ವರದಿ /ಚಿತ್ರ: ಇ ಮೀಡಿಯಾ
ಉಡುಪಿ: ವಿವೇಕಾನಂದ ಯೋಗ ವಿಜ್ಞಾನ ಕೇಂದ್ರ ಪುತ್ತೂರು ವತಿಯಿಂದ ವಿಶ್ವ ಯೋಗ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.”ಆರೋಗ್ಯಕರ ವಯೋವೃದ್ಧಿಗಾಗಿ ಯೋಗ” ಎಂಬ ಘೋಷ ವಾಕ್ಯಕ್ಕೆ ಅನುಗುಣವಾಗಿ ಯೋಗ ಗುರುಗಳಾದ ಪಿ.ವಿ. ಭಟ್ ಇವರ ಮಾರ್ಗದರ್ಶನದಲ್ಲಿ ಈ ಬಾರಿಯ ಯೋಗ ಶಿಷ್ಟಾಚಾರದಂತೆ ಯೋಗಾಸನ ಮತ್ತು ಪ್ರಾಣಾಯಾಮ ನಡೆಯಿತು.ಗುರುಗಳಾದ ಪಿ.ವಿ. ಭಟ್ ಮತ್ತುಸತೀಶ್ ಕುಂದರ್ ರವರನ್ನು ಅಭಿನಂದಿಸಲಾಯಿತು.
ಅಭಿನಂದನೆ ಸ್ವೀಕರಿಸಿದ ಪಿ.ವಿ. ಭಟ್ ರವರು, ಮನುಷ್ಯನಿಗೆ ಪ್ರಕೃತಿಯ ಉಪಕಾರದ ಬಗ್ಗೆ ಹಾಗೂ ನಿರಂತರ ಯೋಗಭ್ಯಾಸದಿಂದ ಆರೋಗ್ಯ ಹೇಗೆ ವೃದ್ಧಿಸುತ್ತದೆ ಎಂಬುದರ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.ಗುರುಗಳಾದ ಸತೀಶ್ ಕುಂದರ್ ರವರು, ಎಲ್ಲಾ ಭಾರತೀಯರು ಯೋಗದ ಮೂಲಕ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿ ಬಲಿಷ್ಠ ರಾಷ್ಟ್ರದ ಏಳಿಗೆಗೆ ಭದ್ರ ಬುನಾದಿಹಾಕಬೇಕೆಂದು ಅಭಿಪ್ರಾಯ ಪಟ್ಟರು.ಯೋಗ ಶಿಕ್ಷಕಿ ಸುನೀತಾ ಚೈತನ್ಯ, ಆರೋಗ್ಯ ಭಾರತಿ ಸಂಸ್ಥೆಯ ಉಡುಪಿ ಜಿಲ್ಲಾ ಕಾರ್ಯದರ್ಶಿ ಪ್ರಭಾಕರ್ ಭಟ್ ಉಪಸ್ಥಿತರಿದ್ದರು.
ಹಿರಿಯ ಯೋಗಬಂಧು ಲಕ್ಷ್ಮೀ ಕುಮಾರಿ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು. ಯೋಗ ಬಂದು ಸುನೀತಾ ಶೆಟ್ಟಿ ವಂದನಾರ್ಪಣೆಗೈದರು.ಸಭಾ ಕಾರ್ಯಕ್ರಮದ ಕೊನೆಯಲ್ಲಿ ಯೋಗ ಬಂಧುಗಳು ಮನಮೋಹಕ ಯೋಗ ನೃತ್ಯ ಪ್ರಸ್ತುತ ಪಡಿಸಿದರು.
