ಲೇಖನ : ಸತೀಶ ಶೆಟ್ಟಿ ಚೇರ್ಕಾಡಿ ,ದೊಡ್ಡಮನೆ

ವಿಶೇಷ ಅಂಕಣ : ಯಕ್ಷಗಾನದ ರಂಗಮಂಟಪದಲ್ಲಿ ರಾವಣನಾಗಿ, ಕಂಸನಾಗಿ, ಮಹಿಷಾಸುರನಾಗಿ ಅಬ್ಬರಿಸಿ ಹೆಜ್ಜೆಹಾಕುವಾಗ ಆ ಮುಖವರ್ಣನೆಯ ಹಿಂದೆ ನಡುಗುವ ಎದೆ ಹಾಗೂ ಮೌನವಾಗಿ ಅಳುವ ತಂದೆಯೊಬ್ಬನ ಕರುಳುಬಳ್ಳಿಯ ಕಥೆಯಿದೆ. ಕರಾವಳಿಯ ಅಪ್ರತಿಮ ಯಕ್ಷಗಾನ ಕಲಾವಿದ ಕೆ. ಎಚ್. ದಾಸಪ್ಪ ರೈ ಅವರ ಬದುಕು ಕೇವಲ ರಂಗ ಸಾಧನೆಯಷ್ಟೇ ಅಲ್ಲ, ಬದಲಿಗೆ ವಿಧಿಯ ಕ್ರೂರ ಆಟದ ನಡುವೆಯೂ ಕಲೆಗಾಗಿ ತಮ್ಮ ಜೀವನವನ್ನೇ ಮುಡಿಪಟ್ಟುಕೊಂಡ ಒಂದು ಕರುಣಾಜನಕ ಹಾಗೂ ಪ್ರೇರಣಾದಾಯಕ ಕಾವ್ಯವಾಗಿದೆ.
ಬಡತನದ ತೊಟ್ಟಿಲಲ್ಲಿ ಅರಳಿದ ಕಲಾ ತಪಸ್ಸು :
೧೯೫೦ರ ಮೇ ೧೦ರಂದು ಬೈಂಕಿ ರೈ ಮತ್ತು ಕುಂಞಕ್ಕೆ ದಂಪತಿಗಳ ಮಗನಾಗಿ ಜನಿಸಿದ ಕೆ. ಎಚ್. ದಾಸಪ್ಪ ರೈ ಅವರು, ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿದ ತಕ್ಷಣವೇ ಕೇವಲ ೫ನೇ ತರಗತಿಯ ವಿದ್ಯಾಭ್ಯಾಸದೊಂದಿಗೆ ಯಕ್ಷಗಾನದ ಕಡೆಗೆ ಒಲವು ತೋರಿದರು. ಯಕ್ಷಗಾನ ಗುರುಗಳಾದ ದಿವಂಗತ ಕೆ. ಎನ್. ಬಾಬು ರೈಯವರ ಬಳಿ ಮೂರು ವರ್ಷಗಳ ಕಾಲ ಕಠಿಣ ಶಿಷ್ಯೊಪಾಸನೆಗೈದು, ಹೆಜ್ಜೆಗಾರಿಕೆ, ಮಾತುಗಾರಿಕೆ, ವೇಷಭೂಷಣ ಮತ್ತು ಮುಖವರ್ಣನೆಯನ್ನು ಮೈಗೂಡಿಸಿಕೊಂಡು ೧೯೬೫ರಲ್ಲಿ ಕರ್ನಾಟಕ ಯಕ್ಷಗಾನ ನಾಟಕ ಸಭಾ ಮಂಗಳೂರು ಮೇಳದಲ್ಲಿ ವೇಷಧಾರಿಯಾಗಿ ರಂಗಪ್ರವೇಶ ಮಾಡಿದರು.
ಕಲಾ ಸಾಧನೆ ಹಾಗೂ ಆರ್ಥಿಕ ಮುಗ್ಗಟ್ಟಿನ ಕಹಿ ಅನುಭವಗಳು :
ಕರ್ನಾಟಕ ಮೇಳದಲ್ಲಿ ೧೮ ವರ್ಷ, ಕದ್ರಿ ಶ್ರೀ ಮಂಜುನಾಥೇಶ್ವರ ಕೃಪಾಶ್ರೀ ಯಕ್ಷಗಾನ ಮಂಡಳಿಯಲ್ಲಿ ೮ ವರ್ಷ, ತಮ್ಮದೇ ಸ್ವಂತ ಮೇಳವಾದ ಕಣಿಪುರ ಶ್ರೀ ಗೋಪಾಲಕೃಷ್ಣ ಪ್ರಾಸಾದಿತ ಯಕ್ಷಗಾನ ಮಂಡಳಿಯಲ್ಲಿ ೬ ವರ್ಷ ಹಾಗೂ ಶ್ರೀ ಮಂಗಳಾದೇವಿ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ ೧೦ ವರ್ಷ ಸೇವೆ ಸಲ್ಲಿಸಿ, ಒಟ್ಟು ೪೨ ವರ್ಷಗಳ ಕಾಲ ಸಕ್ರಿಯ ವೃತ್ತಿಪರ ಕಲಾ ಸೇವೆಯನ್ನು ಮಾಡಿದ್ದಾರೆ.
ಪೌರಾಣಿಕ ಪ್ರಸಂಗಗಳಲ್ಲಿ ರಾವಣ, ಕಂಸ, ಮಹಿಷಾಸುರ, ಕೌರವ, ಇಂದ್ರಜಿತ್, ಭೀಮ ಮುಂತಾದ ಖಳನಾಯಕ ಪಾತ್ರಗಳನ್ನು ಜೀವಂತವಾಗಿಸಿದ್ದಾರೆ. ತೆಂಕುತಿಟ್ಟಿನ ವಿಶಿಷ್ಟ ಕಲಾವಿದರಾಗಿ ಹೊರಹೊಮ್ಮುವುದರೊಂದಿಗೆ, ತುಳು ಮಾಧ್ಯಮದ ಕೋಟಿ-ಚೆನ್ನಯ, ಕಾಂತಾಬಾರೆ ಬೂದಾಬಾರೆ, ದೇವುಪೂಂಜ, ಕೊಡಬ್ಬು ಮುಂತಾದ ಸೌಮ್ಯ ಹಾಗೂ ಪ್ರಧಾನ ಪಾತ್ರಗಳನ್ನೂ ಅತ್ಯುತ್ತಮವಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

ಆದರೆ, ಸ್ವಂತ ಮೇಳವಾಗಿ ಕುಂಬ್ಳೆ ಕಣಿಪುರ ಮೇಳ ಮಾಡಿದ ಆರಂಭಿಕ ದಿನಗಳಲ್ಲಿ, ಇಡೀ ಜಿಲ್ಲೆಯನ್ನೇ ಭಯಗ್ರಸ್ಥರನ್ನಾಗಿ ಮಾಡಿದ್ದ ಕುಖ್ಯಾತ ದರೋಡೆಕೋರ ‘ರಿಪ್ಪರ್ ಚಂದ್ರ’ನ ಹಾವಳಿಯಿಂದಾಗಿ ಡೇರೆ ಮೇಳಗಳು ಸೊರಗಿದವು. ಇದರ ಪರಿಣಾಮವಾಗಿ ಮೇಳಕ್ಕೆ ತೀವ್ರ ಆರ್ಥಿಕ ಮುಗ್ಗಟ್ಟು ಎದುರಾಗಿ ಕೆಲವೇ ವರ್ಷಗಳಲ್ಲಿ ಮೇಳವು ಸ್ಥಗಿತಗೊಂಡಿತು.
ಮೇಳವನ್ನು ಮುನ್ನಡೆಸಲು ಬ್ಯಾಂಕಿನಿಂದ ಮಾಡಿದ್ದ ಸಾಲ ತೀರಿಸಲಾಗದೆ ಹಿರಿಯರಿಂದ ಬಂದ ಆಸ್ತಿಯನ್ನು ಮಾರಾಟ ಮಾಡಬೇಕಾಯಿತು. ಆ ಸಂದರ್ಭದಲ್ಲಿ ಮಡದಿ ಚಿತ್ರಾವತಿ ಹಾಗೂ ಮಕ್ಕಳಾದ ದೇವಿಪ್ರಸಾದ್ ಮತ್ತು ಪುತ್ರಿ ಸಂಧ್ಯಾ ಅವರೊಂದಿಗೆ ಪುತ್ತೂರು ಪೇಟೆಯಲ್ಲಿ ಬಾಡಿಗೆ ಮನೆಯಲ್ಲಿ ಬದುಕು ಸಾಗಿಸಬೇಕಾಯಿತು.

ವಿಧಿಯ ಕ್ರೂರ ಆಘಾತ : ಕರಳು ಹಿಂಡುವ ವೈಯಕ್ತಿಕ ದುರಂತ
ರಂಗದ ಮೇಲೆ ಪ್ರತಾಪಶಾಲಿ ಖಳನಾಯಕನಾಗಿ ಲೋಕವನ್ನೇ ಬೆರಗುಗೊಳಿಸುವ ದಾಸಪ್ಪ ರೈ ಅವರ ನಿಜ ಜೀವನದಲ್ಲಿ ವಿಧಿ ಎಸಗಿದ ಕ್ರೂರ ಕರಾಳತೆ ಎದೆ ಒಡೆಯುವಂತಿದೆ.
ಮಗಳು ಸಂಧ್ಯಾ ಅವರು ಕಷ್ಟಪಟ್ಟು ಓದಿ ಸರಕಾರಿ ಶಿಕ್ಷಕಿಯಾಗಿ ಉದ್ಯೋಗ ಪಡೆದು ಮದುವೆಯಾಗಿದ್ದರು. ಆದರೆ ಹೆರಿಗೆಯ ಸಂದರ್ಭದಲ್ಲಿ ಗಂಡುಮಗುವಿಗೆ ಜನ್ಮ ನೀಡಿ ಸಂಧ್ಯಾ ಅವರು ೨೦೦೨ರಲ್ಲಿ ಅಕಾಲಿಕವಾಗಿ ನಿಧನರಾದರು.
ಹೆತ್ತ ಮಗಳ ಅಕಾಲಿಕ ಅಗಲಿಕೆಯ ಆಳವಾದ ನೋವು ಅವರನ್ನು ಒಳಗೊಳಗೇ ದಹಿಸಿತ್ತು. ತೀರಿ ಹೋದ ಮಗಳು ಸಂಧ್ಯಾಳ ಮಗನಾದ ಸಂದೇಶ್ ಕುಮಾರ್ ಅವರನ್ನು ಅಜ್ಜ-ಅಜ್ಜಿಯರ ಹಾರೈಕೆಯಲ್ಲಿ ತಮ್ಮ ಮಡಿಲಲ್ಲಿ ಅಪ್ಪಿಕೊಂಡು ಬೆಳೆಸಿದರು.
ದುರಂತವೆಂದರೆ, ಮುಂದೆ ಕೋವಿಡ್ (ಕೊರೊನಾ) ಕಾಲದಲ್ಲಿ
ಮಡದಿಯಾದ ಚಿತ್ರಾವತಿ ರೈ ಅವರು ನಿಧನರಾದರು.
ಮೊಮ್ಮಗ ಸಂದೇಶ್ ರೈ ಕೂಡ ಆ ನೋವನ್ನು ಅನುಭವಿಸಬೇಕಾಯಿತು.
ರಂಗದ ದೀಪಗಳ ಪ್ರಕಾಶದಲ್ಲಿ ನಗುವನ್ನು ಚೆಲ್ಲುತ್ತಾ, ತೆರೆಮರೆಯಲ್ಲಿ ಮಗಳ ನೆನಪಿಗೆ ಮೌನವಾಗಿ ಕಣ್ಣೀರು ಹಾಕಿದ ಆ ಕರುಳುಬಳ್ಳಿಯ ವೇದನೆ ಎಂಥವರ ಕಣ್ಣಲ್ಲೂ ನೀರು ತರಿಸುತ್ತದೆ.

ಗೌರವ ಹಾಗೂ ಪ್ರಶಸ್ತಿಗಳ ಮಕುಟ ಮತ್ತು ಪ್ರಸ್ತುತ ಬದುಕು:
ಇವರ ಈ ಅನನ್ಯ ಸೇವೆಗೆ ಕರ್ನಾಟಕ ಸರ್ಕಾರದ ೨೦೦೪ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಗೌರವ ಪ್ರಶಸ್ತಿ, ಅಂಬುರುಹ ಯಕ್ಷ ಸದನ ಪ್ರಶಸ್ತಿ, ಭ್ರಮರಿ ಯಕ್ಷಮಣಿ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗಳು ಹಾಗೂ ವಿದೇಶಗಳಾದ ಬೆಹರಿನ್, ಕತಾರ್ ದೇಶಗಳಲ್ಲಿಯೂ ಗೌರವಗಳು ಸಂದಿವೆ.
ಪ್ರಸ್ತುತ ೨೫ರ ಹರೆಯದ, ಉದ್ಯೋಗದಲ್ಲಿರುವ ಮೊಮ್ಮಗ ಸಂದೇಶ್ ರೈಯವರೊಂದಿಗೆ ದಾಸಪ್ಪ ರೈ ಅವರು ಪುತ್ತೂರು ಪೇಟೆಯ ಬಪ್ಪಳಿಕೆಯಲ್ಲಿರುವ ‘ಯಕ್ಷದಾ’ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಮಗ ದೇವಿಪ್ರಸಾದ್ ಹಾಗೂ ಸೊಸೆ, ಇತರ ಮೊಮ್ಮಕ್ಕಳು ಬೆಂಗಳೂರಿನಲ್ಲಿದ್ದುಕೊಂಡು ಆಗಾಗ್ಗೆ ಬಂದು ಇವರ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದಾರೆ.
ವೈಯಕ್ತಿಕ ಜೀವನದ ಅತಿದೊಡ್ಡ ದುರಂತದ ಕಂದಕದಲ್ಲೂ ಕುಸಿದುಹೋಗದೆ, ಕಲೆಯೆಂಬ ದೇವಿಯ ಪಾದಪೀಠದಲ್ಲಿ ತಮ್ಮ ನೋವನ್ನು ಅರ್ಪಿಸಿ ಬದುಕು ಸಾಗಿಸಿದ ಕೆ. ಎಚ್. ದಾಸಪ್ಪ ರೈ ಅವರ ಜೀವನ ಪ್ರತಿಯೊಬ್ಬರಿಗೂ ಕರುಳು ಹಿಂಡುವ ಕಥೆಯಷ್ಟೇ ಅಲ್ಲ, ಅಚಲ ಸಾಧನೆಯ ಮಹಾನ್ ಪ್ರೇರಣೆಯಾಗಿದೆ.
