ವರದಿ/ಚಿತ್ರ : ದಿತೇಶ್ ಪೂಜಾರಿ ಮಂಗಳೂರು
ವಿಟ್ಲ: ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಉರುಳಿದ ಪರಿಣಾಮ ಕಾರಿ ನೊಳಗೆ ಸಿಲುಕಿದ್ದ ಮಗು, ಮಹಿಳೆ ಹಾಗೂ ಚಾಲಕ ನನ್ನು ವಿಟ್ಲ ಎಸ್‌ಐ ಮತ್ತು ಸಿಬ್ಬಂದಿ ರಕ್ಷಿಸಿದ ಘಟನೆ ಸೂರಿಕುಮೇರ್ ಪೆಟ್ರೋಲ್ ಬಂಕ್ ಸಮೀಪದಲ್ಲಿ ನಡೆದಿದೆ. ಪೊಲೀಸರ ಸಕಾಲಿಕ ಕರ್ತವ್ಯ ನಿಷ್ಠೆ, ಸಮಯಪ್ರಜ್ಞೆಯಿಂದಾಗಿ ಈ ಮೂರು ಜೀವ ರಕ್ಷಣೆಯಾಗಿದೆ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸೂರಿಕುಮೇರ್ ಪೆಟ್ರೋಲ್ ಬಂಕ್ ಬಳಿಯ ಹೋಟೆಲ್ ಮುಂಭಾಗದಲ್ಲಿ ಕಾರೊಂದು ನಿಯಂ ತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಉರುಳಿತು. ಕಾರಿನೊಳಗೆ ಮಗು, ಮಹಿಳೆ ಹಾಗೂ ಚಾಲಕ ಸಿಲುಕಿಕೊಂಡಿದ್ದರು. ಕ್ಷಣಾರ್ಧದಲ್ಲಿ ನೆರವು ಸಿಗದಿದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇತ್ತು.
ಅದೇ ಸಮಯದಲ್ಲಿ ಸಮೀಪದಲ್ಲೇ ಮತ್ತೊಂದು ಪ್ರಮುಖ ಪ್ರಕರಣದ ಸಂಬಂಧ ಕರ್ತವ್ಯ ನಿರ್ವಹಿಸುತ್ತಿದ್ದ ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ರಾಮಕೃಷ್ಣ ಹಾಗೂ ಸಿಬ್ಬಂದಿ ಕರಣಾಕರರಿಗೆ ಅಪಘಾತದ ಭಾರೀ ಶಬ್ದ ಕೇಳಿಸಿದೆ. ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಅವರು,ಚರಂಡಿಕಾರಿನೊಳಗೆ ಸಿಲುಕಿದ್ದ ಮಗು, ಮಹಿಳೆ ಹಾಗೂ ಚಾಲಕನನ್ನು ಸುರಕ್ಷಿತವಾಗಿ ಹೊರತೆಗೆದು ರಕ್ಷಿಸಿದ್ದಾರೆ.
ಅವರು ಅಳುತ್ತಿದ್ದ ಪುಟ್ಟ ಮಗುವನ್ನು ತಮ್ಮ ಕೈಯಲ್ಲಿ ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ಕರೆತಂದ ದೃಶ್ಯ ಸಮೀಪದ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಅದನ್ನು ಕಂಡ ಸಾರ್ವಜನಿಕರು ಪೊಲೀಸ್ ಅಧಿಕಾರಿಯ ಮಾನವೀಯತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರೂ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
