿರಲಿದ್ದಾರೆ.
ಭಕ್ತಾದಿಗಳಿಗೆ ಆಮಂತ್ರಣ : ಈ ಪುಣ್ಯ ಕಾರ್ಯದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ, ವ್ಯವಸ್ಥಾಪನಾ ಸಮಿತಿ, ಗೌರವ ಸಲಹೆಗಾರರು, ಅರ್ಚಕರು ಮತ್ತು ಸಿಬ್ಬಂದಿ ವರ್ಗ, ಕ್ಷೇತ್ರದ ಕರಸೇವಕರು, ವಿವಿಧ ಸಂಘ-ಸಂಸ್ಥೆಗಳು ಹಾಗೂ ಸ್ವಸಹಾಯ ಸಂಘಗಳ ಸದಸ್ಯರು ಪಾಲ್ಗೊಳ್ಳಲಿದ್ದಾರೆ.
ಕಡೇಶ್ವಾಲ್ಯ, ಸರಪ್ಪಾಡಿ ಮತ್ತು ಮಣಿನಾಲ್ಕೂರು ಗ್ರಾಮದ ಆರ್ಥಿಕ ಬೈಲುವಾರು ಸಮಿತಿಯ ಸಂಚಾಲಕರು ಹಾಗೂ ಊರಿನ ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಲಾಗಿದೆ.
