ವರದಿ/ ಚಿತ್ರ: ಸಂತೋಷ್ ಶೆಟ್ಟಿ ಪೊಳಲಿ

ದುಬೈ: UAE ಗಾಣಿಗ ಫ್ಯಾಮಿಲಿ ನೇತೃತ್ವದಲ್ಲಿ ಆಯೋಜಿಸಲಾಗಿದ್ದ “ಗಾಣಿಗ ಸಂಗಮ 2026” *ಆಟಿದ ಕಮ್ಮೆನ ಗಾಣಿಗೆರೆನ ತಮ್ಮನ* ಕಾರ್ಯಕ್ರಮವು ದುಬೈಯ KNIGHT CASTLE HOTEL ನಲ್ಲಿ ಅದ್ದೂರಿಯಾಗಿ ನಡೆಯಿತು.
ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಹಾಗೂ ಆಟಿ ತಿಂಗಳ ಆಹಾರ ಪದ್ಧತಿಯನ್ನು ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ UAEಯ ವಿವಿಧ ಭಾಗಗಳಿಂದ ಆಗಮಿಸಿದ ಗಾಣಿಗ ಕುಟುಂಬದ ಸದಸ್ಯರು ಉತ್ಸಾಹದಿಂದ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗೋಪಾಲ ಬೋಳಿಯಾರ್ ಅವರು ಮಾತನಾಡಿ, “ತುಳುನಾಡಿನ ವಿಶಿಷ್ಟವಾದ ಆಟಿ ತಿಂಗಳ ಆಹಾರ ಪದ್ಧತಿ ಹಾಗೂ ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಅತ್ಯಂತ ಶ್ಲಾಘನೀಯ. UAE ಗಾಣಿಗ ಫ್ಯಾಮಿಲಿಯ ಈ ಪ್ರಯತ್ನ ಎಲ್ಲರಿಗೂ ಮಾದರಿಯಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಗೋಪಾಲ ಬೋಳಿಯಾರ್ ಅವರು ಮೂಲತಃ ಬೋಳಿಯಾರ್, ಮಂಗಳೂರಿನವರಾಗಿದ್ದು, ಸಿವಿಲ್ ಎಂಜಿನಿಯರ್ ಆಗಿ ವೃತ್ತಿ ಜೀವನ ನಡೆಸಿದ್ದಾರೆ.

ಭಾರತೀಯ ಸೇನೆಯಲ್ಲಿ 1984ರಿಂದ 2019ರವರೆಗೆ ಸುದೀರ್ಘ 35 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಶ್ವಿನ್ ವಾಸು ಪುತ್ತ್ರನ್ ಅವರು ಮೂಲತಃ ಮುಂಬೈನವರಾಗಿದ್ದು, ಕಳೆದ 23 ವರ್ಷಗಳಿಂದ ದುಬೈನಲ್ಲಿ ವಾಸವಾಗಿದ್ದಾರೆ.ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದ ಗೌತಮ್ ಬಂಗೇರ ಅವರು ಭಾರತೀಯ ನಟ, ವೃತ್ತಿಪರ ಕೊರಿಯೋಗ್ರಾಫರ್ ಹಾಗೂ ಮಾಡೆಲ್ ಆಗಿದ್ದು, ದುಬೈನಲ್ಲಿ ನೆಲೆಸಿದ್ದಾರೆ.

ಅವರು Mr. UAE International 2022 ಹಾಗೂ Mr. Handsome 2022 ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ತುಳುನಾಡು ಹಾಗೂ ಮಂಗಳೂರಿನ ಅನಿವಾಸಿ ಸಮುದಾಯದಲ್ಲಿ ಗುರುತಿಸಿಕೊಂಡಿದ್ದಾರೆ.ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಆಟಿ ತಿಂಗಳಸಾಂಪ್ರದಾಯಿಕ ಆಹಾರಗಳ ಪರಿಚಯ ಹಾಗೂ ಮನರಂಜನಾ ಚಟುವಟಿಕೆಗಳು ನಡೆಯುವ ಮೂಲಕ ಗಾಣಿಗ ಸಮುದಾಯದ ಒಗ್ಗಟ್ಟು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಅನಾವರಣಗೊಳಿಸಿತು.
ವಿದೇಶಿ ನೆಲದಲ್ಲಿಯೂ ತುಳುನಾಡಿನ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ UAE ಗಾಣಿಗ ಫ್ಯಾಮಿಲಿ ಹಮ್ಮಿಕೊಂಡಿರುವ ಈ ರೀತಿಯ ಕಾರ್ಯಕ್ರಮಗಳು ಯುವ ಪೀಳಿಗೆಗೆ ನಮ್ಮ ನೆಲ, ನುಡಿ ಮತ್ತು ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ.ಯುವ ಕ್ರಿಕೆಟಿಗ ಮಾಸ್ಟರ್ ವ್ಯಾನ್ ಪುತ್ತ್ರನ್‌ಗೆ ಸನ್ಮಾನಕಾರ್ಯಕ್ರಮದಲ್ಲಿ ಯುವ ಕ್ರಿಕೆಟಿಗ ಮಾಸ್ಟರ್ ವ್ಯಾನ್ ಪುತ್ತ್ರನ್ ಅವರನ್ನು ಅವರ ಗಮನಾರ್ಹ ಕ್ರಿಕೆಟ್ ಸಾಧನೆಗಾಗಿ UAE ಗಾಣಿಗ ಫ್ಯಾಮಿಲಿ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
2026ರ ಏಪ್ರಿಲ್‌ನಲ್ಲಿ ನಡೆದ Emirates Cricket Board Inter-Academy U-12 Tournamentನಲ್ಲಿ ಸುಮಾರು 40 ಕ್ರಿಕೆಟ್ ಅಕಾಡೆಮಿಗಳು ಭಾಗವಹಿಸಿದ್ದವು. ತಮ್ಮ ಅಕಾಡೆಮಿಯ ತಂಡದ ನಾಯಕನಾಗಿ ವ್ಯಾನ್ ಅವರು ತಂಡವನ್ನು ಸಮರ್ಥವಾಗಿ ಮುನ್ನಡೆಸಿ Group A ಟ್ರೋಫಿ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಅವರು Dubai Cricket Council U-13 ವಿಭಾಗಕ್ಕೂ ಆಯ್ಕೆಯಾಗಿದ್ದು, ದುಬೈ ಎಮಿರೇಟ್‌ನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದಾರೆ.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಆಟಿ ತಿಂಗಳ ಸಾಂಪ್ರದಾಯಿಕ ಆಹಾರವನ್ನು ಗಾಣಿಗ ಸಮುದಾಯದ ಎಲ್ಲ ಸದಸ್ಯರು ಒಗ್ಗಟ್ಟಿನಿಂದ ಸಿದ್ಧಪಡಿಸಿ ಪರಿಚಯಿಸಿದರು. ಈ ಮೂಲಕ ತುಳುನಾಡಿನ ವಿಶಿಷ್ಟ ಆಹಾರ ಸಂಸ್ಕೃತಿಯನ್ನು ಯುವ ಪೀಳಿಗೆಗೆ ಪರಿಚಯಿಸಲಾಯಿತು.ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ರೀಡಾ ಆಟಗಳನ್ನು ರಮೇಶ್ ಸಪಲಿಗ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದು, ಮಕ್ಕಳು, ಯುವಕರು ಹಾಗೂ ಕುಟುಂಬ ಸದಸ್ಯರು ಉತ್ಸಾಹದಿಂದ ಭಾಗವಹಿಸಿದರು.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹರ್ಷದ್ ಸಪಲಿಗ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದು, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.ಕಾರ್ಯಕ್ರಮದ ನಿರೂಪಣೆಯನ್ನು ಹಿತೇಶ್ ಕುಮಾರ್ ಗಾಣಿಗ ಕೈಕಂಬ ಹಾಗೂ ಕಾರ್ತಿಕ್ ಗಾಣಿಗ ಅವರು ನಿರ್ವಹಿಸಿದರು. ಸುಪ್ರೀತ್ ಗಾಣಿಗ ಅವರು ವಂದನಾರ್ಪಣೆ ಸಲ್ಲಿಸಿದರು.
ವಿದೇಶಿ ನೆಲದಲ್ಲಿಯೂ ಗಾಣಿಗ ಸಮುದಾಯದ ಒಗ್ಗಟ್ಟು, ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ UAE ಗಾಣಿಗ ಫ್ಯಾಮಿಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಯಿತು.
