ವರದಿ/ ಚಿತ್ರ :ಈ ಮೀಡಿಯಾ
ಉಡುಪಿ : ಮನೆಯಲ್ಲಿ ಪೂಜಾ ಮನೆಇದ್ದ ಹಾಗೆ ಪ್ರತಿ ಮನೆಯಲ್ಲಿಯೂ ಕೂಡ ಒಂದು ಸಣ್ಣ ಗ್ರಂಥಾಲಯ ಇರಬೇಕು. ಪುಸ್ತಕದ ಸಂಸ್ಕೃತಿ ಮಸ್ತಕದ ಸಂಸ್ಕೃತಿ ಆಗಬೇಕಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇದರ ಅಧ್ಯಕ್ಷ ಡಾ. ಮಾನಸ ಹೇಳಿದರು.ಅವರು ಇಂದು ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಅಭಿಯಾನದ ಅನುಷ್ಠಾನ ಸಮಿತಿ ವತಿಯಿಂದ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಡೆದ ಕೊಡವೂರಿನ ಭಾಮಾ ನಿಲಯದಲ್ಲಿ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬದುಕುವ ಕಲೆ ಪುಸ್ತಕ ಹೇಳಿಕೊಡುತ್ತದೆ ಪುಸ್ತಕವನ್ನು ಪ್ರೀತಿಸಿದಾಗ ಬದುಕು ಮತ್ತಷ್ಟು ಸುಂದರವಾಗುತ್ತದೆ. ಈ ನಿಟ್ಟಿನಲ್ಲಿ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.ಕಾಲೇಜು ವಿದ್ಯಾರ್ಥಿಗಳಿಗೆ ತಿಂಗಳ ತಿರುಳು ಕಾರ್ಯಕ್ರಮದ ಮೂಲಕ ಅನೇಕ ಸಾಹಿತಿಗಳ ಪುಸ್ತಕ ಪರಿಚಯ ಮಾಡಿಕೊಡಲಾಗುತ್ತಿದೆ ಎಂದು ಹೇಳಿದ ಅವರು, ಭಕ್ತಿಯ ಭವನ ಭಯದ ಭವನವಾಗದೆ, ಜ್ಞಾನದ ಭವನವಾಗಬೇಕು ಎಂದರು.
ಮುಖ್ಯ ಅತಿಥಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಅನೇಕ ವೈವಿಧ್ಯಪೂರ್ಣ ಕಾರ್ಯಕ್ರಮಗಳಿಂದ ರಾಜ್ಯದ ಜನರ ಮನೆ ಮಾತಾಗಿದೆ. ಇಂತಹ ಅತ್ಯುತ್ತಮ ಕಾರ್ಯ ನಡೆಸಿದ ಎಲ್ಲ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಅತಿಥಿಗಳನ್ನು ಗೌರವಿಸಲಾಯಿತು.
ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಪತ್ರಕರ್ತಜನಾರ್ದನ್ ಕೊಡವೂರು ಹಾಗು ಲೇಖಕಿ ಪೂರ್ಣಿಮಾ ಜನಾರ್ದನ್ ದಂಪತಿಗಳಿಗೆ ಪ್ರಮಾಣ ಪತ್ರದೊಂದಿಗೆ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಗಾಂಧಿ ಆಸ್ಪತ್ರೆಯ ಸಂಸ್ಥಾಪಕ ಎಂ. ಹರೀಶ್ಚಂದ್ರ, ಡಾ. ರಾಜಲಕ್ಷ್ಮೀ, ಮೋಹನ್ ಉಡುಪ ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷ ಮತ್ತು ಮನೆಗೊಂದು ಗ್ರಂಥಾಲಯ ಅಭಿಯಾನದ ಜಿಲ್ಲಾ ಸಹ ಸಂಚಾಲಕ ರವಿರಾಜ್ ಹೆಚ್ ಪಿ ಪ್ರಸ್ತಾವನೆ ಗೈದರು. ಜನಾರ್ದನ್ ಕೊಡವೂರು ಸ್ವಾಗತಿಸಿದರು.ಅಭಿಯಾನದ ಜಿಲ್ಲಾ ಸದಸ್ಯ ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿದರು. ದೀಪ ಚಂದ್ರಕಾಂತ್ ಪ್ರಾರ್ಥಿಸಿದರು.
