ವರದಿ / ಚಿತ್ರ : ರೋನ್ಸ್ ಬಂಟ್ವಾಳ
ಮುಂಬಯಿ, ಜೂ.೧೧: ಮಂಗಳೂರು ಅಲ್ಲಿನ ಮೂಡುಶೆಡ್ಡೆಯ ಶೆಡ್ಡೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ನೂತನ ದೇವಸ್ಥಾನ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮವು ಇದೇ ಬರುವ ಜುಲೈ.೦೨ರ ಗುರುವಾರ ಭಕ್ತಿಭಾವದಿಂದ ನೆರವೇರಲಿದ್ದು, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಆ ಪ್ರಯುಕ್ತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವ ಮಹಾರಾಷ್ಟ್ರ ರಾಜ್ಯದ ಕಲ್ಯಾಣ್ ಲೋಕಸಭಾ ಸಂಸದ ಡಾ| ಶ್ರೀಕಾಂತ್ ಏಕನಾಥ ಶಿಂಧೆ ಇವರಿಗೆ ಆಮಂತ್ರಣಪತ್ರವನ್ನಿತ್ತು ಆಹ್ವಾನಿಸಲಾಯಿತು.

ಮೂಡುಶೆಡ್ಡೆ ಅಲ್ಲಿನ ಹೊಸಲಕ್ಕೆ ಶ್ರೀ ದುರ್ಗಾ ಪರಮೇಶ್ವರಿ ಕೃಪಾ ನಿವಾಸಿ, ಶೆಡ್ಡೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮೂಡುಶೆಡ್ಡೆ ಇದರ ಮುಂಬಯಿ ಸಮಿತಿ ಅಧ್ಯಕ್ಷ ಮೂಡುಶೆಡ್ಡೆ ವಿಶ್ವನಾಥ ಎಸ್.ಶೆಟ್ಟಿ ಮುಂದಾಳುತ್ವದಲ್ಲಿ ಇಂದಿಲ್ಲಿ ಗುರುವಾರ ಮಧ್ಯಾಹ್ನ ಮಲಬಾರ್ ಹಿಲ್ ಅಲ್ಲಿನ ಮೌಂಟ್ ಪ್ಲೆಸೆಂಟ್ ರೋಡ್‌ನಲ್ಲಿನ ಮಹಾರಾಷ್ಟ್ರ ಸರ್ಕಾರದ ಉಪಮುಖ್ಯಮಂತ್ರಿ ಅವರ ಅಧಿಕೃತ ಸರ್ಕಾರಿ ನಿವಾಸ ನಂದನವನ ಇಲ್ಲ್ಲಿ ಡಾ| ಶ್ರೀಕಾಂತ್ ಶಿಂಧೆ ಅವರನ್ನು ಭೇಟಿಗೈದು ವೈಯಕ್ತಿಕವಾಗಿ ಆಮಂತ್ರಣ ನೀಡಲಾಯಿತು. ಈ ಸಂದರ್ಭದಲ್ಲಿ ಅನುಪಮ ಶೆಟ್ಟಿ, ದಿವಾಕರ್ ರೈ, ಶರ್ಮಿಳಾ ಡಿ.ರೈ, ಸುಭಾಷ್ ಶೆಟ್ಟಿ ಇನ್ನಂಜೆ ಉಪಸ್ಥಿತರಿದ್ದರು.

ಥಾಣೆ ಭಿವಂಡಿಯಲ್ಲಿನ ಹೆಸರಾಂತ ಹೊಟೇಲು ಉದ್ಯಮಿ, ಬಂಟರ ಸಂಘ ಮುಂಬಯಿ ಇದರ ಭಿವಂಡಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಧ್ಯಕ್ಷ, ಥಾಣೆ ಕಲ್ಯಾಣ್ ಇಲ್ಲಿನ ಶಹಾಡ್ ಪೂರ್ವದ ಶ್ರೀ ನಿತ್ಯಾನಂದ ಮಿತ್ರ ಭಜನ ಮಂಡಳಿ ಸಂಚಾಲಕತದ ಶ್ರೀ ಮೂಕಾಂಬಿಕ ದೇವಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ (ಟ್ರಸ್ಟಿ) ಮೂಡುಶೆಡ್ಡೆ ವಿಶ್ವನಾಥ ಶೆಟ್ಟಿ ಅವರು ನೂತನ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಬೃಹನ್ಮುಂಬಯಿಯಲ್ಲಿನ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಂತೆ ದೇವಸ್ಥಾನದ ಆಡಳಿತ ಮಂಡಳಿ ಪರವಾಗಿ ಈ ಮೂಲಕ ಮನವಿ ಮಾಡಿದ್ದಾರೆ.
