ಕೃಪೆ: ಕುಂದೇಶ್ವರ ಬುಲೆಟಿನ್
ಮಂಗಳೂರು: ಕರ್ನಾಟಕ ತುಳು ಸಾಹಿತ್ಯ 2025-26 ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. 2025ರ ಗೌರವ ಪ್ರಶಸ್ತಿಗೆ ಸಾಹಿತ್ಯ/ಸಂಶೋಧನಾ ಕ್ಷೇತ್ರದಿಂದ ಹಿರಿಯ ವಿದ್ವಾಂಸ ಪ್ರೊ. ಬಿ. ಶಿವರಾಮ ಶೆಟ್ಟಿ, ಜಾನಪದ ಕ್ಷೇತ್ರದಿಂದ ಹಿರಿಯ ಡೋಲು ವಾದನ ಕಲಾವಿದ ಕುಡ್ಡು ಕೊರಗ ಪಾಂಗಾಳ ಹಾಗೂ ನಾಟಕ/ಸಿನಿಮಾ ಕ್ಷೇತ್ರದಿಂದ ಖ್ಯಾತ ನಟಿ, ನಿರ್ದೇಶಕಿ ಉಷಾ ಭಂಡಾರಿ ಆಯ್ಕೆಯಾಗಿದ್ದಾರೆ.
2026ರ ಪ್ರಶಸ್ತಿಗೆ ಗಣಕ ತಂತ್ರಜ್ಞಾನ ಹಾಗೂ ಸಂಶೋಧನಾ ಕ್ಷೇತ್ರದಿಂದ ಕಿನ್ನಿಕಂಬಳ ಪದ್ಮನಾಭರಾವ್ (ಕೆ.ಪಿ.ರಾವ್), ಜಾನಪದ ಕ್ಷೇತ್ರದಿಂದ ದೈವ ನರ್ತಕ ನೇಮು ಪರವ ಮತ್ತು ನಾಟಕ/ಸಿನಿಮಾ ಕ್ಷೇತ್ರದಿಂದ ಹಿರಿಯ ರಂಗಕರ್ಮಿ ಹಾಗೂ ನಿರ್ದೇಶಕ ಸುಧಾಕರ ಬನ್ನಂಜೆ ಭಾಜನರಾಗಿದ್ದಾರೆ.
ಪ್ರಶಸ್ತಿಯು ತಲಾ 50,000 ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಅಕ್ಟೋಬರ್ 4ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಲಿದೆ ಎಂದು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ.
ಪುರಸ್ಕೃತರ ಪರಿಚಯ :
ಪ್ರೊ. ಬಿ. ಶಿವರಾಮ ಶೆಟ್ಟಿ – ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 38 ವರ್ಷಗಳ ಕಾಲ ಅಧ್ಯಾಪನ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಇವರು ತುಳುನಾಡಿನ ಪ್ರಮುಖ ವಿದ್ವಾಂಸರು. ತುಳುನಾಡಿನ ಸಸ್ಯ ಜಾನಪದ ಮಹಾಪ್ರಬಂಧಕ್ಕೆ ಪಿಎಚ್.ಡಿ ಪಡೆದಿದ್ದಾರೆ. ಮಂಗಳೂರು ವಿ.ವಿ.ಯ ತುಳು ವಿಭಾಗದ ಸ್ಥಾಪಕ ಸಂಯೋಜಕರಾಗಿ ಹಾಗೂ ಪಠ್ಯ ಪುಸ್ತಕ ರಚನಾ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. 15ಕ್ಕೂ ಹೆಚ್ಚು ಕೃತಿಗಳನ್ನು ಸಂಪಾದಿಸಿದ್ದಾರೆ.
ಕುಡ್ಲು ಕೊರಗ ಪಾಂಗಾಳ – ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಇನ್ನಂಜೆ ಗ್ರಾಮದ ಪಾಂಗಾಳದವರಾದ ಇವರು ಕಳೆದ ನಾಲ್ಕು ದಶಕಗಳಿಂದ ತುಳುನಾಡಿನ ಸಾಂಪ್ರದಾಯಿಕ ಡೋಲು ವಾದನ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬುಟ್ಟಿ ಹೆಣೆಯುವ ಕಾಯಕದ ಜೊತೆಗೆ ಡೋಲು ವಾದನ ಮತ್ತು ‘ಬಿರ್ದುದ ಪಾಟ್’ ಹಾಡುವುದರಲ್ಲಿ ನಿಷ್ಣಾತರು. ಕೊರಗ ಸಮುದಾಯದ ಗುರಿಕಾರರಾಗಿ ಸೇವೆ ಸಲ್ಲಿಸಿದವರು.
ಉಷಾ ಭಂಡಾರಿ – ಮೂಲತಃ ಇವರು ಉಳ್ಳಾಲದವರಾಗಿದ್ದು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ನೀನಾಸಂ ಹಳೆಯ ವಿದ್ಯಾರ್ಥಿನಿಯಾಗಿದ್ದು, ಬೆಂಗಳೂರು ವಿವಿ ನಾಟಕ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಕಳೆದ ಮೂರೂವರೆ ದಶಕಗಳಿಂದ ನಟಿ,ನಿರ್ದೇಶಕಿ, ಕಂಠದಾನ ಕಲಾವಿದೆ ಹಾಗೂ ನಟನಾ ತರಬೇತುದಾರೆಯಾಗಿದ್ದು, ಅನೇಕ ತುಳು-ಕನ್ನಡ ನಾಟಕ, ಸಿನಿಮಾ, ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.
ಕೆ. ಪಿ. ರಾವ್ – ಭಾರತೀಯ ಭಾಷೆಗಳನ್ನು ಗಣಕಯಂತ್ರಕ್ಕೆ ಅಳವಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಕೆ.ಪಿ. ರಾವ್ ಅವರು, ತುಳು ಲಿಪಿಯ ತಂತ್ರಾಂಶ ಸಿದ್ದಪಡಿಸುವಲ್ಲಿಯೂ ಆದ್ಯ ಸಂಶೋಧನೆ ನಡೆಸಿದವರು. ಇವರು ರೂಪಿಸಿದ ತಂತ್ರಾಂಶದ ನೆರವಿನಿಂದಲೇ ಉಡುಪಿಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ತುಳು ನಿಘಂಟಿನ ಆರು ಸಂಪುಟಗಳು ಮುದ್ರಣಗೊಂಡವು, ತುಳುವಿನ ಧ್ವನಿವಿಜ್ಞಾನಕ್ಕೆ ಟೈಪಿಂಗ್ ಪ್ರೋಗ್ರಾಂ ರೂಪಿಸಿದ ಹೆಗ್ಗಳಿಕೆ ಇವರದ್ದಾಗಿದೆ.
ನೇಮು ಪರವ – ಪುತ್ತೂರು ತಾಲ್ಲೂಕಿನ ಕೆಯೂರು ಗ್ರಾಮದವರಾದ ಇವರು 16ನೇ ವಯಸಿನಿಂದಲೇ ದೈವ ನರ್ತನ ಸೇವೆ ಆರಂಭಿಸಿದರು. ಪುತ್ತೂರು, ಸುಳ್ಯ, ಬಂಟ್ವಾಳ ಹಾಗೂ ಕೊಡಗಿನ ಪ್ರಮುಖ ದೈವಸ್ಥಾನಗಳು. 18 ಬ್ರಹ್ಮ ಬೈದರ್ಕಳ ಗರಡಿಗಳು ಮತ್ತು 25ಕ್ಕೂ ಹೆಚ್ಚು ಪುರಾತನ ಕ್ಷೇತ್ರಗಳಲ್ಲಿ ಪಂಜುರ್ಲಿ, ಪಿಲಿಚಾಮುಂಡಿ, ರಕ್ತಶ್ವರಿ ಸೇರಿದಂತೆ ವಿವಿಧ ದೈವಗಳ ನರ್ತನ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಸುಧಾಕರ ಬನ್ನಂಜೆ – ಉಡುಪಿಯ ಬನ್ನಂಜೆ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿರುವ ಇವರು ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ನಾಲ್ಕು ದಶಕಗಳಿಂದ ಗುರುತಿಸಿಕೊಂಡಿದ್ದಾರೆ. 64 ತುಳು ಹಾಗೂ 24 ಕನ್ನಡ ನಾಟಕಗಳನ್ನು ರಚಿಸಿರುವ ಇವರು ನೂರಾರು ನಾಟಕ-ಸಿನಿಮಾಗಳಲ್ಲಿ ನಟಿಸಿದ್ದಾರೆ. ದೂರದರ್ಶನ ಮತ್ತು ವಾಹಿನಿಗಳಿಗೆ ಧಾರಾವಾಹಿ-ಕಿರುಚಿತ್ರಗಳನ್ನು ನಿರ್ಮಿಸಿದ್ದಾರೆ.
