ಬಂಟ್ವಾಳ : ಸಾರ್ವಜನಿಕರು ನೋಡನೋಡುತ್ತಿದ್ದಂತೆಯೇ ಬಸ್ ನಿಲ್ದಾಣಕ್ಕೆ ನುಗ್ಗಿದ ಯುವಕನೊಬ್ಬ, ಯುವತಿಯ ಮೇಲೆ ತಲವಾರಿನಿಂದ ಮನಸೋಇಚ್ಛೆ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಇಲ್ಲಿನ ಬಿ.ಸಿ.ರೋಡ್‌ನ ಕೆಎಸ್‌ಆರ್‌ಟಿಸಿ ಹೊಸ ಬಸ್ ನಿಲ್ದಾಣದ ಆವರಣದಲ್ಲಿ ಗುರುವಾರ ಸಂಜೆ ನಡೆದಿದೆ.
ಕಕ್ಯಪದವು ಸಮೀಪದ ಕೊಡಂಗೆ ಮೈರ ನಿವಾಸಿ ಬಾಳಪ್ಪ ಗೌಡ ಎಂಬುವರ ಪುತ್ರಿ ಲಾವಣ್ಯ (25) ಹತ್ಯೆಯಾದ ದುರ್ದೈವಿ. ಕೃತ್ಯ ಎಸಗಿದ ಆರೋಪಿಯನ್ನು ಆಕೆಯ ದೂರದ ಸಂಬಂಧಿ ಚೇತನ್ ಎಂದು ಗುರುತಿಸಲಾಗಿದೆ.ಏಕಪಕ್ಷೀಯ ಪ್ರೇಮದ ಹಿನ್ನೆಲೆ:ಮೃತ ಲಾವಣ್ಯ ಅವರು ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಂ ಒಂದರಲ್ಲಿ ಶುಶ್ರೂಷಕಿಯಾಗಿ (ನರ್ಸ್) ಕೆಲಸ ಮಾಡುತ್ತಿದ್ದರು. ಆರೋಪಿ ಚೇತನ್ ಈಕೆಯನ್ನು ಏಕಪಕ್ಷೀಯವಾಗಿ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ, ಆತನ ಪ್ರೀತಿಯನ್ನು ಲಾವಣ್ಯ ತಿರಸ್ಕರಿಸಿದ್ದರು. ಇದೇ ದ್ವೇಷದಿಂದ ಆರೋಪಿ ಈ ಘೋರ ಕೃತ್ಯ ಎಸಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಬೆನ್ನಟ್ಟಿ ಹಲ್ಲೆ ನಡೆಸಿದ ಹಂತಕ:ಗುರುವಾರ ಕೆಲಸ ಮುಗಿಸಿ ಮನೆಗೆ ಮರಳುವ ಸಲುವಾಗಿ ಲಾವಣ್ಯ ಅವರು ಬಿ.ಸಿ.ರೋಡ್ ಬಸ್ ನಿಲ್ದಾಣಕ್ಕೆ ಬಂದು, ಅಲ್ಲಿಂದ ಕಕ್ಯಪದವಿಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್ ಹತ್ತಿ ಸೀಟಿನಲ್ಲಿ ಕುಳಿತಿದ್ದರು. ಈ ವೇಳೆ ಐ10 ಕಾರಿನಲ್ಲಿ ಬಂದು ಹೊಂಚು ಹಾಕುತ್ತಿದ್ದ ಆರೋಪಿ ಚೇತನ್, ನೇರವಾಗಿ ಬಸ್ ಒಳಗೆ ನುಗ್ಗಿದ್ದಾನೆ.ಆತನ ಕೈಯಲ್ಲಿದ್ದ ಬ್ಯಾಗ್‌ನಿಂದ ಹರಿತವಾದ ತಲವಾರನ್ನು ಹೊರತೆಗೆಯುವುದನ್ನು ಕಂಡು ಭಯಭೀತಳಾದ ಲಾವಣ್ಯ, ಬಸ್‌ನಿಂದ ಕೆಳಗಿಳಿದು ಪ್ರಾಣ ಉಳಿಸಿಕೊಳ್ಳಲು ಓಡಿದ್ದಾರೆ. ಆದರೆ, ಬೆನ್ನಟ್ಟಿದ ಆರೋಪಿ ಸಾರ್ವಜನಿಕರ ಸಮ್ಮುಖದಲ್ಲೇ ಆಕೆಯ ಕುತ್ತಿಗೆಯ ಹಿಂಭಾಗಕ್ಕೆ ತಲವಾರಿನಿಂದ ಬಲವಾಗಿ ಕಡಿದಿದ್ದಾನೆ.
ಗಂಭೀರವಾಗಿ ಗಾಯಗೊಂಡ ಯುವತಿ ರಕ್ತದ ಮಡುವಿನಲ್ಲಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ.ಕೃತ್ಯ ಎಸಗಿದ ತಕ್ಷಣ ಆರೋಪಿ ತಲವಾರನ್ನು ಬಸ್ ನಿಲ್ದಾಣದಲ್ಲೇ ಎಸೆದು, ರಾಷ್ಟ್ರೀಯ ಹೆದ್ದಾರಿ ಕಡೆಗೆ ಓಡಿ ತಾನು ತಂದಿದ್ದ ಕಾರಿನಲ್ಲಿ ಪರಾರಿಯಾಗಿದ್ದಾನೆ.”ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಲ್ಲಿ ಯುವತಿ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿರುವ ಘಟನೆ ನಡೆದ ತಕ್ಷಣವೇ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾರೆ.
ಆರೋಪಿಯ ಬಂಧನಕ್ಕಾಗಿ ತಕ್ಷಣವೇ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು.”— ಡಾ. ಅರುಣ್ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP), ದಕ್ಷಿಣ ಕನ್ನಡಆಸ್ಪತ್ರೆಯಲ್ಲಿ ಕೊನೆಯುಸಿರು:ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಯುವತಿಯನ್ನು ಬಸ್ ನಿಲ್ದಾಣದಲ್ಲಿದ್ದ ಸಾರ್ವಜನಿಕರು ತಕ್ಷಣವೇ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ತೀವ್ರ ಗಾಯಗೊಂಡಿದ್ದ ಲಾವಣ್ಯ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಹಾಗೂ ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.
ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ:ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP) ಯಶ್ ಕುಮಾರ್ ಶರ್ಮ, ಬಂಟ್ವಾಳ ನಗರ ಠಾಣೆಯ ಇನ್‌ಸ್ಪೆಕ್ಟರ್ ಅನಂತ ಪದ್ಮನಾಭ, ಪಿಎಸ್‌ಐ ಸಂದೀಪ್ ಶೆಟ್ಟಿ ಹಾಗೂ ಸಂಚಾರ ಠಾಣೆಯ ಪಿಎಸ್‌ಐ ಆದರ್ಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸದ್ಯ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
