ಕೃಪೆ : ಪಿಂಗಾರ
ಉಡುಪಿ : ಕಾರ್ಕಳದ ಸಂಗೀತ ಕಲಾವಿದೆ ಮಹಾಲಕ್ಷ್ಮಿ ಶೆಣೈ ಅವರು 2024-25ನೇ ಸಾಲಿನ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರತಿಷ್ಠಿತ ‘ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ’ಕ್ಕೆ ಆಯ್ಕೆಯಾಗಿದ್ದಾರೆ. ಈ ಮೂಲಕ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದ ಕರ್ನಾಟಕದ ಕರಾವಳಿ ಭಾಗದ ಮೊದಲ ಕಲಾವಿದೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

38 ವರ್ಷದ ಮಹಾಲಕ್ಷ್ಮಿ ಶೆಣೈ ಅವರು ತಮ್ಮ ಮೂರನೇ ವಯಸ್ಸಿನಲ್ಲೇ ಸಂಗೀತ ಕ್ಷೇತ್ರಕ್ಕೆ ಪ್ರವೇಶಿಸಿದ್ದು, ಕಳೆದ ಎರಡು ದಶಕಗಳಲ್ಲಿ 1,500ಕ್ಕೂ ಹೆಚ್ಚು ಸಂಗೀತ ಕಛೇರಿಗಳನ್ನು ನೀಡಿದ್ದಾರೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಗಮನಾರ್ಹ ಸಾಧನೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.
ಖ್ಯಾತ ಸಂಗೀತ ವಿದ್ವಾಂಸ ಪಂಡಿತ್ ವಿಶ್ವಮೋಹನ್ ಭಟ್ ಅವರ ಶಿಷ್ಯೆಯಾಗಿರುವ ಮಹಾಲಕ್ಷ್ಮಿ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಭರತನಾಟ್ಯದಲ್ಲಿಯೂ ಪರಿಣತಿ ಹೊಂದಿದ್ದಾರೆ.ಅವರು ಆಕಾಶವಾಣಿಯ ‘ಎ’ ಶ್ರೇಣಿಯ ಕಲಾವಿದೆಯಾಗಿದ್ದಾರೆ. ಸಮಾಜಕಾರ್ಯದಲ್ಲಿ (MSW) ಮತ್ತು ವಿಜ್ಞಾನದಲ್ಲಿ (MS) ಪದವಿಗಳನ್ನು ಪಡೆದಿರುವ ಅವರು, ಉದಯಪುರದ ಮೋಹನ್ಲಾಲ್ ಸುಖಾಡಿಯಾ ವಿಶ್ವವಿದ್ಯಾಲಯದಲ್ಲಿ (MLSU) ಸಂಗೀತ ವಿಷಯದಲ್ಲಿ ಸ್ನಾತಕೋತ್ತರ ಪದವಿ (MA) ಗಳಿಸಿದ್ದಾರೆ.

ಈ ಸಂದರ್ಭದಲ್ಲಿ ಅವರಿಗೆ ಚಿನ್ನದ ಪದಕವೂ ಲಭಿಸಿದೆ.ಇದಲ್ಲದೆ, ಉಡುಪಿ ಜಿಲ್ಲಾ ‘ಸುವರ್ಣ ರಾಜ್ಯೋತ್ಸವ’ ಪ್ರಶಸ್ತಿ ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ‘ಕೊಂಕಣಿ ನಕ್ಷತ್ರ ಯುವ ಸಾಧಕಿ’ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವಗಳಿಗೆ ಅವರು ಭಾಜನರಾಗಿದ್ದಾರೆ.
