September 5, 2026
Uncategorized

ಉಸಿರಿರುವಾಗ ಸಿಗದ ಆಸರೆ: ಸಾವಿನ ನಂತರದ ತೋರಿಕೆಯ ಪ್ರೀತಿಯೇ?

ಲೇಖನ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ

ಉಸಿರಿರುವಾಗ ಸಿಗದ ಆಸರೆ: ಸಾವಿನ ನಂತರದ ತೋರಿಕೆಯ ಪ್ರೀತಿಯೇ?ಒಂದು ಪುಟ್ಟ ಮನೆಯ ಅಂಗಳ. ಅಲ್ಲಿ ನಿಶ್ಯಬ್ದ ಆವರಿಸಿದೆ, ಆದರೆ ಸುತ್ತಲೂ ನೂರಾರು ಜನರಿದ್ದಾರೆ. ಆ ಕಡೆ ಈ ಕಡೆ ಸಾಲಾಗಿ ಕುಳಿತ ಜನ, ಮುಖದಲ್ಲಿ ದುಃಖದ ಅಭಿನಯ, ಕಣ್ಣಿನ ಅಂಚಿನಲ್ಲಿ ಬಲವಂತವಾಗಿ ತರಿಸಿಕೊಂಡ ಒಂದೆರಡು ಹನಿ ಕಣ್ಣೀರು. ‘ಅಯ್ಯೋ, ಎಂತಹ ಒಳ್ಳೆಯ ಮನುಷ್ಯನಾಗಿದ್ದ, ಹೀಗಾಗಬಾರದಿತ್ತು’ ಎಂಬ ಅನುಕಂಪದ ಮಾತುಗಳು.ಆದರೆ, ಕೇವಲ ಕೆಲವೇ ಗಂಟೆಗಳ ಹಿಂದೆ ಅದೇ ಮನುಷ್ಯ ಜೀವಕ್ಕಾಗಿ ಹೋರಾಡುತ್ತಿದ್ದಾಗ ಎಲ್ಲಿದ್ದರು ಈ ಜನ?

ಬದುಕಿನ ಕತ್ತಲೆಯ ಹಾದಿಯಲ್ಲಿ, ಕಷ್ಟಗಳ ಚಕ್ರವ್ಯೂಹದಲ್ಲಿ ನೊಂದು ಬೆಂದಾಗ ಅವನಿಗೆ ಬೇಕಾಗಿದ್ದುದು ಯಾರೋ ಒಬ್ಬರ ಆಸರೆ. ರಾತ್ರಿಯಿಡೀ ನಿದ್ದೆಯಿಲ್ಲದೆ, ಕಣ್ಣೀರಲ್ಲೇ ಮುಳುಗಿ, ‘ನನ್ನ ಕಷ್ಟ ಆಲಿಸಲು ಯಾರಾದರೂ ಒಬ್ಬರಿದ್ದಾರಾ?’ ಎಂದು ಅವನು ಹಂಬಲಿಸಿದಾಗ ಈ ಯಾವುದೇ ಮುಖಗಳು ಅಲ್ಲಿರಲಿಲ್ಲ. ಒಬ್ಬನೇ ಕುಳಿತು ತನ್ನ ನೋವನ್ನು ತನ್ನೊಳಗೇ ನುಂಗಿಕೊಳ್ಳುತ್ತಿದ್ದಾಗ, ಜಗತ್ತಿನ ಸಮಸ್ತ ಜನಸ್ತೋಮವಿದ್ದೂ ಅವನು ಸಂಪೂರ್ಣ ಏಕಾಂಗಿಯಾಗಿದ್ದ.ಬದುಕಿದ್ದಾಗ ಒಂದು ಕ್ಷಣ ಕೂತು ನೋವು ಕೇಳದ ಸಮಾಜ, ತೀರಿಕೊಂಡ ಮೇಲೆ ಸ್ಮಶಾನದವರೆಗೆ ಸಾಲಾಗಿ ಬರುತ್ತದೆ.

ಸಾವಿನ ನಂತರ ಸುರಿಸುವ ಕೊನೆಯ ಹನಿ ಕಣ್ಣೀರಿಗಿಂತ, ಬದುಕಿದ್ದಾಗ ಕಷ್ಟದಲ್ಲಿದ್ದಾಗ ಒರೆಸುವ ಒಂದೇ ಒಂದು ಹನಿ ಕಣ್ಣೀರಿಗೆ ಜಗತ್ತಿನ ಎಲ್ಲಾ ಸಂಪತ್ತಿಗಿಂತ ಹೆಚ್ಚಿನ ಮೌಲ್ಯವಿದೆ. ಸಾವಿನ ನಂತರದ ವೈಭವದ ಬೀಳ್ಕೊಡುಗೆಗಿಂತ, ಸೋತಾಗ ‘ನಾನಿದ್ದೇನೆ’ ಎಂದು ಹೆಗಲ ಮೇಲೆ ಕೈಯಿಡುವ ಚಿಕ್ಕ ಸ್ಪರ್ಶವೇ ನಿಜವಾದ ಆಸರೆ.ಸಾವಿನ ನಂತರದ ಸತ್ತ ಹೆಣಕ್ಕೆ ತೋರುವ ಗೌರವಕ್ಕಿಂತ, ಜೀವಂತವಾಗಿರುವ ಮನುಷ್ಯನ ಭಾವನೆಗಳಿಗೆ ಕೊಡುವ ಗೌರವವೇ ಶ್ರೇಷ್ಠ.

ಕೊನೆಯ ಪಯಣಕ್ಕೆ ಜೊತೆಯಾಗುವ ನೂರಾರು ಜನರಿದ್ದರೇನು ಫಲ? ಕಷ್ಟದ ಕತ್ತಲಲ್ಲಿ ನಮಗಾಗಿ ಮಿಡಿಯುವ ಒಬ್ಬ ನಿಜವಾದ ಜೊತೆಗಾರನಿಲ್ಲದಿದ್ದರೆ ಈ ಬದುಕು ಸಂಪೂರ್ಣ ಶೂನ್ಯ.ನಿಮ್ಮ ಸುತ್ತಮುತ್ತ ಯಾರಾದರೂ ಕಷ್ಟದಲ್ಲಿದ್ದರೆ, ಅವರು ಸತ್ತ ಮೇಲೆ ಕಣ್ಣೀರು ಸುರಿಸುವುದನ್ನು ಬಿಟ್ಟು, ಅವರು ಬದುಕಿದ್ದಾಗಲೇ ಅವರ ಕಣ್ಣೀರನ್ನು ಒರೆಸಿ. ಏಕೆಂದರೆ, ಮನುಷ್ಯನಿಗೆ ಪ್ರೀತಿ ಬೇಕಿರುವುದು ಉಸಿರಿರುವಾಗ ಮಾತ್ರ, ಉಸಿರು ನಿಂತ ಮೇಲಲ್ಲ!

Related posts

ಅಸಂಖ್ಯಾತ ಜೀವಗಳನ್ನು ಸ್ಪರ್ಶಿಸಿದ ಪುಣ್ಯಾತ್ಮ ಕಾಂತಾಡಿಗುತ್ತು ಉಗ್ಗ ಶೆಟ್ಟಿ ಚಿರಶಾಂತಿಯಲಿ;

Voiceoftulunadu

ಪಡುಬಿದ್ರಿ ಯುವವಾಹಿನಿ : ಪದಗ್ರಹಣ, ಪ್ರತಿಭಾ ಪುರಸ್ಕಾರ, ವಿದ್ಯಾ ನಿಧಿ ವಿತರಣೆ , ನೂತನ ಅಧ್ಯಕ್ಷ ನಿಖಿಲ್ ಪೂಜಾರಿ ಮತ್ತವರ ತಂಡದಿಂದ ಅಧಿಕಾರ ಸ್ವೀಕಾರ ;

Voiceoftulunadu

ಶೈಕ್ಷಣಿಕ ಶ್ರೇಷ್ಠತೆಗೆ ರಯಾನ್ ಇಂಟರ್‌ನ್ಯಾಷನಲ್ ಶಾಲೆಗೆ ರಾಷ್ಟ್ರೀಯ ಗೌರವ;

Voiceoftulunadu

Leave a Comment