ಕೃಪೆ : ಪಿಂಗಾರ
ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ‘ಹೈಟೆಕ್ ಭಿಕ್ಷಾಟನೆ’ ಪ್ರಕರಣ ಬೆಳಕಿಗೆ ಬಂದಿದೆ. ಅಕ್ಟೋಬರ್ 10ರಂದು ದೆಹಲಿಯ ಅಮಿನ್ ಎಂಬ ವ್ಯಕ್ತಿ ತನ್ನ ಪರ್ಸ್ ಕಳೆದುಹೋಗಿದೆ ಎಂದು ಹೇಳಿಕೊಂಡು, ಕ್ಯೂಆರ್ ಕೋಡ್ ಪ್ರದರ್ಶಿಸಿ ಹಣ ಸಂಗ್ರಹಿಸುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಆತನಿಗೆ ಎಚ್ಚರಿಕೆ ನೀಡಿದ್ದರು.
ಈ ಘಟನೆ ಬೆನ್ನಲ್ಲೇ ಇದೀಗ ಟರ್ಮಿನಲ್-2ರಲ್ಲಿ ಧಾರ್ಮಿಕ ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ವೆಂಕಟ್ ದಿನೇಶ್ ಕುಮಾರ್ ಮತ್ತು ಪ್ರತೀಕ್ ಭಾಟಿಯಾ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಈ ಇಬ್ಬರು ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸಿ, ಕೊರಳಿನಲ್ಲಿ ಮಾಲೆಗಳನ್ನು ಹಾಕಿಕೊಂಡು ವಿಮಾನ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದರು.
ಈ ಹಿಂದೆ ಕೂಡ ಇದೇ ರೀತಿಯ ಚಟುವಟಿಕೆಗಳಲ್ಲಿ ತೊಡಗಿದ್ದ ಇವರಿಗೆ ಪೊಲೀಸರು ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದರು. ಆದರೆ, ಪೊಲೀಸರ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಮತ್ತೆ ವಿಮಾನ ನಿಲ್ದಾಣಕ್ಕೆ ಮರಳಿ ಭಿಕ್ಷಾಟನೆ ಮುಂದುವರಿಸಿದ್ದರು ಎನ್ನಲಾಗಿದೆ.ಆರೋಪಿಗಳು ಪ್ರತಿದಿನ ಒಬ್ಬರ ನಂತರ ಒಬ್ಬರು ಭಿಕ್ಷೆ ಬೇಡುತ್ತಿದ್ದರು ಎಂದು ತಿಳಿದುಬಂದಿದೆ.
ಕೆಲವೊಮ್ಮೆ ತಮ್ಮ ಪರ್ಸ್ ಕಳೆದುಹೋಗಿದ್ದು, ಪರೀಕ್ಷೆಗೆ ಹಾಜರಾಗಲು ಪ್ರಯಾಣದ ಖರ್ಚಿಗೆ ಹಣ ಬೇಕೆಂದು ಸಾರ್ವಜನಿಕರಲ್ಲಿ ಹಣ ಕೇಳುತ್ತಿದ್ದರು. ಇನ್ನು ಕೆಲವು ಸಂದರ್ಭಗಳಲ್ಲಿ ಕೇಸರಿ ವಸ್ತ್ರ ಹಾಗೂ ಮಾಲೆಗಳನ್ನು ಧರಿಸಿ, ಸಾಧುಗಳಂತೆ ವೇಷ ಧರಿಸಿ ಹಣ ಸಂಗ್ರಹಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಕಳೆದ ಎರಡು ದಿನಗಳಿಂದ ದೇವನಹಳ್ಳಿ ಸಮೀಪದ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿ ಈ ಇಬ್ಬರು ಭಿಕ್ಷೆ ಬೇಡುತ್ತಿರುವುದನ್ನು ಗಮನಿಸಿದ ಪೊಲೀಸರು ಅವರನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ಈ ಸಂಬಂಧ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
