28.5 C
ಮಂಗಳೂರು
September 4, 2026
Uncategorizedಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶವಿಶೇಷ ಅಂಕಣಸಾಮಾಜಿಕ/ಇತಿಹಾಸ

ಪವಿತ್ರ ತುಳುನಾಡಿನ ದೈವರಾಧನೆ – ಮೂಲವನ್ನ ಮರೆಯದಿರಿ: ಸಾವಿರ ವರ್ಷಗಳ ನಂಬಿಕೆ, ಕುಟುಂಬದ ಬೇರು;

ಬರಹ/ಚಿತ್ರ: ವಿನೋದ್ ಶೆಟ್ಟಿ ಉಡುಪಿ

1. ಪಂಚವರ್ಣದ ನಾಡು – ದೈವರಾಧನೆಯ ನಾಡು :

ಪವಿತ್ರವಾದ ನಾಗ ನಡೆಯ ನಾಡು ಇದು. ಮಣ್ಣಿನ ಪರಿಮಳಕ್ಕೆ ದೈವದ ಕುಂಕುಮದ ಪರಿಮಳ ಸೇರಿದ ನಾಡು ತುಳುನಾಡು. ಇಲ್ಲಿ ದೈವರಾಧನೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ದೇವಸ್ಥಾನದ ಕಲ್ಲಿಗಿಂತ ಮೊದಲು, ಮರದ ಕೆಳಗಿನ ನಾಗಬನದಲ್ಲಿ, ಮನೆಯ ಮೂಲೆಯ ಗುಡಿಯಲ್ಲಿ ದೈವ ನೆಲೆಸಿದ ನಾಡು ಇದು. ತುಳುವನ ಜನ್ಮದಿಂದ ಮರಣದವರೆಗೆ ದೈವೇ ಜೊತೆ. ಹುಟ್ಟಿದಾಗ “ಬಾರ್‌ಗ” ಕೊಡುವುದು, ಮದುವೆಗೆ ಅನುಮತಿ ಕೇಳುವುದು, ಕಷ್ಟ ಬಂದಾಗ ಮೊರೆ ಹೋಗುವುದು – ಎಲ್ಲವೂ ದೈವದ ಮುಂದೆ.

2. “ಯಾವುದೇ ದೈವಕ್ಕೂ ಕೈಮುಗಿದರೆ ಫಲವಿಲ್ಲ” – ಇದರ ಅರ್ಥವೇನು?

ನಾವು ಕಷ್ಟ ಬಂದಾಗ ಊರೂರಿಗೆ ಓಡುತ್ತೇವೆ. ಎಲ್ಲ ದೈವ ಸ್ಥಾನಕ್ಕೂ ಹೋಗಿ ಹರಕೆ ಹೊರುತ್ತೇವೆ. ಆದರೆ ನಮ್ಮ ಹಿರಿಯರು ಹೇಳುತ್ತಾರೆ:_”ನಾವು ನಂಬಿರುವ ಕುಟುಂಬದ ದೈವಗಳಿಗೆ ಹಾಗೂ ಗ್ರಾಮದ ದೈವಗಳಿಗೆ ಶರಣಾದರೆ ಮಾತ್ರ ಬೇಡಿಕೆ ಈಡೇರುತ್ತದೆ. ಎಲ್ಲೆಲ್ಲಿ ಕೈಮುಗಿದು ಬೇಡಿದರೆ ಫಲವಿಲ್ಲ.”_ಇದರ ಅರ್ಥ ಏನು ಗೊತ್ತಾ? ದೈವವೂ ನಮ್ಮ ಕುಟುಂಬದ ಹಿರಿಯರ ಹಾಗೆ. ನಿಮ್ಮ ಮನೆಯ ತಂದೆ-ತಾಯಿ ನಿಮ್ಮ ಕಷ್ಟಕ್ಕೆ ಮೊದಲು ಸ್ಪಂದಿಸುವ ಹಾಗೆ, ನಿಮ್ಮ ಮೂಲ ದೈವ, ನಿಮ್ಮ ಕುಟುಂಬದ ದೈವ ನಿಮ್ಮ ಕಷ್ಟಕ್ಕೆ ಮೊದಲು ಓಡಿ ಬರುತ್ತದೆ. ನಿಮ್ಮ ಮೂಲ ಗೊತ್ತಿಲ್ಲದೆ, ನಿಮ್ಮ ಬೇರು ಗೊತ್ತಿಲ್ಲದೆ ಬೇರೆಯವರ ಬಾಗಿಲು ಬಡಿದರೆ ಯಾರು ಕೇಳುತ್ತಾರೆ?

3. ತುಳುವರಿಗೆ ಪ್ರಧಾನವಾದ 3 ಮೂಲಗಳು

ತುಳುವರಿಗೆ ಜೀವನದಲ್ಲಿ 3 ವಿಷಯ ತುಂಬಾ ಮುಖ್ಯ:

1. ಕುಟುಂಬದ ಮೂಲ ನಾಗಸ್ಥಾನ – ನಾಗ ನಮಗೆ ಕೇವಲ ಹಾವು ಅಲ್ಲ. ನಮ್ಮ ಪೂರ್ವಜರು, ನಮ್ಮ ರಕ್ಷಕರು. ಪ್ರತಿಯೊಂದು ತುಳು ಮನೆಯಲ್ಲೂ ಮೂಲ ನಾಗಸ್ಥಾನ ಇರಲೇಬೇಕು. ಅಲ್ಲಿ ವರ್ಷಕ್ಕೆ ಒಮ್ಮೆಯಾದರೂ ನಾಗರ ಪಂಚಮಿ ಪೂಜೆ, ಹಾಗೂ ನಾಗಮಂಡಲ ಆದಾಗ ಕುಟುಂಬದವರೆಲ್ಲ ಸೇರಬೇಕು. ನಾಗರ ಕೋಪ ಎಂದರೆ ಕುಟುಂಬದ ಬೇರಿಗೆ ಪೆಟ್ಟು.

2.ಕುಟುಂಬದ ಮೂಲದ ದೈವಸ್ಥಾನ – ನಿಮ್ಮ ಮನೆಗೆ, ನಿಮ್ಮ ಕುಟುಂಬಕ್ಕೆ , ನಿಮ್ಮ ಕುಲಕ್ಕೆ ಒಂದು ನಿರ್ದಿಷ್ಟ ದೈವ ಇರುತ್ತದೆ. ಜುಮಾದಿ, ಪಿಲಿ ಚಾಮುಂಡಿ, ಗುಳಿಗ, ಕಲ್ಲುರ್ಟಿ, ಬಬ್ಬು ಸ್ವಾಮಿ… ಯಾವುದಾದರೂ ಒಂದು. ಅದು ನಿಮ್ಮ ಮನೆಯ ಕಾವಲು ದೈವ. ಅದಕ್ಕೆ ಮೊದಲು ಹರಕೆ. ಅದಕ್ಕೆ ಮೊದಲು ಕಾಣಿಕೆ.

3.ಕುಟುಂಬದ ಮೂಲ ಆದಿ ಹಾಲಡೆ – ಇದು ನಮ್ಮ ಮನೆತನದ ತಾಯಿ ಮನೆ, ಮೂಲದ ಮನೆ. ನಮ್ಮ ಜನಾಂಗದ ಆರಂಭದ ಸ್ಥಳ. ಇಲ್ಲಿಂದಲೇ ನಮ್ಮ ರಕ್ತದ ಹರಿವು ಶುರುವಾಗಿದೆ. ವರ್ಷಕ್ಕೊಮ್ಮೆಯಾದರೂ ಆದಿ ಹಾಲಡೆಗೆ ಹೋಗಿ, ಅಲ್ಲಿನ ಮಣ್ಣಿಗೆ ಕೈಮುಗಿಯಬೇಕು.

4. ಯಾಕೆ ಮೂಲವನ್ನು ಮರೆಯಬಾರದು? – ಇವತ್ತು ನಾವು ಉದ್ಯೋಗಕ್ಕೆ, ಓದಿಗೆ ಊರೂರಿಗೆ ಹೋಗಿದ್ದೇವೆ. ಆಧುನಿಕರಾಗಿದ್ದೇವೆ. ಆದರೆ ಮೂಲ ಮರೆತರೆ ಮರದ ಬೇರು ಕತ್ತರಿಸಿದ ಹಾಗೆ.

1.ರಕ್ಷಣೆ : ಕಷ್ಟ ಬಂದಾಗ ನಿಮ್ಮನ್ನು ಮೊದಲು ರಕ್ಷಿಸುವುದು ನಿಮ್ಮ ಕುಟುಂಬದ ದೈವ.

2. ಗುರುತು: “ನೀನು ಯಾರು?” ಎಂದು ಕೇಳಿದರೆ “ನಾನು ಇಂತಹ ಮನೆತನ, ಇಂತಹ ಊರಿನವ” ಎಂದು ಹೇಳಲು ನಮ್ಮ ಮೂಲ ಬೇಕು.

3. ಶಾಂತಿ: ಮನೆಯಲ್ಲಿ ಕಲಹ, ಅನಾರೋಗ್ಯ, ವ್ಯಾಪಾರದಲ್ಲಿ ನಷ್ಟವಾದಾಗ ಹಿರಿಯರು ಮೊದಲು ಕೇಳುವುದು “ಮೂಲ ದೈವಕ್ಕೆ ಪೂಜೆ ಆಯಿತಾ?” ಎಂದು.

ಕೊನೆಯ ಮಾತು :

ಬೇರನ್ನು ನೀರಿದರೆ ಮರ ಹಸಿರಾಗುತ್ತದೆ.ಈ ಪಂಚವರ್ಣದ ತುಳುನಾಡು ಇಷ್ಟೊಂದು ವಿಶೇಷವಾಗಿರಲು ಕಾರಣವೇ ನಮ್ಮ ದೈವರಾಧನೆ. ನಮ್ಮ ನಂಬಿಕೆ. ಹೊರಗಿನ ಜಗತ್ತು ಎಷ್ಟೇ ದೊಡ್ಡದಾದರೂ, ನಾವೆಲ್ಲೋ ಟೂರಿಸಂಗೆ ಹೋದರೂ, ಕಷ್ಟ ಬಂದ ಕೂಡಲೇ ಮೊದಲು ನೆನಪಾಗುವುದು _”ನಮ್ಮ ಮನೆಯ ದೈವ”_. ಆದ್ದರಿಂದ ಇದನ್ನು ಯಾವತ್ತೂ ಮರೆಯಬೇಡಿ. ನಿಮ್ಮ ಮೂಲ ನಾಗಸ್ಥಾನಕ್ಕೆ ಹೋಗಿ. ಕುಟುಂಬದ ದೈವಸ್ಥಾನಕ್ಕೆ ಹೋಗಿ. ಆದಿ ಹಾಲಡೆಗೆ ಹೋಗಿ. ಅಲ್ಲಿ ಕೈಮುಗಿದು ಹೇಳಿ – “ನಾನು ನಿನ್ನ ಮಗ/ಮಗಳು. ನನ್ನನ್ನು ಕಾಪಾಡು” ಖಂಡಿತಾ ದೈವ ಕೇಳುತ್ತದೆ. *ಬೇರಿಗೆ ನೀರು ಹಾಕಿದರೆ ಮಾತ್ರ ಎಲೆ ಹಸಿರಾಗುತ್ತದೆ.

🌿*ಸರ್ವೇಜನಾ ಸುಖಿನೋ ಭವಂತು* *ದೈವದ ಆಶೀರ್ವಾದ ಸದಾ ಇರಲಿ*

Related posts

ಶಿವಾ’ಸ್ ಹೇರ್ ಡಿಝೈನರ್‍ಸ್ ಪರಿವಾರದ ಮೂವತ್ತ ಎಂಟರ ಸಂಭ್ರಮ: ಶಿವಾ ಸರ್ವಸಂಪನ್ನ ಸದ್ಗುಣವಂತ ಹೃದಯಶೀಲರು : ಮಧುರ್ ಭಂಡಾರ್ಕರ್;

Voiceoftulunadu

ಕುಲಾಲ ಫ್ಯಾಮಿಲಿ ಯುಎಇ ವತಿಯಿಂದ ಯಶಸ್ವಿ ರಕ್ತದಾನ ಶಿಬಿರ;

Voiceoftulunadu

ಹೆಬ್ರಿಯ ಚಾಣಕ್ಯ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಚೆಸ್ ತರಗತಿ ಉದ್ಘಾಟನೆ : ಚೆಸ್‌ ತರಗತಿ ಉದ್ಘಾಟಿಸಿದ ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಾಧಿಕಾರಿ ನಿತ್ಯಾನಂದ ಶೆಟ್ಟಿ;

Voiceoftulunadu

Leave a Comment