ವರದಿ /ಚಿತ್ರ : ರೋನ್ಸ್ ಬಂಟ್ವಾಳ್
ಮುಂಬಯಿ, ಆ.15: ಕೊಂಕಣಿ ಸಂಗೀತ ಲೋಕದ ಹಿರಿಯ ಕಲಾವಿದ, ಯೇ ಯೇ ಕತ್ರಿನಾ ಸುಪ್ರಸಿದ್ಧ ‘ಸಂಗೀತ ಸಾಮ್ರಾಟ್’ ಹಾಗೂ ‘ಕಲಾ ರತ್ನ’ ಬಿರುದಾಂಕಿತ ಖ್ಯಾತ ಗಾಯಕ ಹೆನ್ರಿ ಡಿ’ಸೋಜಾ ಅವರು ಇಂದಿಲ್ಲಿ ಶನಿವಾರ ಮುಂಜಾನೆ ತನ್ನ ಗೋರೆಗಾಂವ್ ಪಶ್ಚಿಮದ ಪಿರಮಾಲ್ ನಗರದಲ್ಲಿನ ಪರೇಖ್ ಸೆಲ್ಲೆಸ್ತೆ ಕಟ್ಟಡದಲ್ಲಿನ ಸ್ವ್ವನಿವಾಸದಲ್ಲಿ ನಿಧನರಾದರು.
ಹೆನ್ರಿ ಡಿ’ಸೋಜಾ ಅವರು ಮೂಲತಃ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು ಬಸ್ರಿಕಟ್ಟೆ ಅಲ್ಲಿಯವರು. ಇವರು ಮಂಗಳೂರು ಅಲ್ಲಿನ ಪಡುವ ಹೈಸ್ಕೂಲ್ನಲ್ಲಿ ಪ್ರೌಢಶಿಕ್ಷಣವನ್ನು, ಪುತ್ತೂರು ಸಂತ ಫಿಲೋಮಿನಾ ಕಾಲೇಜ್ನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಹಾಗೂ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ವ್ಯಾಸಂಗವನ್ನು ಪೂರ್ಣಗೊಳಿಸಿದರು. ತದನಂತರ ಉತ್ತಮ ಅವಕಾಶಗಳ ಹುಡುಕಾಟದಲ್ಲಿ ಮುಂಬೈಗೆ ತೆರಳಿದ ಇವರು, ಮುಂಬಯಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನು (ಎಲ್ಎಲ್ಬಿ) ಪಡೆದುಕೊಂಡರು.
ಇವರು ತಮ್ಮ ಕಾಲದ ಪ್ರಸಿದ್ಧ ಪಾಶ್ಚಿಮಾತ್ಯ ಗಾಯಕರಿಗೆ ಪ್ರಭಾವಿತರಾಗಿ ಪಾಶ್ಚಿಮಾತ್ಯ ಸಂಗೀತದತ್ತ ಆಕರ್ಷಿತರಾದರು. ಇವರು ದೇಶಾದ್ಯಂತ ಹಾಗೂ ಗಲ್ಫ್ ದೇಶಗಳು, ಶ್ರೀಲಂಕಾ ಮತ್ತು ಅಮೆರಿಕ ಖಂಡಗಳಲ್ಲಿ ಹಲವು ಕೊಂಕಣಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರ ಜನಪ್ರಿಯ ಹಳೆಯ ಕೊಂಕಣಿ ಹಾಡುಗಳು ದಕ್ಷಿಣ ಕನ್ನಡದ ಜನರಲ್ಲಿ ಇಂದಿಗೂ ಹಳೆಯ ಸವಿನೆನಪುಗಳನ್ನು ಮರುಕಳಿಸುವಂತೆ ಮಾಡುತ್ತವೆ.
ಮಂಗಳೂರುನ ಸಂದೇಶ ಫೌಂಡೇಶನ್ ಸಂಸ್ಥೆಯು ಗೋರೆಗಾಂವ್ ನಿವಾಸಿಯಾಗಿರುವ ‘ಸಂಗೀತ ಸಾಮ್ರಾಟ್’ ಹಾಗೂ ‘ಕಲಾ ರತ್ನ’ ಬಿರುದಾಂಕಿತ ಖ್ಯಾತ ಗಾಯಕ ಹೆನ್ರಿ ಡಿ’ಸೋಜಾ ಅವರಿಗೆ ‘ಸಂದೇಶ ಪ್ರಶಸ್ತಿ – ೨೦೧೫’ ನೀಡಿ ಗೌರವಿಸಿದ್ದು, ಕೊಂಕಣಿ ಸಂಗೀತ ಕ್ಷೇತ್ರಕ್ಕೆ ಐದು ದಶಕಗಳಿಗೂ ಹೆಚ್ಚು ಕಾಲ ಕೊಡುಗೆ ನೀಡಿರುವ ಇವರು, ನೂತನ ಪೀಳಿಗೆಯ ಕೊಂಕಣಿ ಜನರ ಮನಸ್ಸಿನಲ್ಲಿ ಅಮರಸ್ಥಾನವನ್ನು ಪಡೆದಿದ್ದು ಅನೇಕ ವರ್ಷಗಳಿಂದ ಮುಂಬಯಿನ ಗೋರೆಗಾಂವ್ನಲ್ಲಿ ನೆಲೆಸಿದ್ದರು. ಮೃತರು ಸುಪುತ್ರಿ ಮತ್ತು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
