ವರದಿ/ ಚಿತ್ರ: ವಿನೋದ್ ಶೆಟ್ಟಿ ಉಡುಪಿ
ಉಡುಪಿ : ಉಡುಪಿಯ ಅಜ್ಜರಕಾಡಿನಲ್ಲಿ ₹110 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ 250 ಹಾಸಿಗೆಗಳ ನೂತನ ಜಿಲ್ಲಾ ಆಸ್ಪತ್ರೆಗೆ ಹಳೆಯ ವೈದ್ಯಕೀಯ ಪರಿಕರಗಳನ್ನು ವರ್ಗಾಯಿಸುವ ನಿರ್ಧಾರವನ್ನು ಕೈಬಿಟ್ಟು, ಎಲ್ಲಾ ವಿಭಾಗಗಳಿಗೂ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿ ತುಳುನಾಡ ರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಶಸ್ತ್ರಚಿಕಿತ್ಸಕರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ನೂತನ ಆಸ್ಪತ್ರೆಯು ಜಿಲ್ಲೆಯ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ನಿರ್ಮಾಣಗೊಂಡಿದೆ. ಆದರೆ ಇಷ್ಟೊಂದು ದೊಡ್ಡ ಮೊತ್ತ ವೆಚ್ಚ ಮಾಡಿ ನಿರ್ಮಿಸಿರುವ ಆಸ್ಪತ್ರೆಯಲ್ಲಿ ಹಳೆಯ ಬೆಡ್ಗಳು, ಸ್ಕ್ಯಾನಿಂಗ್ ಯಂತ್ರಗಳು ಹಾಗೂ ಶಸ್ತ್ರಚಿಕಿತ್ಸಾ ಕೊಠಡಿಯ ಹಳೆಯ ಪರಿಕರಗಳನ್ನು ಬಳಸಲು ಮುಂದಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಹೊಸ ಆಸ್ಪತ್ರೆ ಎಂದರೆ ಹೊಸ ಕಟ್ಟಡ ಮಾತ್ರವಲ್ಲ, ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳೂ ಇರಬೇಕು. ಹಳೆಯ ಮತ್ತು ಬಳಕೆಗೆ ಯೋಗ್ಯವಲ್ಲದ ಉಪಕರಣಗಳನ್ನು ಬಳಸುವುದರಿಂದ ರೋಗಿಗಳ ಚಿಕಿತ್ಸೆಯ ಗುಣಮಟ್ಟ ಮತ್ತು ಸುರಕ್ಷತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಆದ್ದರಿಂದ ಪ್ರತಿಯೊಂದು ವಿಭಾಗಕ್ಕೂ ಹೊಸ ಉಪಕರಣಗಳನ್ನು ಒದಗಿಸಬೇಕು ಎಂದು ವೇದಿಕೆ ಒತ್ತಾಯಿಸಿದೆ.*₹9 ಕೋಟಿ ಅನುದಾನ ಎಲ್ಲಿ ಬಳಕೆಯಾಗಿದೆ?ನೂತನ ಆಸ್ಪತ್ರೆಗೆ ವೈದ್ಯಕೀಯ ಉಪಕರಣ ಖರೀದಿಗೆ ₹9 ಕೋಟಿ ಅನುದಾನ ಮಂಜೂರಾಗಿತ್ತು.
ಈ ಅನುದಾನದ ಪ್ರಸ್ತುತ ಸ್ಥಿತಿ ಏನು, ಯಾವ ಉದ್ದೇಶಕ್ಕೆ ಬಳಸಲಾಗಿದೆ ಮತ್ತು ಹೊಸ ಉಪಕರಣಗಳ ಖರೀದಿ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಲಾಗಿದೆ.*350 ರಿಂದ 400 ಸಿಬ್ಬಂದಿ ನೇಮಕಕ್ಕೆ ಆಗ್ರಹ 250 ಹಾಸಿಗೆಗಳ ಸಾಮರ್ಥ್ಯದ ಈ ಆಸ್ಪತ್ರೆಯ ಸಮರ್ಪಕ ನಿರ್ವಹಣೆಗೆ ವೈದ್ಯರು, ಶುಶ್ರೂಷಕರು, ತಾಂತ್ರಿಕ ಸಿಬ್ಬಂದಿ ಸೇರಿದಂತೆ ಸುಮಾರು 350 ರಿಂದ 400 ಸಿಬ್ಬಂದಿ ಅಗತ್ಯವಿದೆ.
ಹೀಗಾಗಿ ಅಗತ್ಯಕ್ಕೆ ಅನುಗುಣವಾಗಿ ಹೊಸ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಎಲ್ಲ ವೈದ್ಯಕೀಯ ಉಪಕರಣಗಳು ಮತ್ತು ಸಿಬ್ಬಂದಿ ವ್ಯವಸ್ಥೆ ಪೂರ್ಣಗೊಳ್ಳುವವರೆಗೆ ತರಾತುರಿಯಲ್ಲಿ ಆಸ್ಪತ್ರೆ ಕಾರ್ಯಾರಂಭ ಮಾಡಬಾರದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಬೇಡಿಕೆ ಈಡೇರದಿದ್ದರೆ ಹೋರಾಟದ ಎಚ್ಚರಿಕೆ : ಈ ವಿಚಾರವನ್ನು ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆರೋಗ್ಯ ಸಚಿವರ ಗಮನಕ್ಕೂ ತರಲಾಗಿದೆ. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಜಿಲ್ಲಾ ಮಟ್ಟದಲ್ಲಿ ಮಾತ್ರವಲ್ಲದೆ, ಇತರ ಸಂಘಟನೆಗಳ ಸಹಕಾರದೊಂದಿಗೆ ರಾಜ್ಯಮಟ್ಟದಲ್ಲಿಯೂ ಹೋರಾಟ ನಡೆಸಲಾಗುವುದು ಎಂದು ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಫ್ರಾಂಕ್ಲಿ ಡಿಸೋಜ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ, ಆರೋಗ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೂ ಮನವಿಯ ಪ್ರತಿಗಳನ್ನು ಸಲ್ಲಿಸಲಾಗಿದೆ.
ಪ್ರತಿಭಟನೆಯಲ್ಲಿ ಕಾರ್ಮಿಕ ಘಟಕದ ಅಧ್ಯಕ್ಷ ಜಯ ಪೂಜಾರಿ ಲಕ್ಷ್ಮಿನಗರ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಾಗಲಕ್ಷ್ಮಿ ಸುಬ್ರಮಣ್ಯನಗರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಂಕರ್ ಉಡುಪಿ, ಕಾಪು ಘಟಕದ ಅಧ್ಯಕ್ಷ ನಿತೀನ್ ಕುಮಾರ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
