ವರದಿ/ ಚಿತ್ರ :ರೋನ್ಸ್ ಬಂಟ್ವಾಳ್
ಮುಂಬಯಿ, ಜು.26: ಕರ್ನಾಟಕ ರಾಜ್ಯ ರೈಲ್ವೆ ಪೊಲೀಸ್ (ಜಿಆರ್ಪಿ) ವ್ಯಾಪ್ತಿಯ ಮಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಮೃತಪಟ್ಟ ಅನಾಮಧೇಯ ಪುರುಷನ ಗುರುತು ಪತ್ತೆಗಾಗಿ ಲುಕ್ ಔಟ್ ನೋಟಿಸ್ ಮೂಲಕ ಕೋರಲಾಗಿದೆ.
ಘಟನೆಯ ವಿವರದಂತೆ ದಿನಾಂಕ 18. ಜುಲೈ.2026 ರಂದು ಮಂಗಳೂರು ಸೆಂಟ್ರಲ್ ರೈಲ್ವೆ ಸ್ಟೇಷನ್ 4ನೇ ಪ್ಲಾಟ್ಫಾರ್ಮ್ಗೆ ಆಗಮಿಸಿದ ಮತ್ಸ ಗಂಧ ಎಕ್ಸ್ಪ್ರೆಸ್ (ರೈಲು ಸಂಖ್ಯೆ: 12619) ರೈಲಿನ ಡಿಎಸ್ ಬೋಗಿಯಲ್ಲಿ ಸುಮಾರು 45 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆನ್-ಡ್ಯೂಟಿ ಸ್ಟೇಷನ್ ಮಾಸ್ಟರ್ ಆಕಾಶ್ ಕುಮಾರ್ ಮೀನಾ ಅವರು ನೀಡಿದ ಮಾಹಿತಿಯಂತೆ ರೈಲ್ವೆ ವೈದ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರೀಕ್ಷಿಸಿದಾಗ, ಆ ವ್ಯಕ್ತಿ ಮೃತಪಟ್ಟಿರುವುದು ದೃಢಪಟ್ಟಿದೆ.
ಈ ಕುರಿತು ಮಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ಎಸ್ ಸೆಕ್ಷನ್ 194 ರಡಿ ಅಸಹಜ ಸಾವು ಪ್ರಕರಣ (ಯುಡಿಆರ್ ಸಂಖ್ಯೆ: 19/2026 ಯು/ಎಸ್ 194 ಬಿಎನ್ಎಸ್ಎಸ್) ದಾಖಲಿಸಲಾಗಿದೆ.ಮೃತನ ಚಹರೆ ಮತ್ತು ವಿವರದಂತೆ ಹೆಸರು ಇನ್ನೂ ತಿಳಿದುಬಂದಿಲ್ಲ (ಅಜ್ಞಾತ). ತಂದೆಯ ಹೆಸರೂ ತಿಳಿದು ಬಂದಿಲ್ಲ ವಯಸ್ಸು ಸುಮಾರು 45 ವರ್ಷ ಆಗಿದ್ದು, ಎತ್ತರ ಸುಮಾರು 4.5 ಅಡಿ ಆಗಿದೆ. ದೇಹದ ಚಹರೆಯು ಸಾಧಾರಣ ಶರೀರ, ದುಂಡು ಮುಖ, ಅಗಲವಾದ ಹಣೆ, ಕಪ್ಪು ಮತ್ತು ಬಿಳಿ ಬಣ್ಣದ ಮಿಶ್ರಿತ ಸುಮಾರು 2 ಇಂಚು ಉದ್ದದ ಕೂದಲು ಹಾಗೂ ಮೀಸೆ ಇರುತ್ತದೆ.
ವಿಶೇಷ ಅಂದರೆ ಮೃತನ ಎರಡೂ ಕಾಲುಗಳು ಮೊಣಕಾಲಿನಿಂದ ಕೆಳಭಾಗಕ್ಕೆ ತುಂಡಾಗಿವೆ. ಬಲಗೈ ಮೇಲೆ “ಪೂಜ್ ವೈಆರ್ ಆನಿಲ್” ಎಂದು ಹಚ್ಚೆ (ಟಾಟೂ) ಹಾಕಲಾಗಿದೆ. ಸಿಮೆಂಟ್ ಬಣ್ಣದ ಜರ್ಸಿ, ಗೆರೆಗಳಿರುವ (ಚೆಕ್ಸ್) ಶರ್ಟ್, ಕಪ್ಪು ಬಣ್ಣದ ಟಿ-ಶರ್ಟ್, ನೀಲಿ ಬಣ್ಣದ ಟ್ರಸರ್, ಕಪ್ಪು ಬಣ್ಣದ ಬರ್ಮುಡಾ ಶಾರ್ಟ್ ಉಡುಪು ಧರಿಸಿರುವನು.ಶೋಧನೆಯಲ್ಲಿ ಸಿಕ್ಕ ವಸ್ತುಗಳಂತೆ ಮೃತನ ಬಳಿ ಸಿಕ್ಕ ಸಣ್ಣ ನೋಟ್ಬುಕ್ನಲ್ಲಿ ಅನಿಲ್ ಮಾರುತಿ ಕೋಲ್ಕತ್ತಾ, ಮುಂಬಯಿ, ಮಲಾಡ್ ಈಸ್ಟ್ ಮತ್ತು ಜಮ್ರುಷಿ ನಗರ ಎಂದು ಬರೆಯಲಾಗಿದೆ.
ಸಾರ್ವಜನಿಕರಲ್ಲಿ ವಿನಂತಿ:ಈ ಮೇಲ್ಕಂಡ ಅಂಗವೈಕಲ್ಯ ವ್ಯಕ್ತಿಯ ಬಗ್ಗೆ ಅಥವಾ ಆತನ ವಾರಸುದಾರರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿದ್ದಲ್ಲಿ ಇ-ಮೆಯ್ಸ್ (Mangalorerly@ksp.gov.in) ಅಥವಾ ಮಂಗಳೂರು ರೈಲ್ವೆ ಠಾಣೆ ಪೊಲೀಸ್ ដ (9480802121 55 9480800470), : 0824-2220559, ರೈಲ್ವೆ ಪೊಲೀಸ್ ನಿಯಂತ್ರಣ ಕೊಠಡಿ: 080-22871291 ಯಾ 9480802140 ದೂರವಾಣಿ ಸಂಖ್ಯೆಗಳನ್ನು ಮೂಲಕ ತಕ್ಷಣವೇ ಸಂಪರ್ಕಿಸಲು ಕೋರಲಾಗಿದೆ.
