ವರದಿ /ಚಿತ್ರ:ರೋಶನ್ ನೆಲ್ಲಿಗುಡ್ಡೆ
ಮೂಲ್ಕಿ:ಇಲ್ಲಿನ ಬಜಪೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಿನ್ನಿಪದವು ಪರಿಶಿಷ್ನ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಲೋನಿಯಲ್ಲಿರುವ ಕೆಲವು ಮನೆಗಳು ಭಾರೀ ಮಳೆ ಹಾಗೂ ಬಿರುಗಾಳಿಯಿಂದ ಹಾನಿಗೊಳಗಾಗಿದ್ದು, ಯಾವುದೇ ಕ್ಷಣದಲ್ಲಿ ಕುಸಿಯುವ ಅಪಾಯ ಎದುರಿಸುತ್ತಿವೆ.

ಈ ಹಿನ್ನೆಲೆಯಲ್ಲಿ ಅಲ್ಲಿರುವ ಕುಟುಂಬಗಳನ್ನು ತಕ್ಷಣ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ, ಹಾನಿಗೊಳಗಾದ ಮನೆಗಳ ದುರಸ್ತಿ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದೆ.
ಈ ಬಗ್ಗೆ ವೇದಿಕೆಯ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿಯನ್ನು ಬಜ್ಪೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಸಂತ್ರಸ್ತ ಕುಟುಂಬಗಳಿಗೆ ತುರ್ತು ನೆರವು ಒದಗಿಸಿ, ಮನೆಗಳ ದುರಸ್ತಿ ಕಾರ್ಯವನ್ನು ಆದ್ಯತೆಯ ಮೇರೆಗೆ ಆರಂಭಿಸುವಂತೆ ಮನವಿ ಮಾಡಿದ್ದಾರೆ.ನಿವಾಸಿಗಳಾದ ಮಹೇಶ್, ದಿವ್ಯ, ಪುಷ್ಪ ಹಾಗೂ ಹೊನ್ನಯ್ಯ ಅವರ ಮನೆಗಳು ದುಸ್ಥಿತಿಯಲ್ಲಿದ್ದು ತಾತ್ಕಾಲಿಕವಾಗಿ ಪ್ಲಾಸ್ಟಿಕ್ ಶೀಟ್ನ ಹೊದಿಕೆಯನ್ನು ಹಾಕಲಾಗಿದೆ.

ಮನೆಯ ಮೇಲ್ಛಾವಣಿಗಳು ಶೀಥಿಲಾವಸ್ಥೆಯಲ್ಲಿದೆ, ಶೀಘ್ರವಾಗಿ ಇದರ ಬಗ್ಗೆ ಅಗತ್ಯ ನೆರವು ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ವೇದಿಕೆಯು ಆಗ್ರಹಿಸಿದೆ. ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಸಿರಾಜ್ ಬಜ್ಪೆ, ದಲಿತ ಸಂಘದ ವಸಂತ್, ನಿಸಾರ್ ಕರಾವಳಿ, ಖಾದರ್ ಜರಿ, ನಜೀರ್ ಕಿನ್ನಿಪದವು, ಹಫೀಜ್ ಕೊಳಂಬೆ ಹಾಗೂ ನಾಗರಿಕರು ಇದ್ದರು.
