ವರದಿ/ ಚಿತ್ರ: ರೋನ್ಸ್ ಬಂಟ್ವಾಳ್
ಮುಂಬಯಿ, ಆ.೧೫: ನಾವು ಇಂದು ರಾಷ್ಟ್ರದ ೮೦ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಹಿರಿಯರು ಮಾಡಿದ ಹೋರಾಟದಿಂದ ಬಹಳ ಹೆಮ್ಮೆಯಿಂದ ಆಚರಿಸುತ್ತೇವೆ. ನಮ್ಮ ದೇಶವು ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಕೃಷಿ, ಕ್ರೀಡೆ, ಅಂತರೀಕ್ಷಾ ಕ್ಷೇತ್ರ, ಡಿಜಿಟಲ್‌ನಲ್ಲೂ ಮುಂದುವರಿದು ವಿಶ್ವದ ಗಮನ ಸೆಳೆಯುವಲ್ಲಿ ಯಶಕಂಡಿದ್ದೇವೆ. ದೇಶದ ಕಾನೂನು ಪಾಲಿಸುವುದಲ್ಲದೆ ಸ್ವಚ್ಛತೆಯನ್ನೂ ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ದೇಶದ ಪ್ರತಿಯೊಬ್ಬ ಯುವಜನತೆಯೂ ರಾಷ್ಟ್ರದ ಏಳಿಗೆಗೆ ಶ್ರಮಿಸುವ ಸಂಕಲ್ಪ ಮಾಡಬೇಕಿದೆ.
ನಮ್ಮ ಪೂರ್ವಜರು ತಂದಿತ್ತ ಈ ರಕ್ತತರ್ಪಿತ ಸ್ವಾತಂತ್ರ್ಯವನ್ನು ಗೌರವಿಸಿ, ಬಲಿಷ್ಠ ಹಾಗೂ ಸ್ವಾವಲಂಬಿ ಭಾರತ ನಿರ್ಮಾಣದಲ್ಲಿ ಭಾವಿ ಪೀಳಿಗೆಯ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ. ಸತ್ಯ, ಶಾಂತಿ ಮತ್ತು ಭಾವೈಕ್ಯತೆಯ ಮಾರ್ಗದಲ್ಲಿ ಸಾಗಿ, ತಂತ್ರಜ್ಞಾನ ಹಾಗೂ ಜ್ಞಾನದ ಕ್ಷೇತ್ರದಲ್ಲಿ ದೇಶವನ್ನು ವಿಶ್ವಗುರುವಿನ ಸ್ಥಾನಕ್ಕೇರಿಸುವುದು ನಮ್ಮೆಲ್ಲರ ಆಶಯವಾಗಲಿ ಎಂದು ಕನ್ನಡ ಸಂಘ ಸಾಂತಾಕ್ರೂಜ್ ಸುಜಾತ ಆರ್.ಶೆಟ್ಟಿ ತಿಳಿಸಿದರು.ಸಂಘದ ಪದಾಧಿಕಾರಿಗಳು, ಸದಸ್ಯರು, ನೆರೆಹೊರೆಯ ನಾಗರಿಕರು ಮತ್ತು ಮಕ್ಕಳ ಉಪಸ್ಥಿತಿಯಲ್ಲಿ ಸುಜಾತ ಆರ್.ಶೆಟ್ಟಿ ರಾಷ್ಟ್ರಧ್ವಜವನ್ನು ಆರಿಸಿದರು.
ಉಪಸ್ಥಿತರು ರಾಷ್ಟ್ರಧ್ವಜಕ್ಕೆ ಗೌರವ ವಂದನೆ ಸಲ್ಲಿಸಿ ರಾಷ್ಟ್ರ ಗೀತೆಯೊಂದಿಗೆ ರಾಷ್ಟ್ರಪ್ರೇಮ ಮೆರೆದರು. ಬಳಿಕ ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಸುಜಾತ ಶೆಟ್ಟಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಗದ ಉಪಾಧ್ಯಕ್ಷ ಭಜಂಗ ಆರ್.ಶೆಟ್ಟಿ, ಗೌರವ ಕೋಶಾಧಿಕಾರಿ ಸುಧಾಕರ್ ಉಚ್ಚಿಲ್, ಗೌರವ ಜೊತೆ ಕೋಶಾಧಿಕಾರಿ ಬನ್ನಂಜೆ ರವೀಂದ್ರ ಅವಿನ್, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷೆ ವನಿತಾ ವೈ.ನೋಂಡಾ, ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ವಿಜಯಕುಮಾರ್ ಕೆ.ಕೋಟ್ಯಾನ್, ಕಾರ್ಯದರ್ಶಿ ಶಕಿಲಾ ಪಿ.ಶೆಟ್ಟಿ, ಶಾಲಿನಿ ಜಿ.ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಸುಮಿತ್ರಾ ಜಿ.ದೇವಾಡಿಗ, ಲಿಂಗಪ್ಪ ಬಿ.ಅಮೀನ್, ಗಿರೀಶ್ ಶೆಟ್ಟಿ, ರೇಖಾ ಆರ್.ಶೆಟ್ಟೀ, ಸೇರಿದಂತೆ ಪರಿಸರದ ಜನರು, ಮಕ್ಕಳು ಮತ್ತನೇಕರು ಹಾಜರಿದ್ದರು.
ಧ್ವಜ ವಂದನೆ, ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಆದಿ ಗೊಂಡಿತು. ಗೌರವ ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ.ಕೋಟ್ಯಾನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವನಿತಾ ವೈ.ನೋಂಡಾ ವಂದಿಸಿದರು.
