
ಮಂಗಳೂರು, ನವೆಂಬರ್ 1: ನಗರದ ಅಣ್ಣೇಗುಂಡಿ, ಬಿಜೈ ನ್ಯೂ ರೋಡ್ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಸುಮಾರು 10.15ರ ವೇಳೆಗೆ ಗೇಲ್ (GAIL) ಗ್ಯಾಸ್ ಪೈಪ್‌ಲೈನ್‌ನಲ್ಲಿ ಅನಿಲ ಸೋರಿಕೆ ಸಂಭವಿಸಿದ್ದು, ಕೆಲಕಾಲ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.

ಗ್ಯಾಸ್ ಸೋರಿಕೆಯಾಗುತ್ತಿರುವುದನ್ನು ಗಮನಿಸಿದ ಸ್ಥಳೀಯ ಸಾರ್ವಜನಿಕರು ತಕ್ಷಣ ಪೊಲೀಸ್ ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡಿದರು. ಕೂಡಲೇ ಅಗ್ನಿಶಾಮಕ ದಳ, ಉರ್ವ ಪೊಲೀಸ್ ಸಿಬ್ಬಂದಿ ಹಾಗೂ ಗೇಲ್ ಗ್ಯಾಸ್ ಕಂಪನಿಯ ತುರ್ತು ನಿರ್ವಹಣಾ ತಂಡ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿತು.

ಸುಮಾರು 45 ನಿಮಿಷಗಳ ಕಾಲ ಗ್ಯಾಸ್ ಸೋರಿಕೆಯಾಗಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಅನಿಲದ ತೀವ್ರ ವಾಸನೆ ಹರಡಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಮುನ್ನೆಚ್ಚರಿಕೆ ವಹಿಸಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡರು.

ನಂತರ ಗ್ಯಾಸ್ ಕಂಪನಿಯ ಸಿಬ್ಬಂದಿ ಸೋರಿಕೆಯನ್ನು ನಿಯಂತ್ರಿಸಿ ಪೈಪ್‌ಲೈನ್‌ನ ಗೇಟ್ ವಾಲ್ವ್‌ನ್ನು ಮುಚ್ಚುವ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಅದೃಷ್ಟವಶಾತ್ ಯಾವುದೇ ಅನಾಹುತ ಅಥವಾ ಪ್ರಾಣಾಪಾಯ ಸಂಭವಿಸಿಲ್ಲ. ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಹಾಗೂ ಗೇಲ್ ಸಿಬ್ಬಂದಿಯ ತ್ವರಿತ ಸ್ಪಂದನೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
