ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯ ಸವಾಲುಗಳನ್ನು ಎದುರಿಸುತ್ತಿರುವ ಇಂದಿನ ದಿನಗಳಲ್ಲಿ, ಶುದ್ಧ ಇಂಧನದತ್ತ ಕ್ಲೀನ್ ಎನರ್ಜಿ ಪರಿವರ್ತನೆ ಹೊಂದುವುದು ಜಗತ್ತಿನ ಬಹುದೊಡ್ಡ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಭಾರತವು ಮತ್ತೊಮ್ಮೆ ತನ್ನ ತಾಂತ್ರಿಕ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಿದ್ದು, ಪರಮಾಣು ಪ್ರಕ್ರಿಯೆಯ ಶಾಖವನ್ನು ನ್ಯೂಕ್ಲಿಯರ್ ಪ್ರೋಸೆಸ್ ಹಿಟ್ ಬಳಸಿಕೊಂಡು ಹೈಡ್ರೋಜನ್ ಜಲಜನಕ ಉತ್ಪಾದಿಸುವ ವಿಶ್ವದ ಮೊಟ್ಟಮೊದಲ ಘಟಕವನ್ನು ಲೋಕಾರ್ಪಣೆ ಮಾಡಿದೆ.ಈ
ಈ ಸಾಧನೆಯು ಭಾರತದ ‘ಆತ್ಮನಿರ್ಭರ್’ ಪರಿಕಲ್ಪನೆಗೆ ಹಿಡಿದ ಕನ್ನಡಿಯಾಗಿದೆ.ಕಲ್ಪಾಕ್ಕಂನಲ್ಲಿ ಹೊಸ ಶಕೆಯ ಆರಂಭತಮಿಳುನಾಡಿನ ಕಲ್ಪಾಕ್ಕಂನಲ್ಲಿರುವ ಇಂದಿರಾ ಗಾಂಧಿ ಪರಮಾಣು ಸಂಶೋಧನಾ ಕೇಂದ್ರದಲ್ಲಿ IGCAR ಈ ಐತಿಹಾಸಿಕ ಘಟಕವನ್ನು ಪರಮಾಣು ಶಕ್ತಿ ಇಲಾಖೆಯ DAE ಕಾರ್ಯದರ್ಶಿ ಅಜಿತ್ ಕುಮಾರ್ ಮೊಹಂತಿ ಅವರು ಉದ್ಘಾಟಿಸಿದ್ದಾರೆ.

ಫಾಸ್ಟ್ ಬ್ರೀಡರ್ ಟೆಸ್ಟ್ ರಿಯಾಕ್ಟರ್ FBTR ನಿಂದ ಉತ್ಪತ್ತಿಯಾಗುವ ಶಾಖವನ್ನು ಬಳಸಿಕೊಂಡು ಜಲಜನಕವನ್ನು ಉತ್ಪಾದಿಸುವ ಜಗತ್ತಿನ ಮೊದಲ ಪ್ರಾಯೋಗಿಕ ಘಟಕ ಇದಾಗಿದೆ. ಇದು ಕೇವಲ ತಾಂತ್ರಿಕ ಸಾಧನೆಯಲ್ಲ, ಬದಲಾಗಿ ಭಾರತದ ಸುಸ್ಥಿರ ಇಂಧನ ಭದ್ರತೆಯ ಭವಿಷ್ಯಕ್ಕೆ ಬರೆಯಲಾದ ಮುನ್ನುಡಿಯಾಗಿದೆ.ಸ್ವದೇಶಿ ತಂತ್ರಜ್ಞಾನದ ಹೆಮ್ಮೆ: Cu-Cl ಸೈಕಲ್ ಈ ಘಟಕದ ಅತ್ಯಂತ ಪ್ರಮುಖ ಅಂಶವೆಂದರೆ, ಭಾಭಾ ಅಣು ಸಂಶೋಧನಾ ಕೇಂದ್ರ BARC ಅಭಿವೃದ್ಧಿಪಡಿಸಿರುವ ಸಂಪೂರ್ಣ ಸ್ವದೇಶಿ ‘ತಾಮ್ರ-ಕ್ಲೋರಿನ್ Cu-Cl ಥರ್ಮೋಕೆಮಿಕಲ್ ಸೈಕಲ್’ ತಂತ್ರಜ್ಞಾನದ ಬಳಕೆ.ಸಾಮಾನ್ಯವಾಗಿ ಹೈಡ್ರೋಜನ್ ಉತ್ಪಾದಿಸಲು ವಿದ್ಯುತ್ ವಿಭಜನೆ ಎಲೆಕ್ಟ್ರೋಲಿಸಿಸ್ ಅಥವಾ ಪಳೆಯುಳಿಕೆ ಇಂಧನಗಳನ್ನು ಬಳಸಲಾಗುತ್ತದೆ. ಆದರೆ ಈ ಹೊಸ ತಂತ್ರಜ್ಞಾನದಲ್ಲಿ, ನೀರನ್ನು ವಿಭಜಿಸಿ ಜಲಜನಕವನ್ನು ಪಡೆಯಲು ಪರಮಾಣು ರಿಯಾಕ್ಟರ್‌ನಿಂದ ಸಿಗುವ ಉಷ್ಣಾಂಶವನ್ನು ಶಾಖವನ್ನು ನೇರವಾಗಿ ಬಳಸಿಕೊಳ್ಳಲಾಗುತ್ತದೆ.

ಸಾಂಪ್ರದಾಯಿಕ ವಿಧಾನಗಳಂತೆ ಇಲ್ಲಿ ಯಾವುದೇ ರೀತಿಯ ಇಂಗಾಲದ ಹೊರಸೂಸುವಿಕೆ ಕಾರ್ಬಾನ್ ಎಮಿಷನ್ ಇರುವುದಿಲ್ಲ. ಅಂದರೆ, ಇದು ನೂರಕ್ಕೆ ನೂರು ಶುದ್ಧ ಹಾಗೂ ಪರಿಸರ ಸ್ನೇಹಿ ಇಂಧನವಾಗಿದೆ.ಈ ಯೋಜನೆಯ ಪ್ರಮುಖ ಅಂಶಶೂನ್ಯ ಇಂಗಾಲದ ಹೆಜ್ಜೆಗುರುತು ಜಲಜನಕ ಉತ್ಪಾದನೆಯ ಪ್ರಕ್ರಿಯೆಯಲ್ಲಿ ಕಾರ್ಬನ್ ಡೈಆಕ್ಸೈಡ್ ಬಿಡುಗಡೆಯಾಗುವುದಿಲ್ಲ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್‌ಗೆ ಬೆಂಬಲ ಭಾರತವನ್ನು ಹಸಿರು ಹೈಡ್ರೋಜನ್ ಉತ್ಪಾದನಾ ಹಬ್ ಆಗಿ ಮಾಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಇದು ದೊಡ್ಡ ಉತ್ತೇಜನ ನೀಡಲಿದೆ.ಶಕ್ತಿ ಪರಿವರ್ತನೆ ಪರಮಾಣು ಶಕ್ತಿ ಮತ್ತು ಮುಂದಿನ ಪೀಳಿಗೆಯ ಜಲಜನಕ ತಂತ್ರಜ್ಞಾನಗಳ ಅದ್ಭುತ ಸಂಯೋಜನೆಯನ್ನು ಈ ಘಟಕ ಪ್ರದರ್ಶಿಸುತ್ತದೆ.
ಭವಿಷ್ಯದ ಇಂಧನ ಭದ್ರತೆಗೆ ದಾರಿದೀಪಪಳೆಯುಳಿಕೆ ಇಂಧನಗಳ ಫಾಸಿಲ್ ಫ್ಯೂಯೆಲ್ಸ್ ಮೇಲಿನ ಅವಲಂಬನೆಯನ್ನು ತಗ್ಗಿಸಿ, ಶೂನ್ಯ ಇಂಗಾಲದ ಗುರಿಯತ್ತ Net-Zero Emissions ಸಾಗುತ್ತಿರುವ ಭಾರತಕ್ಕೆ ಈ ತಂತ್ರಜ್ಞಾನ ಸಂಜೀವಿನಿಯಾಗಿದೆ. ಭವಿಷ್ಯದಲ್ಲಿ ಸಾರಿಗೆ, ಕೈಗಾರಿಕೆ ಮತ್ತು ವಿದ್ಯುತ್ ವಲಯಗಳಲ್ಲಿ ಹಸಿರು ಜಲಜನಕವು ಕಲ್ಲಿದ್ದಲು ಮತ್ತು ಪೆಟ್ರೋಲಿಯಂಗೆ ಪರ್ಯಾಯವಾಗಲಿದೆ. ಇಂತಹ ಪ್ರಮುಖ ಇಂಧನವನ್ನು ಪರಮಾಣು ಶಕ್ತಿಯ ಮೂಲಕ ಅಗ್ಗವಾಗಿ ಮತ್ತು ಶುದ್ಧವಾಗಿ ಉತ್ಪಾದಿಸುವ ಮಾರ್ಗವನ್ನು ಭಾರತ ಈಗ ಜಗತ್ತಿಗೆ ತೋರಿಸಿಕೊಟ್ಟಿದೆ.
ಒಟ್ಟಾರೆಯಾಗಿ, ಪರಮಾಣು ತಂತ್ರಜ್ಞಾನವನ್ನು ಕೇವಲ ವಿದ್ಯುತ್ ಉತ್ಪಾದನೆಗೆ ಮಾತ್ರ ಸೀಮಿತಗೊಳಿಸದೆ, ಹಸಿರು ಇಂಧನ ಉತ್ಪಾದನೆಗೂ ಬಳಸಬಹುದು ಎಂಬುದನ್ನು ಭಾರತ ಸಾಬೀತುಪಡಿಸಿದೆ. ವಿಶ್ವಮಟ್ಟದಲ್ಲಿ ಭಾರತವನ್ನು ಇಂಧನ ಪರಿವರ್ತನೆಯ ನಾಯಕನನ್ನಾಗಿ ರೂಪಿಸುವಲ್ಲಿ ಈ ಯೋಜನೆ ಒಂದು ಮೈಲಿಗಲ್ಲಾಗಿ ಉಳಿಯಲಿದೆ. ಸ್ವಾವಲಂಬನೆ ಮತ್ತು ಸುಸ್ಥಿರತೆಯತ್ತ ಹೆಜ್ಜೆ ಹಾಕುತ್ತಿರುವ ನವಭಾರತದ ಪಯಣದಲ್ಲಿ ಕಲ್ಪಾಕ್ಕಂನ ಈ ಘಟಕವು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಸಾಧನೆಯಾಗಿದೆ
✍️ ಶೋಧನ್ ಕುಂದಾಪುರ
