28.5 C
ಮಂಗಳೂರು
September 4, 2026
ಬ್ರೇಕಿಂಗ್ ನ್ಯೂಸ್ರಾಜಕೀಯರಾಜ್ಯ/ದೇಶವಾಣಿಜ್ಯ

ಖಾತೆ ಹಂಚಿಕೆ ಬೆನ್ನಲ್ಲೇ ಭುಗಿಲೆದ್ದ ಅಸಮಾಧಾನ – ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರ ರಾಮಲಿಂಗಾ ರೆಡ್ಡಿ?

ಬೆಂಗಳೂರು: ರಾಜ್ಯ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆಯಾದ ಬೆನ್ನಲ್ಲೇ ತೀವ್ರ ಅಸಮಾಧಾನ ಸ್ಫೋಟಗೊಂಡಿದ್ದು, ಹಿರಿಯ ನಾಯಕ ಹಾಗೂ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ಮಾಹಿತಿ ಲಭ್ಯವಾಗಿದೆ.

ತಮಗೆ ಜಲಸಂಪನ್ಮೂಲ ಖಾತೆ ನೀಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅವರು, ಬೆಂಗಳೂರು (Bengaluru) ಅಭಿವೃದ್ಧಿ ಖಾತೆ ನೀಡದಿದ್ದರೆ ಬೆಳಿಗ್ಗೆಯೇ ರಾಜೀನಾಮೆ ಪತ್ರ ಕಳುಹಿಸುವುದಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ (DK Shivakumar) ಅವರಿಗೆ ನೇರ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು ಅಭಿವೃದ್ಧಿ ಖಾತೆಗೆ ಮೊದಲಿನಿಂದಲೂ ಪಟ್ಟು ಹಿಡಿದಿದ್ದ ರಾಮಲಿಂಗಾರೆಡ್ಡಿ ಅವರು, ಮುಖ್ಯಮಂತ್ರಿಗಳ ಕೊಠಡಿಯಲ್ಲೇ ಡಿಕೆಶಿ ಎದುರು ತೀವ್ರ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ. ನಾನು ಅತ್ಯಂತ ಹಿರಿಯನಿದ್ದೇನೆ, ನನಗೆ ಬೆಂಗಳೂರು ಖಾತೆ ಕೊಡುವುದಕ್ಕೆ ನಿಮಗೇನು ಕಷ್ಟ? ಕಳೆದ ಬಾರಿಯೂ ನನಗೆ ಸರಿಯಾದ ಖಾತೆ ನೀಡಲಿಲ್ಲ, ಈಗ ಜಲಸಂಪನ್ಮೂಲ ಖಾತೆಗೂ ನನಗೂ ಏನು ಸಂಬಂಧ? ಬೇರೆ ಎಲ್ಲದಕ್ಕೂ ಬೆಂಗಳೂರಿನಲ್ಲಿ ನಾನು ಬೇಕು, ಆದರೆ ಖಾತೆ ನೀಡುವಾಗ ಮಾತ್ರ ಯಾತಕ್ಕೆ ಈ ತಾರತಮ್ಯ? ಎಂದು ತೀವ್ರವಾಗಿ ಪ್ರಶ್ನಿಸಿದ್ದಾರೆ.

ರಾಮಲಿಂಗಾರೆಡ್ಡಿ ಅವರ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಖಾತೆ ಬದಲಾವಣೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಒಪ್ಪುತ್ತಿಲ್ಲ.

ಇದರಲ್ಲಿ ನನ್ನದೇನೂ ಪಾತ್ರವಿಲ್ಲ, ಎಲ್ಲವನ್ನೂ ಹೈಕಮಾಂಡ್ ತೀರ್ಮಾನಿಸಿದೆ” ಎಂದು ಸಮಜಾಯಿಷಿ ನೀಡಲು ಯತ್ನಿಸಿದ್ದಾರೆ. ಆದರೆ ಈ ಉತ್ತರದಿಂದ ತೃಪ್ತರಾಗದ ರಾಮಲಿಂಗಾರೆಡ್ಡಿ ಅವರು ಸಭೆಯಿಂದ ಮಧ್ಯದಲ್ಲೇ ಎದ್ದು ಹೊರನಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಡಿಕೆಶಿ ಅವರು ಸಚಿವರಿಗೆ ಕರೆ ಮಾಡಿ ಸಮಾಧಾನಪಡಿಸಲು ಯತ್ನಿಸಿದಾಗ ಮತ್ತಷ್ಟು ಬೇಸರ ಹೊರಹಾಕಿದ ರಾಮಲಿಂಗಾರೆಡ್ಡಿ, “ನನಗೆ ಜಲಸಂಪನ್ಮೂಲ ಖಾತೆ ಬೇಡವೇ ಬೇಡ. ಕೊಡುವುದಾದರೆ ಬೆಂಗಳೂರು ಅಭಿವೃದ್ಧಿ ಖಾತೆ ಕೊಡಿ, ಇಲ್ಲವಾದರೆ ಸಚಿವ ಸ್ಥಾನವನ್ನು ನೀವೇ ಇಟ್ಟುಕೊಳ್ಳಿ” ಎಂದು ಖಡಾಖಂಡಿತವಾಗಿ ಹೇಳಿದ್ದಲ್ಲದೆ, “ಬೆಳಿಗ್ಗೆಯೇ ರಾಜೀನಾಮೆ ಪತ್ರ ಕಳುಹಿಸುತ್ತೇನೆ” ಎಂದು ಹೇಳಿ ಫೋನ್ ಕಟ್ ಮಾಡಿದ್ದಾರೆ.

ಮೂಲಗಳ ಪ್ರಕಾರ, ಸಚಿವ ರಾಮಲಿಂಗಾರೆಡ್ಡಿ ಅವರು ಇಂದು ಬೆಳಿಗ್ಗೆ ಮುಖ್ಯಮಂತ್ರಿಗಳಿಗೆ ಅಧಿಕೃತವಾಗಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸುವ ಸಾಧ್ಯತೆಯಿದೆ. ಹಿರಿಯ ನಾಯಕರೊಬ್ಬರು ಖಾತೆ ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ ರಾಜೀನಾಮೆಗೆ ಮುಂದಾಗಿರುವುದು ಸರ್ಕಾರಕ್ಕೆ ಹಾಗೂ ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Related posts

ನೇತ್ರಾವತಿ ಜಲಾನಯನ ಪ್ರದೇಶದ ಕೃಷಿ ಹಳ್ಳದಲ್ಲಿ ಜಲನಾಯಿಗಳ ಹಿಂಡು ಪತ್ತೆ;

Voiceoftulunadu

ಆಳ್ವಾಸ್ ವೈದ್ಯಕೀಯ ಕಾಲೇಜಿಗೆ ತುಳು ಅಲ್ಪಸಂಖ್ಯಾತ ಮಾನ್ಯತೆ : 150 ಎಮ್‌ಬಿಬಿಎಸ್ ಸೀಟುಗಳ ಪೈಕಿ ತುಳು ಭಾಷಿಕ ಅಲ್ಪಸಂಖ್ಯಾತರಿಗೆ 54 ಸೀಟುಗಳು ;

Voiceoftulunadu

ಅಗರಿ ಎಂಟರ್‌ಪ್ರೈಸಸ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಅಫ‌ರ್ ಪ್ರಾರಂಭ ;

Voiceoftulunadu

Leave a Comment