September 5, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜಕೀಯರಾಜ್ಯ/ದೇಶಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಬದಿಯಡ್ಕದ ‘ಕನ್ನಡ ಭವನ’ ಲೋಕಾರ್ಪಣೆ: ಕೇರಳ ಸಿಎಂಗೂ ಆಹ್ವಾನ, ಗಡಿನಾಡು ಕನ್ನಡಿಗರ ಬೇಡಿಕೆಗಳ ಮನವಿ ಸಲ್ಲಿಕೆ :

ವರದಿ /ಚಿತ್ರ: ರವಿರಾಜ್ ಕಾವೂರು

ಕಾಸರಗೋಡು : ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅನುದಾನ ಬಳಸಿ ಒಟ್ಟು 2 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಸರಗೋಡಿನ ಬದಿಯಡ್ಕದಲ್ಲಿ ನಿರ್ಮಿಸಲಾಗಿರುವ ‘ಡಾ. ಕಯ್ಯಾರ ಕಿಞಣ್ಣ ರೈ ಕನ್ನಡ ಭವನ’ ಉದ್ಘಾಟನೆಗೆ ಸಿದ್ಧಗೊಂಡಿದೆ. ಈ ಭವನದ ಲೋಕಾರ್ಪಣಾ ಕಾರ್ಯಕ್ರಮಕ್ಕೆ ಕೇರಳದ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರಿಗೆ ಅಧಿಕೃತವಾಗಿ ಆಹ್ವಾನ ನೀಡಲಾಗಿದೆ.

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ ಅವರ ನೇತೃತ್ವದ ನಿಯೋಗವು ಕೇರಳ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಆಹ್ವಾನ ಪತ್ರಿಕೆಯನ್ನು ಹಸ್ತಾಂತರಿಸಿತು. ಕರ್ನಾಟಕದ ಮುಖ್ಯಮಂತ್ರಿಗಳ ಜೊತೆಗೂ ಚರ್ಚಿಸಿ, ಇಬ್ಬರೂ ಮುಖ್ಯಮಂತ್ರಿಗಳಿಗೆ ಅನುಕೂಲವಾಗುವ ಸೂಕ್ತ ದಿನಾಂಕವನ್ನು ಶೀಘ್ರದಲ್ಲೇ ನಿಗದಿಪಡಿಸಲಾಗುವುದು ಎಂದು ತಿಳಿಸಲಾಗಿದೆ.

ಕಾಸರಗೋಡು ಕನ್ನಡಿಗರ ಸಮಸ್ಯೆಗಳಿಗೆ ಸಿಎಂ ಭರವಸೆ:ಆಹ್ವಾನ ನೀಡುವ ಸಂದರ್ಭದಲ್ಲಿ ನಿಯೋಗವು ಕಾಸರಗೋಡು ಭಾಗದ ಕನ್ನಡಿಗರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವಂತೆ ಮುಖ್ಯಮಂತ್ರಿಗಳಿಗೆ ಸುದೀರ್ಘ ಮನವಿ ಸಲ್ಲಿಸಿತು. ಕನ್ನಡಿಗರ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲ ಸಂಬಂಧಪಟ್ಟ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡುವುದಾಗಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಈ ವೇಳೆ ಭರವಸೆ ನೀಡಿದ್ದಾರೆ.

ಪ್ರಮುಖವಾಗಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾದ ಮನವಿಯಲ್ಲಿ ಈ ಕೆಳಗಿನ ಪ್ರಮುಖ ಬೇಡಿಕೆಗಳನ್ನು ಪ್ರಸ್ತಾಪಿಸಲಾಗಿದೆ:ಮಲಯಾಳ ಭಾಷಾ ಮಸೂದೆ ವಿನಾಯಿತಿ: ಮಲಯಾಳ ಭಾಷಾ ಮಸೂದೆ-2025 ರ ವ್ಯಾಪ್ತಿಯಿಂದ ಕಾಸರಗೋಡು ಜಿಲ್ಲೆಯನ್ನು ಹೊರತುಪಡಿಸಬೇಕು.ಕನ್ನಡ ನಾಮಫಲಕಗಳು: ರಾಷ್ಟ್ರೀಯ ಹೆದ್ದಾರಿ, ರೈಲ್ವೆ ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕಗಳನ್ನು ಅಳವಡಿಸಬೇಕು.ಉದ್ಯೋಗ ಮೀಸಲಾತಿ: ಕೇರಳದ ಸರ್ಕಾರಿ ನೇಮಕಾತಿಗಳಲ್ಲಿ ಭಾಷಾ ಅಲ್ಪಸಂಖ್ಯಾತರಿಗೆ ನಿಯಮಾನುಸಾರ ಸಿಗಬೇಕಾದ ಮೀಸಲಾತಿ ಸೌಲಭ್ಯಗಳನ್ನು ಒದಗಿಸಬೇಕು.

ದಾಖಲೆಗಳಲ್ಲಿ ಕನ್ನಡ ಬಳಕೆ: ಪಡಿತರ ಚೀಟಿ (ರೇಷನ್ ಕಾರ್ಡ್) ಹಾಗೂ ಮತದಾರರ ಗುರುತಿನ ಚೀಟಿಗಳಲ್ಲಿ ಕನ್ನಡ ಭಾಷೆಯನ್ನು ಬಳಸಬೇಕು.ಕನ್ನಡ ಶಿಕ್ಷಕರ ನೇಮಕ: ಕಾಸರಗೋಡು ಜಿಲ್ಲೆಯ ಶಾಲೆಗಳಲ್ಲಿ ಖಾಲಿ ಇರುವ ಕನ್ನಡ ಶಿಕ್ಷಕರ ಹುದ್ದೆಗಳನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕು.

ಈ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ, ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಕೇರಳ ಗಡಿನಾಡ ಘಟಕದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಪ್ರಾಧಿಕಾರದ ಸದಸ್ಯರಾದ ಎ.ಆರ್. ಸುಬ್ಬಯ್ಯಕಟ್ಟೆ, ಡಾ. ಪ್ರಸನ್ನ ರೈ, ಮಾಹಿನ್ ಕೇಳೋಟ್, ಡಾ. ಮಲ್ಲಿಕಾರ್ಜುನ ನಾಸಿ ಹಾಗೂ ಶರೀನ್ ಮಹಮ್ಮದ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

Related posts

ಬಂಟ್ವಾಳ :ಆ.30ರಂದು ನಾರಾಯಣಗುರು ವೃತ್ತ ಲೋಕಾರ್ಪಣೆ. ಗುರು ಪೂಜೋತ್ಸವ, ವಿದ್ಯಾರ್ಥಿ ವೇತನ ವಿತರಣೆ ಹಾಗೂ ‘ದೇಯಿ ಬೈದೆತಿ’ಚಲನಚಿತ್ರ ಪ್ರದರ್ಶನ;

Voiceoftulunadu

ಅಗ್ನಿಶಾಮಕ ದಳಕ್ಕೆ ಹೈಟೆಕ್ ಕಾಯಕಲ್ಪ: ಸುರಕ್ಷತೆಯ ಹೊಸ ಮನ್ವಂತರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಮುನ್ನುಡಿ;

Voiceoftulunadu

ಉಚ್ಚಿಲ : ಕಸಾಪ ದಿಂದ ಪ್ರತಿಭಾ ಪುರಸ್ಕಾರ, ರ‍್ಯಾಂಕ್ ವಿಜೇತರಿಗೆ ಅಭಿನಂದನೆ;

Voiceoftulunadu

Leave a Comment