27 C
ಮಂಗಳೂರು
July 6, 2026
Uncategorizedಆರೋಗ್ಯಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಕ್ರೀಡೆಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶಸ್ಥಳೀಯ/ಪ್ರಾದೇಶಿಕ ಸುದ್ದಿ

ಧರ್ಮಸ್ಥಳದಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ:ಕುಮಾರಿ ಚಿನ್ಮಯಿ ಬೆಂಗಳೂರಿಗೆ ‘ಯೋಗರತ್ನ’ ಪ್ರಶಸ್ತಿ ಪ್ರದಾನ;

ವರದಿ /ಚಿತ್ರ:ರೋನ್ಸ್ ಬಂಟ್ವಾಳ

ಮುಂಬೈ (ಉಜಿರೆ), ಜೂನ್ 21: ನಮ್ಮ ಸನಾತನ ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ವಿಶ್ವಕ್ಕೆ ಭಾರತ ನೀಡಿದ ಅಮೂಲ್ಯ ಕೊಡುಗೆ ‘ಯೋಗ’ ಆಗಿದ್ದು, ಜಾಗತಿಕ ಮಟ್ಟದಲ್ಲಿ ಇದಕ್ಕೆ ಹೆಚ್ಚಿನ ಪ್ರಚಾರ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಹೇಳಿದರು.ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆ ನೀಡಿದರು.

ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ನಾಯಕ್ ಅವರು, ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ರಕ್ಷಣೆಗೆ ಯೋಗ ಸಹಕಾರಿಯಾಗಿದೆ ಎಂದರು.ಆಧುನಿಕ ಜೀವನಶೈಲಿ, ಆಹಾರ-ವಿಹಾರ ವಿಧಾನಗಳಿಂದಾಗಿ ನಾವು ಅನೇಕ ಒತ್ತಡಗಳಿಗೆ ಒಳಗಾಗುತ್ತಿದ್ದೇವೆ. ಸುಖ-ಶಾಂತಿ ಮತ್ತು ನೆಮ್ಮದಿಯ ಜೀವನಕ್ಕೆ ಯೋಗ ಸಹಕಾರಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಮಟ್ಟದಲ್ಲಿ ಯೋಗಕ್ಕೆ ಪ್ರಚಾರ ನೀಡುವಲ್ಲಿ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಭಗವಾನ್ ಬಿ.ಸಿ. ಆನ್‌ಲೈನ್ ಮೂಲಕ ಸಂದೇಶ ನೀಡಿ, ಯೋಗಾಭ್ಯಾಸ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ಸಲಹೆ ನೀಡಿದರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ 400 ಕಾಲೇಜುಗಳಲ್ಲಿ 45,000 ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡುತ್ತಿದ್ದಾರೆ ಎಂದರು.

default

ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಪಠ್ಯಕ್ರಮ ಅಭಿವೃದ್ಧಿ ಕೇಂದ್ರದ ಪ್ರಭಾರ ನಿರ್ದೇಶಕ ಡಾ. ಷಣ್ಮುಖಪ್ಪ ಮಾತನಾಡಿ, ಉಜಿರೆಯ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಆಶ್ರಯದಲ್ಲಿ ವರ್ಷಕ್ಕೊಮ್ಮೆ ಗ್ರಾಮವನ್ನು ದತ್ತು ತೆಗೆದುಕೊಂಡು ಗ್ರಾಮೀಣ ಪ್ರದೇಶದ ಜನರಿಗೆ ಯೋಗಾಭ್ಯಾಸದ ತರಬೇತಿ ನೀಡಬೇಕು ಎಂದು ಸಲಹೆ ನೀಡಿದರು.ರಾಜ್ಯದಲ್ಲಿ 18 ಯೋಗ ವಿಜ್ಞಾನ ಮತ್ತು ಪ್ರಕೃತಿ ಚಿಕಿತ್ಸಾ ಪದವಿ ಕಾಲೇಜುಗಳಿದ್ದು, ಉಜಿರೆ ಕಾಲೇಜು ಹಾಗೂ ಶಾಂತಿವನ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಸೇವೆ ಮತ್ತು ಸಾಧನೆಯನ್ನು ಅಭಿನಂದಿಸಿದರು.

ಉಜಿರೆ ಕಾಲೇಜಿನಲ್ಲಿ ಅನಸ್ಥೀಷಿಯಾ ಮತ್ತು ಅಕ್ಯುಪಂಕ್ಚರ್‌ನಲ್ಲಿ ಸ್ನಾತಕೋತ್ತರ ಪದವಿ ತರಗತಿಗಳಿಗೆ ಅನುಮತಿ ಕೋರಿ ಸಲ್ಲಿಸಿರುವ ಪ್ರಸ್ತಾವನೆಗೆ ಶೀಘ್ರದಲ್ಲೇ ಅನುಮೋದನೆ ದೊರೆಯುವ ನಿರೀಕ್ಷೆಯಿದೆ ಎಂದರು.ಈ ಸಂದರ್ಭದಲ್ಲಿ ಬೆಂಗಳೂರಿನ ಕುಮಾರಿ ಚಿನ್ಮಯಿ ಅವರಿಗೆ ‘ಯೋಗರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಶಾಂತಿವನ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ ವರದಿ ಮಂಡಿಸಿ, ಶಾಲಾ-ಕಾಲೇಜುಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಯೋಗ ಶಿಬಿರ ನಡೆಸಿ ಆರೋಗ್ಯ ರಕ್ಷಣೆಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು. ಎಸ್‌ಡಿಎಂ ಯೋಗ ವಿಜ್ಞಾನ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಡಾ. ಅನನ್ಯ ಕಾರ್ಯಕ್ರಮ ನಿರ್ವಹಿಸಿದರು. ಉಪಪ್ರಾಂಶುಪಾಲೆ ಡಾ. ಸುಜಾತ ಕೆ.ಜೆ. ಧನ್ಯವಾದ ಸಲ್ಲಿಸಿದರು.ಚಿತ್ರ: ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಶುಭಾಶಯ ಸಂದೇಶ ನೀಡಿದರು.

Related posts

ಅಕ್ಷರ ತಪಸ್ವಿನಿ, ಕ್ರೀಡಾಂಗಣದ ಜಿಂಕೆ: ಮಣ್ಣಿನ ಮಗಳು ಗೀತಾ ಎ. ಶೆಟ್ಟಿ ಅವರ ಯಶೋಗಾಥೆ”

voiceoftulunadu

ಜಿ ಎಸ್ ಬಿ ಸಮಾಜ ಹಿತ ರಕ್ಷಣಾ ವೇದಿಕೆಯಿಂದ ವಯೋವಂದನ ಆತಿಥ್ಯ ಗೃಹ ಯೋಜನೆವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್;

Voiceoftulunadu

ಕಟಪಾಡಿ : ಫುಲ್ ಟ್ಯಾಂಕ್ ಡೀಸೆಲ್ ತುಂಬಿಸಿ ಹಣ ನೀಡದೆ ಪರಾರಿಯಾದ ಕಾರು ಚಾಲಕ ಬಿಳಿ ಬಣ್ಣದ ಫೋರ್ಡ್ ಇಕೋಸ್ಪೋರ್ಟ್ಸ್ ಕಾರಿನಲ್ಲಿ ಬಂದ ಮೂವರು ಯುವಕರು;

Voiceoftulunadu

Leave a Comment