ಮೈಸೂರು : ಕೌಟುಂಬಿಕ ಕಲಹದ ಬೇಗುದಿಗೆ ಹಸನ್ಮುಖಿ ಕುಟುಂಬವೊಂದು ನೆಲೆಸಮಯವಾದ ದಾರುಣ, ಮನಕಲಕುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ನಡೆದಿದೆ. ಹತಾಶೆ ಹಾಗೂ ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಮುಗ್ಧ ಮಕ್ಕಳ ಬಾಯಿ ಹಾಗೂ ಮೂಗಿಗೆ ಪ್ಲಾಸ್ಟರ್ ಅಂಟಿಸಿ, ಉಸಿರುಗಟ್ಟಿಸಿ ಭೀಕರವಾಗಿ ಹತ್ಯೆ ಮಾಡಿದ್ದಾನೆ.
ಬಳಿಕ ತಾನೂ ಸಹ ನೇಣಿಗೆ ಶರಣಾಗಿ ಜೀವ ತೊರೆದಿದ್ದಾನೆ.ಮನೆತುಂಬ ನಗುತ್ತಿದ್ದ ಕುಟುಂಬವೊಂದು ದಿಢೀರನೇ ಶವವಾಗಿ ಬಿದ್ದಿರುವುದನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.ಮೃತದೇಹಗಳ ಗುರುತು ಪತ್ತೆ:ಹುಣಸೂರಿನ ಮಾರುತಿ ಬಡಾವಣೆಯ ಬಾಡಿಗೆ ಮನೆಯೊಂದರಲ್ಲಿ ಈ ರಕ್ತಸಿಕ್ತ ಕೃತ್ಯ ನಡೆದಿದ್ದು, ಮೃತರನ್ನು ಹರೀಶ್(ಗಂಡ ), ನಿಶ್ಚಿತಾ (ಪತ್ನಿ) ನೆಕ್ಸಾ (ಮಗಳು), ರಕ್ಷಾ ( ಮಗು) ಎಂದು ಗುರುತಿಸಲಾಗಿದೆ.
ಕೊಲೆಯ ಭೀಕರತೆ ಕಂಡು ಪೊಲೀಸರೇ ಸೈಲೆಂಟ್!ಪ್ರಾಥಮಿಕ ಮಾಹಿತಿಯ ಪ್ರಕಾರ, ಘಟನೆ ನಡೆದ ರೀತಿಯೇ ಅತ್ಯಂತ ಅಮಾನುಷವಾಗಿದೆ. ಪತ್ನಿ ನಿಶ್ಚಿತಾ ಹಾಗೂ ಮುಗ್ಧ ಮಕ್ಕಳಾದ ನೆಕ್ಸಾ ಮತ್ತು ರಕ್ಷಾ ಅವರ ಮುಖ, ಬಾಯಿ ಮತ್ತು ಮೂಗಿನ ಭಾಗಕ್ಕೆ ಪ್ಲಾಸ್ಟರ್‌ನಿಂದ ಗಟ್ಟಿಯಾಗಿ ಸುತ್ತಿ ಅಂಟಿಸಲಾಗಿತ್ತು. ಚೀರಿಕೊಳ್ಳಲು ಅಥವಾ ಉಸಿರಾಡಲು ಸಾಧ್ಯವಾಗದಂತೆ ಮಾಡಿ ಕ್ರೂರವಾಗಿ ಕೊ*ಲೆ ಮಾಡಲಾಗಿದೆ.
ಕುಟುಂಬದ ಮೂವರನ್ನೂ ಹತ್ಯೆ ಮಾಡಿದ ಬಳಿಕ, ಆರೋಪಿ ಹರೀಶ್ ತಾನೂ ಸಹ ಸಾವಿನ ದಾರಿ ಹಿಡಿದಿದ್ದಾನೆ.ಶಾಲೆಗೆ ಹೋಗಿ ಆಟವಾಡಿಕೊಂಡು ಖುಷಿಯಾಗಿದ್ದ ಮುಗ್ಧ ಕಂದಮ್ಮಗಳ ದಾರುಣ ಅಂತ್ಯವನ್ನು ಕಂಡು ಸ್ಥಳೀಯರ ಕಣ್ಣುಗಳು ತೇವಗೊಂಡಿವೆ.ಘಟನಾ ಸ್ಥಳಕ್ಕೆ SP ಮಲ್ಲಿಕಾರ್ಜುನ ಬಾಲದಂಡಿ ಭೇಟಿ:ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.ಪೊಲೀಸರ ಪ್ರತಿಕ್ರಿಯೆ:”ಪ್ರಾಥಮಿಕ ತನಿಖೆಯಲ್ಲಿ ಕೌಟುಂಬಿಕ ಕಲಹವೇ ಈ ದುರಂತಕ್ಕೆ ಮುಖ್ಯ ಕಾರಣವಿರಬಹುದು ಎಂದು ಶಂಕಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡು, ಘಟನೆಗೆ ಸಂಬಂಧಿಸಿದಂತೆ ಪ್ರತಿಯೊಂದು ಆಯಾಮದಲ್ಲೂ ಹೆಚ್ಚಿನ ತನಿಖೆ ಕೈಗೊಳ್ಳುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ಘಟನೆಯಿಂದ ಹುಣಸೂರಿನ ಮಾರುತಿ ಬಡಾವಣೆಯಲ್ಲಿ ಶೋಕಸಾಗರ ಆವರಿಸಿದ್ದು, ಕೌಟುಂಬಿಕ ಸಮಸ್ಯೆಗೆ ಮುಗ್ಧ ಮಕ್ಕಳನ್ನು ಬಲಿಪಡೆದ ಘಟನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
