ವರದಿ /ಚಿತ್ರ: ರೋನ್ಸ್ ಬಂಟ್ವಾಳ್

ಗುಜರಾತ್ (ಬರೋಡ), ಅ.20: ತುಳುನಾಡಿನ ಹಿರಿಯರ ಜೀವಪರ ಸಂಪ್ರದಾಯಗಳನ್ನು ಬಿಂಬಿಸುವ ಕುರಲ್ ಪರ್ಬ ನಮ್ಮ ಸಮುದಾಯದ ಐಕ್ಯತೆ, ಧನ್ಯತಾ ಭಾವ ಮತ್ತು ಕೃಷಿ ಸಂಸ್ಕೃತಿಯ ಪ್ರತೀಕವಾಗಿದೆ. ಇದು ಕೇವಲ ಧಾರ್ಮಿಕ ಆಚರಣೆಯಲ್ಲದೆ, ಪ್ರಕೃತಿಯೊಂದಿಗೆ ನಾವು ಹೊಂದಿರುವ ಅವಿನಾಭಾವ ಸಂಬಂಧವನ್ನು ಗಟ್ಟಿಗೊಳಿಸುವ ಸಾಂಸ್ಕೃತಿಕ ಆಸ್ತಿಯಾಗಿದೆ.
ಆಧುನಿಕ ಧಾವಂತದ ಬದುಕಿನಲ್ಲಿ ಯುವ ಪೀಳಿಗೆಯು ತಮ್ಮ ಮೂಲ ಬೇರುಗಳು ಹಾಗೂ ಕೃಷಿ ಸಂಪ್ರದಾಯಗಳಿಂದ ದೂರ ಉಳಿಯುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇಂತಹ ಮಹತ್ವದ ಸಾಂಪ್ರದಾಯಿಕ ಹಬ್ಬಗಳನ್ನು ಯುವಜನರಿಗೆ ಪರಿಚಯಿಸುವುದರಿಂದ ನಮ್ಮ ಪ್ರಾದೇಶಿಕ ಅಸ್ಮಿತೆ, ಭಾಷೆ ಮತ್ತು ಸಂಸ್ಕೃತಿಯು ಮುಂದಿನ ತಲೆಮಾರಿಗೆ ಸುರಕ್ಷಿತವಾಗಿ ವರ್ಗಾವಣೆಗೊಳ್ಳಲು ಸಾಧ್ಯವಾಗುತ್ತದೆ ಎಂದು ತುಳು ಸಂಘ ಬರೋಡಾ ಇದರ ಗೌರವಾಧ್ಯಕ್ಷ ದಯಾನಂದ ಬೋಂಟ್ರ ಬೆಳ್ಮಣ್ ತಿಳಿಸಿದರು.

ಗುಜರಾತ್ ರಾಜ್ಯದ ಬರೋಡ ಇಲ್ಲಿನ ಇಂಡಿಯಾ ಬುಲ್ಸ್ ಮೆಘಾ ಮಾಲ್‌ನಲ್ಲಿನ ತುಳು ಚಾವಡಿಯಲ್ಲಿ ಇಂದಿಲ್ಲಿ ದಸರೋತ್ಸವದ ಶುಭಾವಸರದಲ್ಲಿ ತುಳು ಸಂಘ ಬರೋಡಾ ಸಂಘವು ತುಳುನಾಡ ವೈಶಿಷ್ಟ ಮಯ ಸಾಂಪ್ರದಾಯಿಕ ಕುರಲ್ ಪರ್ಬ (ಪುದ್ದಾರ್) ತೆನೆ ಹಬ್ಬವನ್ನು ಧಾರ್ಮಿಕ ಪೂಜಾಧಿಗಳೊಂದಿಗೆ ನೆರವೇರಿಸಿದ್ದು ಸಭಾಧ್ಯಕ್ಷತೆಯಲ್ಲಿ ವಹಿಸಿ ದಯಾನಂದ ಬೋಂಟ್ರ ಮಾತನಾಡಿದರು.ತುಳು ಸಂಘ ಬರೋಡಾ ಇದರ ಅಧ್ಯಕ್ಷ ಶಶಿಧರ್ ಬಿ.ಶೆಟ್ಟಿ ಗುರುವಾಯನಕೆರೆ ಅವರ ಮಾರ್ಗದರ್ಶನದಲ್ಲಿ ವರ್ಷಂಪ್ರತಿಯಂತೆ ಈ ಬಾರಿಯೂ ತುಳುನಾಡ ಧಾರ್ಮಿಕ ಆಚರಣೆ ಕುರಲ್ ಪರ್ಬ (ಕೊರಲ್ ಪಾಡುನ ಪರ್ಬ) ಆಚರಿಸಿದ್ದು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಉತ್ಸುಕರೆಣಿಸಿ ಸಿದ್ಧರಾದ ಸದಸ್ಯರು ಮತ್ತು ಮಕ್ಕಳು ತೆನೆಯನ್ನು ಚಾವಡಿಯೊಳಗೆ ಬರಮಾಡಿ ಕೊಂಡರು.

ಕಾರ್ಯಕ್ರಮದ ವೇದಿಕೆಯಲ್ಲಿ ಉದ್ಯಮಿ ಸುಧಾಕರ್ ಶೆಟ್ಟಿ (ಸುಧಾ ಹೊಟೇಲ್ ಬರೋಡಾ), ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಎ.ಶೆಟ್ಟಿ, ಗೌರವ ಪ್ರಧಾನ ಕೋಶಾಧಿಕಾರಿ ಪಿ.ಬಾಲಚಂದ್ರ ಗೌಡ, ಮಹಿಳಾ ವಿಭಾಗದ ಕಾರಾಧ್ಯಕ್ಷೆ ಡಾ| ಶರ್ಮಿಳಾ ಎಂ.ಜೈನ್ ವೇದಿಕೆಯಲ್ಲಿದ್ದು ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಅಭಿನಂದಿಸಿದರು ಹಾಗೂ ಕೊಡುಗೈದಾನಿಗಳಿಗೆ ಗೌರವಿಸಿ ಅಭಿವಂದಿಸಿದರು.

ವರ್ಷದ ಹೊಸ ಸಾಗುವಳಿಯಿಂದ ಬೆಳೆಸಿದ ವರ್ಷದ ಹೊಸ ಭತ್ತದ ತೆನೆಯನ್ನು ಕೃಷಿ ಪ್ರಧಾನವಾಗಿ ಬೆಳೆದ ಪೈರು, ದವಸಧಾನ್ಯ, ಫಲಪುಷ್ಫ, ಕಾಯಿಪಲ್ಯ, ಬೆಳೆಗಳನ್ನು ಸುಧಾಕರ್ ಶೆಟ್ಟಿ ಅವರು ಸಾಂಪ್ರದಾಯಿಕ ಪದ್ಧತಿಯಂತೆ ಶ್ರದ್ಧಾಪೂರ್ವಕವಾಗಿ ಚಾವಡಿಯೊಳಗೆ ಹೊತ್ತುತಂದರು. ಫಲಪುಷ್ಫಗಳಿಂದ ಸಿಂಗಾರಿಸಿದ ದೇವರ ಮಂಟದ ಮುಂದೆ ಕದಿರು (ತೆನೆ), ಕಾಯಿಪಲ್ಯ, ಫಲಗಳಿಗೆ ದಯಾನಂದ ಬೋಂಟ್ರ ಅವರು ಸೀಯಾಳ, ಕ್ಷೀರ ಅಭಿಷೇಕಗೈದು ಪ್ರಾರ್ಥನೆ ನೆರವೇರಿಸಿ ಕದಿರೆ ಕಟ್ಟಿ ಪ್ರಕೃತಿಮಾತೆಯನ್ನು ಸ್ಮರಿಸಿ ಉಪಸ್ಥಿತ ಸದಸ್ಯರು ತುಳುನಾಡ ಆಚರಣೆಯಂತೆ ತೆನೆಹಬ್ಬ ಆಚರಿಸಿದರು.

ಮುಂದಿನ ದಿನಗಳಲ್ಲಿ ಇಂತಹ ಸಮುದಾಯದ ಪ್ರಮುಖ ಕಾರ್ಯಕ್ರಮಗಳನ್ನು ಇನ್ನಷ್ಟು ವ್ಯವಸ್ಥಿತವಾಗಿ ಆಯೋಜಿಸುವುದು, ದಾಖಲೀಕರಣ ಮಾಡುವುದು ಹಾಗೂ ತುಳು ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪಸರಿಸುವುದು ಅತ್ಯಗತ್ಯವಾಗಿದೆ. ಇದಕ್ಕೆ ಎಲ್ಲರ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಸಂಘಟಿತ ಪ್ರಯತ್ನದ ಅವಶ್ಯಕತೆಯಿದೆ ಎಂದು ಸಂಘದ ಗೌ| ಪ್ರ| ಕಾರ್ಯದರ್ಶಿ ಬಾಲಕೃಷ್ಣ ಎ.ಶೆಟ್ಟಿ ಪ್ರಸ್ತಾವನೆಯಲ್ಲಿ ತಿಳಿಸಿದರು.

ಮದನ್‌ಕುಮಾರ್ ಮೂಡಿಗೆರೆ ಮತ್ತು ಕಾರ್ತಿಕ್ ಗೌಡ ಮೂಡಿಗೆರೆ ಅವರ ಪ್ರಧಾನ ಸಂಯೋಜನೆಯಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ವಿನೋದಾ ಸುಧಾಕರ್ ಶೆಟ್ಟಿ, ಕೃಷ್ಣ ಶೆಟ್ಟಿ, ಪ್ರಮೀಳಾ ಶೆಟ್ಟಿ, ಕೆ.ಮಾಧವ ಶೆಟ್ಟಿ, ದಿನಕರ್ ಶೆಟ್ಟಿ, ಪ್ರಶಾಂತ್ ಬಿ.ಶೆಟ್ಟಿ, ದಯಾನಂದ್ ಸಾಲ್ಯಾನ್, ಕವಿತಾ ಗೌಡ, ಮನೋರಿ ಶೆಟ್ಟಿ, ಜಯಶ್ರೀ ಜಿನರಾಜ್ ಪೂಜಾರಿ, ಕವಿತಾ ಗೌಡ, ಗಾನವಿ ಎಂ.ಗೌಡ, ಶಕುಂತಳಾ ಶೆಟ್ಟಿ, ಪ್ರಭಾ ಶೆಟ್ಟಿ ಪ್ರಧಾನವಾಗಿದ್ದರು.

ಅಪಾರ ಸಂಖ್ಯೆಯ ಸದಸ್ಯರು ಉಪಸ್ಥಿತರಿದ್ದು, ಮಹಿಳಾ ಮಂಡಳಿ ಭಜನೆಯನ್ನಾಡಿದರು. ತೆನೆಗೆ ಆರತಿಗೈದಬಳಿಕ ಹೊಸ ಭತ್ತದ ಅಕ್ಕಿಯೊಂದಿಗೆ ಹೊಸ ಅಕ್ಕಿ ಅನ್ನ, ಪಾಯಸ, ಬಗೆಬಗೆಯ ಪಲ್ಯಗಳೊಂದಿಗೆ ರುಚಿಕರ ಶುದ್ಧ ಶಾಖಾಹಾರಿ ಭೋಜನದೊಂದಿಗೆ ತುಳುವವರ ವೈಶಿಷ್ಟ್ಯದ ತೆನೆಹಬ್ಬ ಆಚರಿಸಲಾಯಿತು.

ಮಹಿಳೆಯರು ಪ್ರಾರ್ಥನೆಯನ್ನಾಡಿದರು. ಬಾಲಕೃಷ್ಣ ಎ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಪ್ರತಿಭಾನ್ವಿತರ ಪಟ್ಟಿ ವಾಚಿಸಿದರು. ಡಾ| ಶರ್ಮಿಳಾ ಎಂ.ಜೈನ್ ಸ್ವಾಗತಿಸಿ ಸಾಂಸ್ಕೃತಿಕ ಮೌಲ್ಯ, ಆಚರಣೆಯ ಅಗತ್ಯತೆ, ತುಳುನಾಡ ಸಂಸ್ಕೃತಿಯ ಭವಿಷ್ಯದ ದೃಷ್ಟಿಕೋನ ಮತ್ತು ಯುವ ಜನಾಂಗದ ಸಹಕಾರ, ಮುನ್ನಡೆ ಬಗ್ಗೆ ಆಶಯ ವ್ಯಕ್ತ ಪಡಿಸಿ ಆಭಾರ ಮನ್ನಿಸಿದರು.
