ವರದಿ /ಚಿತ್ರ :ರವಿರಾಜ್ ಕಾವೂರು
ಬೆಳ್ತಂಗಡಿ: ವನ್ಯಜೀವಿ ಪ್ರೇಮಿಗಳಲ್ಲಿ ಸಂತಸ ಮೂಡಿಸುವ ಪ್ರಸಂಗವೊಂದರಲ್ಲಿ, ಪಶ್ಚಿಮ ಘಟ್ಟದ ತಪ್ಪಲಿನ ಖಾಸಗಿ ತೋಟವೊಂದರಲ್ಲಿ ಹರಿಯುವ ಸಣ್ಣ ಹಳ್ಳದಲ್ಲಿ ಅಪರೂಪದ ಜಲನಾಯಿಗಳ (Smooth-coated otters) ಹಿಂಡು ಆಟವಾಡುತ್ತಿರುವುದು ಕಂಡುಬಂದಿದೆ.ಇತ್ತೀಚಿನ ಮುಂಗಾರು ಮಳೆಯಿಂದಾಗಿ ರಭಸವಾಗಿ ಹರಿಯುತ್ತಿರುವ ಕೆಸರು ನೀರಿನಲ್ಲಿ ಹಲವಾರು ಜಲನಾಯಿ ಮರಿಗಳು ಮತ್ತು ಕೆಲವು ದೊಡ್ಡ ಜಲನಾಯಿಗಳು ಈಜಾಡುತ್ತಾ ಆಟವಾಡುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ.

ಈ ಹಿಂದೆ ನೇತ್ರಾವತಿ ನದಿಯ ಮುಖ್ಯ ಪಾತ್ರದಲ್ಲಿ ಜಲನಾಯಿಗಳು ಅಪರೂಪಕ್ಕೆ ಕಾಣಿಸಿಕೊಳ್ಳುತ್ತಿದ್ದವು. ಆದರೆ, ಕೃಷಿ ಭೂಮಿಯ ನಡುವೆ ಹರಿಯುವ ಇಷ್ಟು ಕಿರಿದಾದ ಹಳ್ಳದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಜಲನಾಯಿ ಮರಿಗಳು ಒಟ್ಟಿಗೆ ಕಾಣಿಸಿಕೊಂಡಿರುವುದು ಅತ್ಯಂತ ಅಪರೂಪದ ಘಟನೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಪರಿಸರ ಸಮತೋಲನದ ಆಶಾದಾಯಕ ಮುನ್ಸೂಚನೆಈ ಕುರಿತು ಮಾಹಿತಿ ನೀಡಿರುವ ಸ್ಥಳೀಯ ಪರಿಸರವಾದಿಗಳು, “ಅತಿ ಸೂಕ್ಷ್ಮ ಜೀವಿಯಾಗಿರುವ ಜಲನಾಯಿಗಳು ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವುದು ಸ್ಥಳೀಯ ಜಲಮೂಲಗಳು ಇನ್ನು ಕೂಡ ಸ್ವಚ್ಛ ಮತ್ತು ಆರೋಗ್ಯಕರವಾಗಿವೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಜಲನಾಯಿಗಳು ಬದುಕಲು ಮಾಲಿನ್ಯರಹಿತ ನೀರು ಮತ್ತು ಸಮೃದ್ಧ ಮೀನುಗಳ ಅಗತ್ಯವಿರುತ್ತದೆ. ಹಾಗಾಗಿ ಇವುಗಳ ಉಪಸ್ಥಿತಿಯು ಇಡೀ ನದಿ ವ್ಯವಸ್ಥೆಗೆ ಒಂದು ಒಳ್ಳೆಯ ಸಂಕೇತವಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.ಇದೇ ವೇಳೆ, ಪರಿಸರ ಪ್ರೇಮಿಗಳು ಕೃಷಿಕರಲ್ಲಿ ಮತ್ತು ಸ್ಥಳೀಯ ನಿವಾಸಿಗಳಲ್ಲಿ ಜಲನಾಯಿಗಳಿಗೆ ಯಾವುದೇ ತೊಂದರೆ ನೀಡದಂತೆ ವಿನಂತಿಸಿದ್ದಾರೆ.
ನದಿ ಪಾತ್ರಗಳಲ್ಲಿ ನಡೆಯುವ ಮರಳು ಗಣಿಗಾರಿಕೆ, ಕಾಡು ನಾಶ ಮತ್ತು ತೋಟಗಳಿಗೆ ಬಳಸುವ ರಾಸಾಯನಿಕಗಳ ಕಾರಣದಿಂದಾಗಿ ಜಲನಾಯಿಗಳ ಸಂತತಿ ಇಂದು ಅಪಾಯದಲ್ಲಿದೆ. ಈ ಭಾಗದಲ್ಲಿ ಜಲನಾಯಿಗಳು ಪತ್ತೆಯಾಗಿರುವ ಬಗ್ಗೆ ಪ್ರಾದೇಶಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಪ್ರಾಣಿಗಳ ರಕ್ಷಣೆಗೆ ಸೂಕ್ತ ನಿಗಾ ವಹಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
