ಮಂಗಳೂರು : ಮೀನುಗಾರಿಕೆ ಧಕ್ಕೆಗೆ ಬಂದು ಮೀನುಗಾರನ್ನು ಹತ್ತಿರದಿಂದ ಕಂಡು ಅವರಿಂದ ಸಮಸ್ಯೆ ತಿಳಿಯುವ ಪ್ರಯತ್ನವನ್ನು ನಾಡಿನ ದೊರೆ ಮಾಡಿದ್ದಾರೆ. ಈ ಮೂಲಕ ಮೀನುಗಾರರ ಪ್ರಮುಖ ಬೇಡಿಕೆಗಳು ಈಡೇರುವ ಹಾಗೂ ಕನಸು ನನಸಾಗುವ ನಿರೀಕ್ಷೆ ಮೂಡಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಮೀನುಗಾರರ ಘಟಕದ ಅಧ್ಯಕ್ಷ ಚೇತನ್ ಬೆಂಗ್ರೆ ತಿಳಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀನುಗಾರರ ಹಲವು ಸಮಸ್ಯೆಗಳನ್ನು ಈಗಾಗಲೇ ಸರಕಾರದ ಗಮನಕ್ಕೆ ತರಲಾಗಿದೆ. ಈಗಾಗಲೇ ಮೂರನೇ ಹಂತದ ಜೆಟ್ಟಿ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಸಚಿವ ಸಂಪುಟ ಸಭೆಯಲ್ಲಿ ಕೋಟೆಪುರದಲ್ಲಿ ನಾಡದೋಣಿ ತಂಗುದಾಣಕ್ಕೆ 8 ಕೋಟಿ ರೂ., ಮಂಗಳೂರು ಮೀನುಗಾರಿಕೆ ಕಾಲೇಜನ್ನು ವಿವಿಯನ್ನಾಗಿಸುವ ಪ್ರಕ್ರಿಯೆ, ಎಕ್ಕೂರಿನಲ್ಲಿ ಸುಸಜ್ಜಿತ ಸಗಟು ಮೀನು ಮಾರುಕಟ್ಟೆ ಕೊಂಡಿ ರಸ್ತೆಗಳ ನಿರ್ಮಾಣ ಮತ್ತಿತರ ಯೋಜನೆಗಳನ್ನು ನೀಡಲಾಗಿದೆ ಎಂದು ಹೇಳಿದರು.
ಮುಖ್ಯವಾಗಿ ನೇತ್ರಾವತಿ, ಫಲ್ಗುಣಿ ಹಾಗೂ ಅಳಿವೆ ಬಾಗಿಲಿನಲ್ಲಿ ಸಮರ್ಪಕವಾಗಿ ಹೂಳೆತ್ತದೆ 25 ವರ್ಷಗಳಾಗಿವೆ. ಸಣ್ಣ ಪ್ರಮಾಣದಲ್ಲಿ ಆಗಾಗ್ಗೆ ಹೂಳೆತ್ತಲಾಗಿದ್ದರೂ ಕಟ್ಟಿಂಗ್ ಡ್ರೆಜ್ಜರ್ ಯಂತ್ರದಮೂಲಕ ಹೂಳೆತ್ತಬೇಕೆಂಬುದು ನಮ್ಮ ಆಗ್ರಹವಾಗಿದೆ.ಜೊತೆಗೆ ಹೂಳೆತ್ತಿದ ಮರಳನ್ನು ಮತ್ತೆ ಸಮುದ್ರಕ್ಕೆ ಹಾಕದೆ ಅದನ್ನು ಬೆಂಗ್ರೆಯಿಂದ ಕೂಳೂರುವರೆಗಿನ ಬಂದರು ಇಲಾಖೆಗೊಳಪಡುವ ಭೂಮಿಯಲ್ಲಿ ಸುರಿದು ಅಲ್ಲಿನ ಎತ್ತರ ತಗ್ಗು ನೀರು ನಿಲ್ಲುವ ಗುಂಡಿಗಳನ್ನು ಸರಿಪಡಿಸಿದರೆ ಅಲ್ಲಲ್ಲಿ ಮೀನುಗಾರಿಕೆ ದೋಣಿಗಳ ತಂಗುದಾಣ (ಡಾಕ್)ಗಳನ್ನು ನಿರ್ಮಾಣ ಮಾಡಬಹುದು.
ಈಗಿ ರುವ ಡಾಕ್ನಲ್ಲಿ ಕೇವಲ 200ರಷ್ಟು ದೋಣಿಗಳು ಮಾತ್ರ ನಿಲುಗಡೆ ಮಾಡಬಹುದಾಗಿದ್ದು ನಾಡದೋಣಿ ಸೇರಿದಂತೆ 4,000ದಷ್ಟು ಮೀನುಗಾರಿಕೆ ದೋಣಿಗಳ ತಂಗುದಾಣದ ಸಮಸ್ಯೆ ಆ ಮೂಲಕ ಬಗೆಹರಿಯಲಿದೆ. ಈ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತರಲಾಗಿದ್ದು, ಪೂರಕವಾಗಿ ಸ್ಪಂದಿಸಿದ್ದಾರೆ.
ಹೊಸ ಹೂಳೆತ್ತುವ ಯಂತ್ರ ಖರೀದಿ ಬಗ್ಗೆಯೂ ಆಸಕ್ತಿ ತೋರಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಈಗಾಗಲೇ ಮೀನುಗಾರರ ಸಮಸ್ಯೆಗಳನ್ನು ಅರಿತಿರುವುದರಿಂದ ಈ ಬಗ್ಗೆಶೀಘ್ರವೇ ಸಭೆ ನಡೆಸಿ ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸುವುದಾಗಿ ತಿಳಿಸಿದ್ದಾರೆ ಎಂದು ಚೇತನ್ ಬೆಂಗ್ರೆ ವಿವರ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮುಖಂಡ ರವಿ ಶ್ರೀಯಾನ್, ಮಾಜಿ ಕಾರ್ಪೊರೇಟರ್ಗಳಾದ ಸರಳಾ ಕರ್ಕೇರ, ಕವಿತಾ ವಾಸು, ಕುಮಾರ್ ಮೆಂಡನ್, ಜಿಲ್ಲಾ ಮುಖಂಡರಾದ ನವೀನ್ ಕರ್ಕೇರ, ಪವಿತ್ರಾ ಕರ್ಕೇರ ಉಪಸ್ಥಿತರಿದ್ದರು.
